ಮ್ಯಾನ್‌ಹೋಲ್‌ಗೆ ಬಿದ್ದ ಉದ್ಯಮಿ ಪವಾಡಸದೃಶ ಪಾರು!

Update: 2019-04-27 03:55 GMT

ಮುಂಬೈ, ಎ.27: ದೇಶದ ಅಗ್ರಗಣ್ಯ ಫಂಡ್ ಮ್ಯಾನೇಜರ್‌ಗಳಲ್ಲಿ ಒಬ್ಬರೆನಿಸಿದ ಹೆಲಿಯೋಸ್ ಕ್ಯಾಪಿಟಲ್‌ನ ಸಂಸ್ಥಾಪಕ ಸಮೀರ್ ಅರೋರಾ ದೇಶದ ವಾಣಿಜ್ಯ ರಾಜಧಾನಿಯಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು, ಪವಾಡಸದೃಶವಾಗಿ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ "ಪುನರ್ಜನ್ಮ"ದ ಕಥೆಯನ್ನು ಅರೋರಾ ಟ್ವಿಟ್ಟರ್‌ನಲ್ಲಿ ಬಿಚ್ಚಿಟ್ಟಿದ್ದಾರೆ.

ತಮ್ಮ ಭಯಾನಕ ಅನುಭವವನ್ನು ಸರಣಿ ಟ್ವೀಟ್‌ಗಳಲ್ಲಿ ಬಿಚ್ಚಿಟ್ಟಿರುವ ಈ ಹಣಕಾಸು ಉದ್ಯಮಿ "ಯೆ ಹೆ ಬಾಂಬೆ ಮೇರಿ ಜಾನ್" ಎಂಬ ಮುಹಮ್ಮದ್ ರಫಿಯವರ ಹಾಡನ್ನು ಉಲ್ಲೇಖಿಸಿದ್ದಾರೆ. ಈ ದೊಡ್ಡ ನಗರ ನನ್ನ ಜೀವವನ್ನು ಬಹುತೇಕ ಬಲಿ ಪಡೆದಿತ್ತು ಎಂದು ಬಣ್ಣಿಸಿದ್ದಾರೆ.

ಕೇಂದ್ರ ಮುಂಬೈನ ಲೋವರ್ ಪರೇಲ್ ಟೋನಿ ಪಿಯೋನೆಕ್ಸ್ ಮಿಲ್ಸ್ ಮಾಲ್‌ನ ಬಳಿಯ ತೆರೆದ ಮ್ಯಾನ್‌ಹೋಲ್‌ಗೆ ಅರೋರಾ ಬಿದ್ದ ಘಟನೆಯನ್ನು ಅವರ ಸ್ನೇಹಿತ ನೀರಜ್ ಬಾತ್ರಾ ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಬಹಿರಂಗಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸುವ ಟ್ವೀಟ್‌ನಲ್ಲಿ ಅರೋರಾ, "ನಾನು ಅದೃಶ್ಯನಾಗುತ್ತಿದ್ದ ಕ್ಷಣದಲ್ಲಿ ಪ್ರತಿಬಿಂಬ ಹಾಗೂ ಮ್ಯಾನ್‌ಹೋಲ್‌ನ ಗಾತ್ರ ನನಗೆ ಎರಡನೇ ಜೀವ ಕೊಟ್ಟಿತು" ಎಂದು ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ 4.11 ಲಕ್ಷ ಅನುಯಾಯಿಗಳನ್ನು ಹೊಂದಿರುವ ಅರೋರಾ, "ಸಣ್ಣ ಪುಟ್ಟ ತರಚು ಗಾಯಗಳೊಂದಿಗೆ ಮೇಲೆತ್ತುವ ಮುನ್ನ ಎದೆಮಟ್ಟದವರೆಗೂ ಮ್ಯಾನ್‌ಹೋಲ್‌ನ ಒಳಕ್ಕೆ ಬಿದ್ದಿದ್ದೆ" ಎಂದು ಹೇಳಿಕೊಂಡಿದ್ದಾರೆ. ಚುಚ್ಚುಮದ್ದು ಪಡೆದ ಬಳಿಕ ಇದೀಗ ಆರೋಗ್ಯದಿಂದ ಇರುವುದಾಗಿ ವಿವರಿಸಿದ್ದಾರೆ.

"ಏಷ್ಯಾದ ಶ್ರೀಮಂತ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಬಿಎಂಸಿಗೆ ನನ್ನ ಸ್ಯಾಮ್‌ಸಂಗ್ ಮೊಬೈಲ್ ಚರಂಡಿಯಲ್ಲಿ ಕಂಡುಬಂದಲ್ಲಿ, ನನ್ನ ದೂರಿನ ಜತೆಗೆ ಅದನ್ನು ಇಟ್ಟುಕೊಳ್ಳಲಿ" ಎಂದು ಮತ್ತೊಂದು ಟ್ವೀಟ್‌ನಲ್ಲಿ ಅರೋರಾ ಹೇಳಿದ್ದಾರೆ.

2017ರ ಆಗಸ್ಟ್‌ನಲ್ಲಿ ಡಾ.ದೀಪಕ್ ಅಮರಾಪುರಕರ್ ಎಂಬ ಜಠರರೋಗ ತಜ್ಞ ವೈದ್ಯರು ಮ್ಯಾನ್‌ಹೋಲ್‌ಗೆ ಬಿದ್ದು ಜೀವ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News