ಜಲಿಯನ್‌ವಾಲಾ ಬಾಗ್ ವೀರರ ಚಿರಸ್ಮರಣೆ

Update: 2019-04-28 10:35 GMT

ಭಾರತೀಯರಲ್ಲಿ ಸ್ವಾತಂತ್ರದ ಕಿಚ್ಚನ್ನು ಹೊತ್ತಿಸಿದ ಜಲಿಯನ್‌ವಾಲಾಬಾಗ್‌ಹತ್ಯಾಕಾಂಡ ನಡೆದು ಈಗ 100 ವರ್ಷ ತುಂಬಿದೆ. ಈ ಕರಾಳ ಘಟನೆಯ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1994ರಲ್ಲಿ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ‘‘ದಾಖಲೆಗಳು ಹಾಗೂ ಜಲಿಯನ್‌ವಾಲಾ ಬಾಗ್: ಸ್ವಾತಂತ್ರದ ವೀರಚರಿತ್ರೆ’’ ಹೆಸರಿನ ವಸ್ತುಪ್ರದರ್ಶನದಲ್ಲಿ ದಾಖಲೆಗಳನ್ನು ಪ್ರದರ್ಶಿಸಲಾಗಿತ್ತು. ಅದರಲ್ಲಿದ್ದ ಬಹುತೇಕ ದಾಖಲೆಗಳು ಭಾರತೀಯ ಸ್ವಾತಂತ್ರ ಹೋರಾಟದ ಅತ್ಯಂತ ಉದ್ವಿಗ್ನ ಕಾಲಾವಧಿ ಗಳಿಗೆ ಸಂಬಂಧಿಸಿದ್ದಾಗಿದ್ದವು. ಬ್ರಿಟಿಷರು ಎಲ್ಲಾ ರೀತಿಯ ಪ್ರಜಾ ತಾಂತ್ರಿಕ ನಿಯಮಗಳನ್ನು ಗಾಳಿಗೆ ತೂರಿ, ಸಾಮೂಹಿಕ ಪ್ರತಿಭಟನೆಯನ್ನು ಅತ್ಯಂತ ಬರ್ಬರವಾಗಿ ಹತ್ತಿಕ್ಕಿರುವುದಕ್ಕೆ ಈ ದಾಖಲೆಗಳು, ಪತ್ರಗಳು ಸಾಕ್ಷಿಯಾಗಿವೆ. ಅವುಗಳಲ್ಲಿ ಉಲ್ಲೇಖಿಸಲಾದ ಕೆಲವು ವಿವರ ಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇಂದು ಭಾರತವು ಹಿಂದುತ್ವವಾದಿ ಗುಂಪಿನ ನೇತೃತ್ವದಲ್ಲಿ ನಡೆಯುತ್ತಿರುವ ಎಲ್ಲಾರೀತಿಯ ಧಾರ್ಮಿಕ ದ್ವೇಷದ ಚಟುವಟಿಕೆಗಳ ಆಡುಂಬೊಲವಾಗಿ ಬದಲಾಗಿದೆ. ಪ್ರಜಾತಾಂತ್ರಿಕ- ಜಾತ್ಯತೀತ ರಾಜಕಾರಣವನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಸ್ವೀಕರಿಸಿದ ನಮ್ಮ ದೇಶದ ಪ್ರಧಾನಿಯವರು ಕೂಡಾ, ಹಿಂದುತ್ವದ ಧ್ಯೇಯದ ಸೇವೆಗೆಂದೇ ತಾನು ಅಧಿಕಾರ ದಲ್ಲಿದ್ದೇನೆಂಬಂತೆ ವರ್ತಿಸುತ್ತಿದ್ದಾರೆ ಹಾಗೂ ತನ್ನನ್ನು ಹಿಂದೂ ರಾಷ್ಟ್ರೀಯವಾದಿಯೆಂದೇ ಗುರುತಿಸಿಕೊಳ್ಳುತ್ತಾರೆ. ಆಡಳಿತಾರೂಢ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ತಮ್ಮ ಬದ್ಧತೆಯನ್ನು ಬಹಿರಂಗವಾಗಿ ಘೋಷಿಸಿ ದ್ದಾರೆ. ಬಿಜೆಪಿ,ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ರಾಷ್ಟ್ರದಲ್ಲಿ ಮಹಿಳೆ ಯರು ಮತ್ತು ದಲಿತರನ್ನು ಕೆಳಮಟ್ಟದ ಮಾನವರೆಂದು ಪರಿ ಗಣಿಸುವುದು ನೆಲದ ಕಾನೂನಾಗಲಿದೆ. ಅವರ ದೃಷ್ಟಿಯಲ್ಲಿ ಭಾರತವು ಹಿಂದೂಗಳಿಗೆ ಮಾತ್ರವೇ ಮಾತೃಭೂಮಿ ಹಾಗೂ ಪವಿತ್ರಭೂಮಿಯಾಗಲಿದೆ. ಅವರ ವ್ಯಾಖ್ಯಾನದ ಪ್ರಕಾರ, ಆರ್ಯ ರಕ್ತವನ್ನು ಹೊಂದಿರುವ, ಜಾತಿವಾದವನ್ನು ನಂಬುವ,ಗೌರವರ್ಣವುಳ್ಳ ಹಾಗೂ ಸಂಸ್ಕೃತವನ್ನುಪವಿತ್ರ ಭಾಷೆಯೆಂದು ಒಪ್ಪಿಕೊಳ್ಳುವವರನ್ನು ಮಾತ್ರವೇ ಹಿಂದೂಗಳೆಂದು ಪರಿ ಗಣಿಸಲಾಗುತ್ತದೆ. ಅವರ ಹಿಂದೂ ರಾಷ್ಟ್ರದ ವ್ಯಾಖ್ಯಾನದಿಂದ ಮುಸ್ಲಿಮರನ್ನು ಹಾಗೂ ಕ್ರೈಸ್ತರನ್ನು ಮಾತ್ರವೇ ಹೊರಗಿಟ್ಟಿ ರುವುದಲ್ಲ, ಸಿಖ್, ಬೌದ್ಧಧರ್ಮ ಹಾಗೂ ಜೈನ ಧರ್ಮಗಳು ಕೂಡಾ ತಾವು ಹಿಂದೂ ಧರ್ಮದ ಪಂಗಡಗಳಾಗಿ ಮಾತ್ರವೇ ಅಸ್ತಿತ್ವ ದಲ್ಲಿ ಇರಲು ಸಾಧ್ಯವಾಗುವುದು.

