×
Ad

ಬಿಬಿಎಂಪಿ ಬಜೆಟ್ ಗಾತ್ರಕ್ಕೆ ಸರಕಾರ ಕತ್ತರಿ

Update: 2019-04-26 22:58 IST

ಬೆಂಗಳೂರು, ಎ.26: ಬಿಬಿಎಂಪಿಯ 2019-20 ನೇ ಸಾಲಿನ 13 ಸಾವಿರ ಕೋಟಿ ರೂ. ಆಯವ್ಯಯವನ್ನು ಸರಕಾರದ ಹಣಕಾಸು ಇಲಾಖೆ ಅಂಗೀಕರಿಸದೆ 9,000 ಕೋಟಿಗೆ ನಿಗದಿಪಡಿಸಿ ಪಾಲಿಕೆಗೆ ವಾಪಸ್ಸು ಕಳುಹಿಸಲಿದೆ.

ಕಳೆದ 3 ತಿಂಗಳ ಹಿಂದೆ ಬಿಬಿಎಂಪಿ 13 ಸಾವಿರ ಕೋಟಿ ರೂ. ಆಯವ್ಯಯವನ್ನು ಮಂಡನೆ ಮಾಡಿತು. ನಂತರ ಸರಕಾರದ ಒಪ್ಪಿಗೆಗೆ ಕಳುಹಿಸಿಕೊಟ್ಟಿತ್ತು. ಈ ಮಧ್ಯೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ 9,000 ಕೋಟಿ ರೂ.ಗಿಂತ ಹೆಚ್ಚಿನ ಮುಂಗಡ ಪತ್ರಕ್ಕೆ ಅನುಮೋದನೆ ನೀಡಿದರೆ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂಬ ವರದಿಯನ್ನು ನೀಡಿದ್ದರು.

ಇದೀಗ ಹಣಕಾಸು ಇಲಾಖೆ 13 ಸಾವಿರ ಕೋಟಿ ರೂ. ಆಯವ್ಯಯವನ್ನು 9,000 ಕೋಟಿ ರೂ.ಗೆ ನಿಗದಿಪಡಿಸಿದೆ. ಅವರದೇ ಪಕ್ಷವಾದ ಕಾಂಗ್ರೆಸ್, ಜೆಡಿಎಸ್ ಸರಕಾರವೇ ತಿರಸ್ಕರಿಸಿರುವುದು ಪಾಲಿಕೆ ಆಡಳಿತ ಪಕ್ಷಕ್ಕೆ ತೀವ್ರ ಹಿನ್ನೆಡೆ ಉಂಟಾಗಿದೆ.

ಸರಕಾರ ಬಜೆಟ್ ಆಯವ್ಯಯವನ್ನು 4,000 ಕೋಟಿಯಷ್ಟು ಕಡಿಮೆ ಮಾಡಿರುವುದರಿಂದ ಇದೀಗ 13,000 ಕೋಟಿ ಆಯವ್ಯಯವನ್ನು 9,000 ಕೋಟಿಗೆ ಸೀಮಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಕೌನ್ಸಿಲ್ ಸಭೆಯ ಒಪ್ಪಿಗೆಯನ್ನು ಪಡೆಯಬೇಕಾಗಿದೆ. ಮತ್ತೊಮ್ಮೆ ಆಯವ್ಯಯವನ್ನು ಮಂಡಿಸಬೇಕಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಪಾಲಿಕೆ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News