×
Ad

ದೇಶದಲ್ಲೇ ಪ್ರಥಮ ಅತ್ಯಾಧುನಿಕ ಪ್ರಾಣಿ ಲೇಸರ್ ಥೆರಪಿ ಕೇಂದ್ರಕ್ಕೆ ಚಾಲನೆ

Update: 2019-04-27 22:07 IST

ಬೆಂಗಳೂರು, ಎ.27: ಪಶುವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಲ್ಯಾಬ್ ಇಂಡಿಯಾ ಹೆಲ್ತ್ ಕೇರ್ ಸಂಸ್ಥೆ ಸಹಯೋಗದೊಂದಿಗೆ ದೇಶದಲ್ಲೇ ಮೊದಲ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಪ್ರಾಣಿಗಳ ಲೇಸರ್ ಥೆರಪಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪಶು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಡಿ. ನಾರಾಯಣಸ್ವಾಮಿ ತಿಳಿಸಿದರು.

ಶನಿವಾರ ಹೆಬ್ಬಾಳದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿರುವ ಲೇಸರ್ ಥೆರಪಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಶು ವೈದಕೀಯ ದಿನದ ನೆನಪಿನಾರ್ಥವಾಗಿ ಸುಮಾರು 25 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಥೆರಪಿ ಕೇಂದ್ರದಲ್ಲಿ ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಎಲ್ಲ ಜಾತಿಯ ಪ್ರಾಣಿಗಳಿಗೆ ಅಗತ್ಯವಿರುವ ಲೇಸರ್ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ರೈತರಿಗೆ ಪಶು ವೈದ್ಯಕೀಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಪಶು ವೈದ್ಯಕೀಯ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಬಾರಿ ಲಸಿಕೆಯ ಮಹತ್ವ ಎಂಬ ವಾಕ್ಯದೊಂದಿಗೆ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ರೈತರಿಗೆ ಪ್ರಾಣಿಗಳಿಗೆ ತಗಲುವ ರೋಗಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವುಗಳಿಗೆ ಲಸಿಕೆ, ಸೇರಿದಂತೆ ಅಗತ್ಯ ಚಿಕಿತ್ಸೆ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಉಚಿತ ಥೆರಪಿ: ಪ್ರಾಣಿಗಳಿಗೆ ದೀರ್ಘಕಾಲ ಬಾಧಿಸುವ ರೋಗಗಳಿಂದ ಬಳಲುತ್ತಿರುತ್ತವೆ. ಇವುಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಭಾರತದಲ್ಲೆ ಮೊದಲ ಬಾರಿಗೆ ನಮ್ಮ ಪಶುವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಲೇಸರ್ ಥೆರಪಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೈತರು ತಮ್ಮ ಸಾಕು ಪ್ರಾಣಿಗಳಿಗೆ ರೋಗ ತಗುಲಿದಾಗ ಇಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಬಹುದಾಗಿದೆ. ಇದನ್ನು ಹೊರತುಪಡಿಸಿದರೆ ನಾಯಿಗಳಿಗೆ ಕನಿಷ್ಠ ಚಿಕಿತ್ಸಾ ವೆಚ್ಚ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಲ್ಯಾಬ್ ಇಂಡಿಯಾ ಹೆಲ್ತ್ ಕೇರ್ ಗುರುಪುರ ಜೊತೆ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೀದರ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪ್ರಧಾನ ನಿರ್ದೇಶಕ ವೀರೇಂದ್ರ ಉಪಧ್ಯಾಯ, ಕುಲಸಚಿವ ಎಚ್.ಆರ್.ವಿ.ರೆಡ್ಡಿ, ಡೀನ್ ಆರ್.ವಿ.ಪ್ರಸಾದ್ ಉಪಸ್ಥಿತರಿದ್ದರು.

ಪಶು ಸಾಕಾಣೆ ಮಾಡುವ ರೈತರು ತಮ್ಮ ಸಾಕು ಪ್ರಾಣಿಗಳಿಗೆ ಲೇಸರ್ ಥೆರಪಿ ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಕೇಂದ್ರದ ಸದುಪಯೋಗಪಡಿಸಿಕೊಳ್ಳಬಹುದು.

-ಪ್ರೊ.ಎಚ್.ಡಿ. ನಾರಾಯಣಸ್ವಾಮಿ, ಪಶು ವಿಶ್ವವಿದ್ಯಾಲಯದ ಕುಲಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News