ಆದರೆ ಈ ರೀತಿಯ ಪೂರ್ವಗ್ರಹಪೀಡಿತ ದೃಷ್ಟಿಕೋನವು ಸುಮಾರು 100 ವರ್ಷಗಳ ಹಿಂದೆ ಬ್ರಿಟಿಷರು ಎಸಗಿದ, ಅಧುನಿಕ ಇತಿಹಾಸದಲ್ಲೇ ಅತ್ಯಂತ ಭೀಕರ ನರಮೇಧವೆನಿಸಿರುವ ಜಲಿಯನ್‌ವಾಲಾ ಬಾಗ್‌ಹತ್ಯಾಕಾಂಡದ ಸಮಯದಲ್ಲಿ ಇರಲಿಲ್ಲ. ಜಗತ್ತಿನ ಅತ್ಯಂತ ಬೃಹತ್ ಸಾಮ್ರಾಜ್ಯಶಾಹಿ ಶಕ್ತಿಯ ದಬ್ಬಾಳಿಕೆಯಿಂದ ರೋಸಿ ಹೋದ ಭಾರತೀ ಯರು, ಒಗ್ಗಟ್ಟಿನಿಂದ ವೀರೋಚಿತವಾದ ಪ್ರತಿಭಟನೆಗಿಳಿದರು. ಇದು ಕೇವಲ ಕಟ್ಟುಕತೆಯಲ್ಲ. ಅದನ್ನು ಸಮಕಾಲೀನ ಅಧಿಕಾರಿಗಳು ಬಹುತೇಕವಾಗಿ ಬ್ರಿಟಿಷ್ ದಾಖಲೆಗಳಿಂದ ಅದನ್ನು ಸಾಬೀತುಪಡಿಸಿದ್ದಾರೆ. ಈ ಅದ್ಭುತವಾದ ದಾಖಲೆ ಪತ್ರಗಳು ಬ್ರಿಟನ್‌ನ ಪತ್ರಾಗಾರದಲ್ಲಿ ಭದ್ರವಾಗಿವೆ. ಅಚ್ಚರಿಯೆಂಬಂತೆ, ಈ ದಾಖಲೆಗಳನ್ನು ಜಲಿಯನ್‌ವಾಲಾಬಾಗ್‌ಹತ್ಯಾಕಾಂಡದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1994ರಲ್ಲಿ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ‘‘ದಾಖಲೆಗಳು ಹಾಗೂ ಜಲಿಯನ್‌ವಾಲಾ ಬಾಗ್: ಸ್ವಾತಂತ್ರದ ವೀರಚರಿತ್ರೆ’’ ಹೆಸರಿನ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಅದರಲ್ಲಿದ್ದ ಬಹುತೇಕ ದಾಖಲೆಗಳು ಭಾರತೀಯ ಸ್ವಾತಂತ್ರ ಹೋರಾಟದ ಅತ್ಯಂತ ಉದ್ವಿಗ್ನ ಕಾಲಾವಧಿಗಳಿಗೆ ಸಂಬಂಧಿಸಿದ್ದಾಗಿದ್ದವು. ಬ್ರಿಟಿಷರು ಎಲ್ಲಾ ರೀತಿಯ ಪ್ರಜಾತಾಂತ್ರಿಕ ನಿಯಮಗಳನ್ನು ಗಾಳಿಗೆ ತೂರಿ, ಸಾಮೂಹಿಕ ಪ್ರತಿಭಟನೆಯನ್ನು ಅತ್ಯಂತ ಬರ್ಬರವಾಗಿ ಹತ್ತಿಕ್ಕಿರುವುದಕ್ಕೆ ಈ ದಾಖಲೆ ಗಳು ಪತ್ರಗಳು ಸಾಕ್ಷಿಯಾಗಿವೆ. ತಾವು ಸುಸಂಸ್ಕೃತರೆಂದು ಹೇಳಿಕೊಳ್ಳುವ ಬ್ರಿಟಿಷರು ಭಾರತೀಯರ ವಿರುದ್ಧ ಅತ್ಯಂತ ಘೋರವಾದ ಹಿಂಸಾಚಾರ ಗಳನ್ನು ಎಸಗಿದ್ದರು. ಭಾರತದ ಜನತೆ ಜಾತಿಮತ ಭೇದವಿಲ್ಲದೆ ಒಗ್ಗೂಡಿ ಬ್ರಿಟಿಷರ ದಬ್ಬಾಳಿಕೆಯನ್ನು ಪ್ರತಿಭಟಿಸ ತೊಡಗಿದರು.

