×
Ad

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು ಪ್ರಕರಣ: ವೈದ್ಯಕೀಯ ನಿರ್ಲಕ್ಷದ ಬಗ್ಗೆ ತನಿಖೆ

Update: 2019-04-27 22:42 IST

ಬೆಂಗಳೂರು, ಎ.27: ಕರ್ನಾಟಕದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವು ಪ್ರಕರಣದಲ್ಲಿ ಯಾವುದೇ ರೀತಿಯ ವೈದ್ಯಕೀಯ ನಿರ್ಲಕ್ಷ ನಡೆದಿರುವ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಸರಕಾರ ಐವರು ತಜ್ಞ ಸದಸ್ಯರ ಸಮಿತಿಯನ್ನು ರಚಿಸಿದೆ. ಮಧುಕರ್ ಶೆಟ್ಟಿ ಸಾವಿಗೂ ಮೊದಲು ಅವರಿಗೆ ನೀಡಲಾದ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಮಧುಕರ್ ಶೆಟ್ಟಿ ಸಾವಿಗೆ ಕಾರಣವನ್ನು ಪತ್ತೆ ಮಾಡಲು ಪ್ರಸಿದ್ಧ ಹೃದ್ರೋಗ ತಜ್ಞ ದೇವಿ ಶೆಟ್ಟಿ ಅವರ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲಾಗುವುದು ಎಂದು ಸರಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಪ್ರಾಮಾಣಿಕ ಮತ್ತು ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗಿದ್ದ ಮಧುಕರ್ ಶೆಟ್ಟಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಂದಿ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. 47ರ ಹರೆಯದವರಾಗಿದ್ದ ಶೆಟ್ಟಿ ಆ ಸಮಯದಲ್ಲಿ ಹೈದರಾಬಾದ್‌ನ ಸರ್ದಾರ್ ವಲ್ಲಭಾ ಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಉನ್ನತ ಐಪಿಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮಧುಕರ್ ಶೆಟ್ಟಿಯವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಈ ಚಿಕಿತ್ಸೆಯ ವಿಧಾನದಲ್ಲಿ ಲೋಪವಿತ್ತು ಎಂದು ಶೆಟ್ಟಿ ಸಂಬಂಧಿಕರು ಆರೋಪಿಸಿದ್ದಾರೆ.

ಈ ಬಗ್ಗೆ ದಿ ಪ್ರಿಂಟ್ ಜೊತೆ ಮಾತನಾಡಿದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ದಿನೇಶ್ ಅಮೀನ್ ಮಟ್ಟು, ಮಧುಕರ್ ಶೆಟ್ಟಿ ಸಾವಿಗೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಬಯಸಿರುವುದಾಗಿ ತಿಳಿಸಿದ್ದಾರೆ.

ಮೊದಲಿಗೆ ಅವರ ಸಾವು ಹಂದಿ ಜ್ವರದಿಂದ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ ನಂತರ ಅವರ ಸಾವು ಹಂದಿ ಜ್ವರದಿಂದ ಸಂಭವಿಸಿರಲಿಕ್ಕಿಲ್ಲ ಎಂದು ವೈದ್ಯರು ತಿಳಿಸಿದರು. ಹಾಗಾಗಿ ನಾನು ಶೆಟ್ಟಿ ಸಾವಿಗೆ ನಿಜವಾದ ಕಾರಣ ಏನೆಂದು ತಿಳಿಯಲು ಬಯಸುತ್ತೇವೆ ಎಂದು ಮಟ್ಟು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News