ಈ ಹೋರಾಟದ ಕುರಿತಾದ ದೃಶ್ಯ ಹಾಗೂ ಲಿಖಿತ ರೂಪದ ಹಲವಾರು ದಾಖಲೆಗಳು ರಾಷ್ಟ್ರೀಯ ಪತ್ರಾಗಾರಗಳ ಕತ್ತಲಕೋಣೆಗಳಲ್ಲಿ ಮರೆಯಾಗಿದ್ದು, ಎಂದೂ ಬಹಿರಂಗಗೊಂಡಿಲ್ಲ. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕರಾಳ ಘಟನೆಯ 100ನೇ ವರ್ಷಾಚರಣೆಯು ಇತ್ತೀಚೆಗೆ ನಡೆದ ಸಂದರ್ಭ ದಲ್ಲೂ ಅದನ್ನು ಹೊರತೆಗೆದಿರಲಿಲ್ಲ. ನಮ್ಮನ್ನು ಆಳುವವರು, ‘ವಸಾಹತುಶಾಹಿ ಧಣಿಗಳ’ ಬರ್ಬರತೆಯನ್ನು ಹಾಗೂ ಅದರ ವಿರುದ್ಧ ನಮ್ಮ ಭಾರತೀಯ ಜನತೆಯ ವೀರೋಚಿತವಾದ ಹೋರಾಟ ಇವುಗಳ ಬಗ್ಗೆ ಮುಂದಿನ ತಲೆಮಾರುಗಳ ಜನತೆ ತಿಳಿದುಕೊಳ್ಳುವುದನ್ನು ಬಯಸುವುದಿಲ್ಲ.

►ಹೋರಾಟ ಸಾಹಿತ್ಯಕ್ಕೆ ನಿಷೇಧ

ಬ್ರಿಟಿಷರ ಬರ್ಬರತೆಯ ವಿರುದ್ಧ ಜನಜಾಗೃತಿ ರೂಪಿಸಲು ಪ್ರಕಟಿಸ ಲಾದ ಆದರೆ ನಿಷೇಧಿಸಲ್ಪಟ್ಟ ಸಾಹಿತ್ಯ,ಕವನ, ಗದ್ಯ ಹಾಗೂ ನಾಟಕಗಳ ಪ್ರತಿಗಳನ್ನು ಕೂಡಾ ಪ್ರದರ್ಶಿಸಲಾಗಿತ್ತು. ಈ ಅಮೂಲ್ಯ ಸಾಹಿತ್ಯ ಭಂಡಾರವು ಸ್ವಾತಂತ್ರ ಹೋರಾಟದ ವಿವಿಧ ಮಜಲುಗಳನ್ನು ತೆರೆದಿಟ್ಟಿದೆ. ಪತ್ರಾಗಾರಗಳಲ್ಲಿ ಲಭ್ಯವಿರುವ ನಿಷೇಧಿತ ಸಾಹಿತ್ಯದ ಒಂದಂಶವನ್ನು ಮಾತ್ರವೇ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುದೆಂದರೆ ರಾಮ್ ಸ್ವರೂಪ್ ಗುಪ್ತಾ ಅವರು ಬರೆದಿರುವ ಹಿಂದಿ ನಾಟಕ ಬಾಗೆ ಜಲಿಯನ್, ಫಿರೋಝುದ್ದೀನ್ ಶ್ರಾಫ್ ಗುರುಮುಖಿ ಲಿಪಿಯಲ್ಲಿ ಬರೆದ ಸುದೀರ್ಘ ಕವನ ‘ಜಲಿಯನ್‌ವಾಲಾ ಬಾಗ್’, ಅಚ್ಚುಕಟ್ಟಾದ ಉರ್ದು ನಾಟಕ ಪಂಜಾಬ್ ಕಾ ಹತ್ಯಾಕಾಂಡ್ ಹಾಗೂ ಗುಜರಾತಿ ನಾಟಕ ಜಲಿಯನ್‌ವಾಲಾಬಾಗ್, ಇವುಗಳಲ್ಲಿ ಪ್ರಮುಖವಾದವು. ಈ ಪೈಕಿ ಕೊನೆಯ ಎರಡು ಕೃತಿಗಳನ್ನು ಲೇಖಕರು ದಮನಕಾರಿ ಬ್ರಿಟಿಷ್ ಆಡಳಿತದಿಂದ ಗುರುತಿಸಲ್ಪಡುವುದನ್ನು ತಡೆಯಲು ಅಜ್ಞಾತರಾಗಿ ಉಳಿದಿದ್ದರು. ಜಲಿಯನ್‌ವಾಲಾಬಾಗ್‌ಹತ್ಯಾಕಾಂಡದಲ್ಲಿ ಹುತಾತ್ಮರಾದವರ ಬಗ್ಗೆ ಬ್ರಿಟಿಷ್ ಆಡಳಿತದ ಖಂಡನೀಯವಾದಂತಹ ನಡವಳಿಕೆಗಳ ಬಗ್ಗೆ ಈ ದಾಖಲೆಗಳು ಆಘಾತಕಾರಿ ಯಾದ ಮಾಹಿತಿಗಳನ್ನು ಬಹಿರಂಗಪಡಿಸಿವೆ. 1919ರ ಜೂನ್‌ನಲ್ಲಿ ಆಗಿನ ಬ್ರಿಟಿಷ್ ಸರಕಾರ ಗೃಹ ಇಲಾಖೆಯು ಬ್ರಿಟಿಷರ ಸಾವುನೋವಿನ ಘಟನೆಗಳನ್ನು ಉಲ್ಲೇಖಿಸಿತ್ತಾದರೂ, ಜಲಿಯನ್‌ವಾಲಾ ಬಾಗ್‌ನಲ್ಲಿ ಬ್ರಿಟಿಷ್ ಪಡೆಗಳು ನಡೆಸಿದ ನೂರಾರು ಮಂದಿ ಭಾರತೀಯರ ಮಾರಣಹೋಮದ ಬಗ್ಗೆ ವೌನವಹಿಸಿತ್ತು.

ಬ್ರಿಟಿಷ್ ಆಡಳಿತದಿಂದ ಪಂಜಾಬ್ ಜನತೆಯ ದಮನ ಕಾರ್ಯಾಚರಣೆಗಳ ವಿರುದ್ಧ ವಿಶ್ವದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿ ದ್ದಂತೆಯೇ, ತಬ್ಬಿಬ್ಬಾದ ಬ್ರಿಟಿಷ್ ಸರಕಾರವು 1919ರ ಅಕ್ಟೋಬರ್ 14ರಂದು ನಡೆದ ಹಿಂಸಾಚಾರದ ಬಗ್ಗೆ ತನಿಖೆಗೆ ಸ್ಕಾಟ್‌ಲ್ಯಾಂಡ್‌ನ ನ್ಯಾಯವಾದಿ ಹಂಟರ್ ನೇತೃತ್ವದಲ್ಲಿ ತನಿಖಾ ಆಯೋಗವೊಂದನ್ನು ನೇಮಿಸಿತ್ತು. ಜನರಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡಯರ್ ಆದೇಶದಂತೆ ಬ್ರಿಟಿಷ್ ಸೇನಾಪಡೆ ನಡೆಸಿದ ಗುಂಡಿನ ದಾಳಿಗೆ ಪುರುಷರು, ಮಹಿಳೆಯರು ಹಾಗೂ 6 ತಿಂಗಳು ವಯಸ್ಸಿನ ಹೆಣ್ಣು ಮಗು ಸೇರಿದಂತೆ ಒಟ್ಟು 381 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆಂದು ಹಂಟರ್ ಆಯೋಗ ತೀರ್ಮಾನಿಸಿತು. ಆದಾಗ್ಯೂ ಘಟನೆಯಲ್ಲಿ ಹಲವಾರು ಅಪರಿಚಿತ ಶವಗಳನ್ನು ವಾರಸುದಾರ ರಿಗೆ ಒಪ್ಪಿಸದೆ ವಿಲೇವಾರಿ ಮಾಡಲಾಗಿದ್ದರಿಂದ ಹಂಟರ್ ಆಯೋಗ ಬಹಿರಂಗಪಡಿಸಿದ್ದ ಸಾವಿನ ಸಂಖ್ಯೆ ನಿಖರವಾದುದಲ್ಲವೆಂದು ವಾದಿಸಲಾಗಿತ್ತು.

ಆಘಾತಕಾರಿಯೆಂದರೆ ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕವೂ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರ ಕುಟುಂಬಿಕರಿಗಾಗಲಿ ಅಥವಾ ಗಾಯಾಳುಗಳ ಜೀವನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 1975-77ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ ವರಿಗೆ ತಿಂಗಳಿಗೆ 10 ಸಾವಿರ ರೂ. ಮಾಸಾಶನ ದೊರೆಯುತ್ತಿದ್ದರೆ, ತಮಗೆ ಪಿಂಚಣಿ ಹಾಗೂ ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ ದೊರೆಯಬೇಕೆಂಬ ಜಲಿಯನ್‌ವಾಲಾಬಾಗ್ ಹುತಾತ್ಮರ ಕುಟುಂಬದ ಬೇಡಿಕೆಯನ್ನು ಸರಕಾರ ಇನ್ನೂ ಪುರಸ್ಕರಿಸಿಲ್ಲ. ಇದರಿಂದ ಬೇಸತ್ತ ‘ಜಲಿಯನ್‌ವಾಲಾ ಬಾಗ್ ಶಹೀದ್ ಪರಿವಾರ್ ಸಮಿತಿಯು’ ಬ್ರಿಟನ್ ಪ್ರಧಾನಿಯವರಿಗೆ ಪತ್ರಬರೆದು ಪರಿಹಾರಕ್ಕಾಗಿ ಆಗ್ರಹಿಸಿದ್ದವು. ಇದು ನಮ್ಮ ಹುತಾತ್ಮ ಕುಟುಂಬಗಳ ಅಸಹಾಯಕತೆ ಹಾಗೂ ನಿರಾಶಾದಾಯಕತೆಯನ್ನು ತೋರಿಸಿಕೊಟ್ಟಿರುವ ಜೊತೆಗೆ ಭಾರತೀಯ ಆಡಳಿತಗಾರರ ಲಜ್ಜಾ ಹೀನತೆ ಹಾಗೂ ನರಸತ್ತ ಮನಸ್ಥಿತಿಯನ್ನು ಸೂಚಿಸುತ್ತದೆ.

►ಪ್ರತೀಕಾರದ ಕಿಡಿ: ಉಧಂ ಸಿಂಗ್

ಈ ವಸ್ತುಪ್ರದರ್ಶನದಲ್ಲಿ 1940ರ ಎಪ್ರಿಲ್ 16ರಂದು ಪ್ರಕಟವಾದ ಟೆಲಿಗ್ರಾಮ್ ಒಂದನ್ನು ಪ್ರದರ್ಶನಕ್ಕಿಡ ಲಾಗಿತ್ತು. ಉಧಂಸಿಂಗ್‌ನ ವಿಚಾರಣೆ ನಡೆದ ದಿನ ಇದಾಗಿದೆ.

‘‘ವಿಚಾರಣೆಯ ವೇಳೆ ಆರೋಪಿ ಯು ಹುತಾತ್ಮನಂತೆ ತೋರ್ಪಡಿಸಿ ಕೊಳ್ಳುವ ಉದ್ದೇಶವನ್ನು ಹೊಂದಿದ್ದನು. ಇಂಗ್ಲೆಂಡ್‌ನ ಪತ್ರಿಕೆಗಳು ಈ ಸುದ್ದಿಗೆ ಮಹತ್ವವನ್ನು ನೀಡದಂತೆ ಹಾಗೂ ರಾಯ್ಟರ್ಸ್‌ (ಬ್ರಿಟಿಷ್ ಸುದ್ದಿಸಂಸ್ಥೆ) ಈ ಸುದ್ದಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸಂಕ್ಷಿಪ್ತವಾಗಿ ಪ್ರಕಟಿಸುವಂತೆ ಕ್ರಮಗಳನ್ನು ಕೈಗೊಂಡಲ್ಲಿ ನಮಗೆ ಸಂತಸವಾಗಲಿದೆ’’ ಎಂಬುದಾಗಿ ಅದರಲ್ಲಿ ಬರೆಯಲಾಗಿತ್ತು.

ಹೊಸದಿಲ್ಲಿಯ ಆಗಿನ ಗವರ್ನರ್ ಜನರಲ್ ಭಾರತದ ವಿದೇಶಾಂಗ ಕಾರ್ಯದರ್ಶಿಯವರಿಗೆ ಕಳುಹಿಸಿದ ಟೆಲಿಗ್ರಾಂ ಅದಾಗಿತ್ತು. ಸುಮಾರು 47 ವರ್ಷಗಳಿಗೂ ಹೆಚ್ಚು ಕಾಲ ಈ ಟೆಲಿಗ್ರಾಂ, ಬ್ರಿಟಿಷ್ ಬೇಹುಗಾರಿಕೆ ಇಲಾಖೆಯ ರಹಸ್ಯ ಫೈಲ್‌ಗಳಲ್ಲಿ ಉಳಿದುಕೊಂಡಿತ್ತು. ಆನಂತರ ಅದು ಸ್ವತಂತ್ರ ಭಾರತ ಸರಕಾರದ ಬಳಿ ಭದ್ರವಾಗಿ ಬಚ್ಚಿಡಲಾಗಿತ್ತು. 1994 ರಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದಲ್ಲಿ ಉಧಂಸಿಂಗ್ ಕುರಿತಾದ ಸಂಪೂರ್ಣ ಕಥೆಯೇಇತ್ತು. ಅಲ್ಲಿಯವರೆಗೆ ಉಧಂ ಸಿಂಗ್ ಹೆಚ್ಚಿನ ಭಾರತೀಯರ ಪಾಲಿಗೆ ಅನಾಮಿಕನಾಗಿಯೇ ಉಳಿದಿದ್ದ ಎನ್ನಬಹುದು.

ಉಧಂಸಿಂಗ್ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ನೀಡಿದ ಹೇಳಿಕೆಯು ಜಲಿಯನ್‌ವಾಲಾಬಾಗ್ ಹತ್ಯಾಕಾಂಡವು, ಬ್ರಿಟಿಷ್ ಆಳ್ವಿಕೆ ಯ ಬಗ್ಗೆ ಆತನಲ್ಲಿ ಎಷ್ಟರ ಮಟ್ಟಿಗೆ ಆಕ್ರೋಶವನ್ನು ಹುಟ್ಟುಹಾಕಿತ್ತೆಂಬುದಕ್ಕೆ ನಿರ್ದೇಶನವಾಗಿದೆ.

‘‘ನಾನು ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸೂತ್ರಧಾರಿ ಯಾಗಿದ್ದ ಜನರಲ್ ಡಯರ್‌ನನ್ನು ಯಾಕೆ ಕೊಂದನೆಂದರೆ, ಅದಕ್ಕೆ ಆತ ಅರ್ಹನಾಗಿದ್ದ. ನನ್ನ ಜನತೆಯ ಚೈತನ್ಯವನ್ನು ದಮನಿಸಲು ಆತ ಬಯಸಿದ್ದ.ಹೀಗಾಗಿ ನಾನಾತನನ್ನು ದಮನಿಸಿದೆ. ಸುಮಾರು 21 ವರ್ಷಗಳ ಕಾಲ ಸೇಡಿಗಾಗಿ ನಾನು ಹಾತೊರೆಯುತ್ತಿದ್ದೆ. ಆ ಕೆಲಸವನ್ನು ಮಾಡಿದ್ದಕ್ಕೆ ನನಗೆ ಸಂತಸವಿದೆ. ನನಗೆ ಸಾವಿನ ಭಯವಿಲ್ಲ. ನನ್ನ ದೇಶಕ್ಕಾಗಿ ನಾನು ಸಾಯುತ್ತೇನೆ’’ಎಂದು ಉಧಂ ಸಿಂಗ್ ಹೇಳಿದ್ದರು.

ಅವರು ಹೀಗೆ ಮುಂದುವರಿಸುತ್ತಾರೆ...

‘‘ನನಗೆ ಸಾವಿನ ಭಯವಿಲ್ಲ. ನಾನು ಒಂದು ಉದ್ದೇಶಕ್ಕಾಗಿ ಸಾಯು ತ್ತಿದ್ದೇನೆ. ಬ್ರಿಟಿಷ್ ಸಾಮ್ರಾಜ್ಯದಿಂದಾಗಿ ನಾವು ಯಾತನೆಪಡುತ್ತಿದ್ದೇವೆ. ನಾನು ನನ್ನ ಮಾತೃಭೂಮಿಯಲ್ಲಿ ಸಾಯಲು ಹೆಮ್ಮೆಪಡುತ್ತೇನೆ ಹಾಗೂ ನಾನು ಅಗಲಿ ಹೋದಲ್ಲಿ, ನನ್ನ ಜಾಗದಲ್ಲಿ ನನ್ನ ದೇಶದ ಜನತೆ ನನ್ನ ದೇಶವನ್ನು ಸ್ವಾತಂತ್ರಗೊಳಿಸಲು ಸಾವಿರ ಸಂಖ್ಯೆಯಲ್ಲಿ ಬಂದು ಕೊಳಕು ನಾಯಿಗಳನ್ನು ಓಡಿಸಲಿದ್ದಾರೆ. ನಿಮ್ಮನ್ನು ಭಾರತದಿಂದ ತೊಲಗಿಸಲಾಗುವುದು ಹಾಗೂ ನಿಮ್ಮ ಬ್ರಿಟಿಷ್ ಸಾಮ್ರಾಜ್ಯ ನಾಶವಾ ಗಲಿದೆ. ಇಂಗ್ಲಿಷ್ ಜನರ ಬಗ್ಗೆ ನಮಗೆ ಎಂದಿಗೂ ಯಾವುದೇದ್ವೇಷವಿಲ್ಲ. ಇಂಗ್ಲೆಂಡ್‌ನ ಕಾರ್ಮಿಕರ ಬಗ್ಗೆ ನನಗೆ ಅಗಾಧವಾದ ಅನು ಕಂಪವಿದೆ. ನಾನು ಸಾಮ್ರಾಜ್ಯಶಾಹಿ ಸರಕಾರದ ವಿರುದ್ಧವಾಗಿರುವೆ. ಬ್ರಿಟಿಷ್ ಸಾಮ್ರಾಜ್ಯವಾದ ತೊಲಗಲಿ!’’.

1940ರ ಮಾರ್ಚ್ 13ರಂದು ಲಂಡನ್‌ನ ಕೋರ್ಟ್ ರೂಂನಲ್ಲಿ ಮುಹಮ್ಮದ್ ಸಿಂಗ್ ಆಝಾದ್ ಯಾನೆ ಉಧಂಸಿಂಗ್ ಆಡಿದ ಈ ಮಾತು ಗಳು ಅಲ್ಲಿ ನೆರೆದಿದ್ದವರನ್ನು ಸ್ತಂಭೀಭೂತಗೊಳಿಸಿತು. ಜನರಲ್ ಮೈಕೆಲ್ ಓ ಡಯರ್‌ನನ್ನು ಹತ್ಯೆಗೈದ ತಕ್ಷಣವೇ ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ದಲಿತ ಸಿಖ್ ಕುಟುಂಬದಲ್ಲಿ ಜನಿಸಿದ ಉಧಂ ಸಿಂಗ್, ಅನಾಥಾಶ್ರಮದಲ್ಲೇ ಬೆಳೆದವನು. 1919ರ ಬೈಶಾಖಿ ದಿನ ದಂದು ಜಲಿಯನ್‌ವಾಲಾಬಾಗ್‌ನಲ್ಲಿ ನಡೆ ಸಾರ್ವಜನಿಕ ಸಭೆಯಲ್ಲಿ ಉಧಂಸಿಂಗ್ ಹಾಜರಿದ್ದ. ಆ ಭೀಕರ ಹತ್ಯಾಕಾಂಡವನ್ನು ಆತ ಕಣ್ಣಾರೆ ಕಂಡಿದ್ದ. ಬ್ರಿಟಿಷ್ ಪಡೆಗಳ ಗುಂಡಿಗೆ ಉರುಳಿದ ಹೆಣಗಳ ರಾಶಿಯಲ್ಲಿ ಬಿದ್ದ ಉಧಂಸಿಂಗ್ ಪವಾಡಸದೃಶವಾಗಿ ಪಾರಾಗಿದ್ದ. ತನ್ನ ನಾಡಿನ ಅಮಾಯಕ ವ್ಯಕ್ತಿಗಳ ಸಾವಿಗೆ ಪ್ರತೀಕಾರ ಕೈಗೊಳ್ಳುವುದಾಗಿ ಆತ ಅಂದೇ ತೀರ್ಮಾನಿ ಸಿದ್ದ. ಇದಾದ 21 ವರ್ಷಗಳ ಬಳಿಕ ಆತ ತನ್ನ ಗುರಿಯನ್ನು ಸಾಧಿಸಿದ್ದ.

ಕಟ್ಟಾ ದೇಶಭಕ್ತನಾದ ಉಧಂಸಿಂಗ್ ಹಿಂದೂ, ಮುಸ್ಲಿ ಹಾಗೂ ಸಿಖ್ ಜನತೆಯ ನಡುವೆ ಏಕತೆಯಿಲ್ಲದಿದ್ದರೆ ಭಾರತದ ಬ್ರಿಟಿಷ್ ಆಳ್ವಿಕೆಯನ್ನು ತೊಲಗಿಸುವುದು ಅಸಾಧ್ಯವೆಂದು ಅರಿತಿದ್ದ. ಈ ಮೂರು ಧರ್ಮಗಳ ಏಕತೆಯ ಸಂಕೇತವಾಗಿ ಆತ ತನ್ನ ಹೆಸರನ್ನು ಮುಹಮ್ಮದ್ ಸಿಂಗ್ ಆಝಾದ್ ಎಂಬುದಾಗಿ ಇರಿಸಿಕೊಂಡಿದ್ದ. 79 ವರ್ಷಗಳ ಹಿಂದೆ (1940ರ ಜುಲೈ 30) ಉಧಂಸಿಂಗ್ ಅವರನ್ನು ಬ್ರಿಟಿಷ್ ಆಡಳಿತವು ಲಂಡನ್‌ನಲ್ಲಿನ ಪೆಂಟನ್‌ವಿಲೆ ಕಾರಾಗೃಹದಲ್ಲಿ ಗಲ್ಲಿಗೇರಿಸಿತು

ಜಲಿಯನ್‌ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ಪಟ್ಟಿಯು ಬ್ರಿಟಿಷ್ ವಿರೋಧಿ ಸ್ವಾತಂತ್ರ ಸಂಗ್ರಾಮದಲ್ಲಿ ಎಲ್ಲಾ ಧರ್ಮ, ಜಾತಿಗಳ ಜನರು ಏಕತೆಯಿಂದ ಪಾಲ್ಗೊಂಡಿದ್ದರೆಂಬುದನ್ನು ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಹುತಾತ್ಮರ ಪಟ್ಟಿಯನ್ನು ನೋಡಿದಾಗ ಮನದಟ್ಟಾಗುತ್ತದೆ.

ಹುತಾತ್ಮರಾದ 381 ಮಂದಿಯಲ್ಲಿ 222 ಹಿಂದೂಗಳು, 96 ಸಿಖ್ಖರು ಹಾಗೂ 63 ಮಂದಿ ಮುಸ್ಲಿಮರು. ಅಷ್ಟೇ ಅಲ್ಲದೆ ಉದ್ಯಮಿಗಳು, ನ್ಯಾಯ ವಾದಿಗಳು, ಪತ್ರಕರ್ತರು, ಸಾಹಿತಿಗಳು, ಸರಕಾರಿ ನೌಕರರು, ಬುದ್ಧಿ ಜೀವಿಗಳು ಒಂದೆಡೆಯಾದರೆ, ಸಭೆಯಲ್ಲಿ ಪಾಲ್ಗೊಂಡಿದ್ದ ಜನಸಾ ಮಾನ್ಯರಲ್ಲಿ ನೇಕಾರರು, ಕ್ಷೌರಿಕರು, ಹೆಲ್ಪರ್‌ಗಳು, ದಿನಗೂಲಿ ನೌಕರರು, ಚಾಪೆ ತಯಾರಿಸುವವರು, ಗಾರೆ ಕೆಲಸದವರು, ಚಮ್ಮಾರರು, ಸ್ವಚ್ಛತಾ ಕಾರ್ಮಿಕರು ಹೀಗೆ ಸಮಾಜದ ವಿವಿಧ ಸ್ತರಗಳ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಭಾರೀ ಸಂಖ್ಯೆಯ ಮಹಿಳೆಯರೂ ಉಪಸ್ಥಿತರಿದ್ದರು. ಇಂದಿನ ಭಾರತದಲ್ಲಿ ಕೆಲವು ಕುಟಿಲ ರಾಜಕಾರಣಿಗಳು ಹಿಂದೂ, ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿದ್ದರೆ, ಭಾರತದ ಸ್ವಾತಂತ್ರ ಸಂಗ್ರಾಮವು ಧರ್ಮ, ಜಾತಿ, ಅಂತಸ್ತುಗಳನ್ನು ಮೀರಿ ನಿಂತ ಮಹಾನ್ ಚಳವಳಿಯಾಗಿತ್ತು. ಎಲ್ಲರನ್ನೂ ಒಳಪಡಿಸಿದ ಭಾರತದ ಸ್ಥಾಪನೆಗಾಗಿನ ನೈಜ ವಸಾಹತುಶಾಹಿ ವಿರೋಧಿ ಚಳವಳಿ ಅದಾಗಿತ್ತು.

ಇಂತಹ ಮಹಾನ್‌ಸ್ವಾತಂತ್ರ ಹೋರಾಟದ ಕುರಿತಾದ ರೋಚಕ ದಾಖಲೆಗಳು ಹಾಗೂ ಸ್ವತಂತ್ರ ಭಾರತಕ್ಕಾಗಿ ಭಾರತದ ಜನತೆಯ ತ್ಯಾಗ,ಬಲಿದಾನದ ಕಥೆಗಳು ರಾಷ್ಟ್ರೀಯ ಪತ್ರಾಗಾರದ ಕತ್ತಲ ಕೊಠಡಿಯಲ್ಲಿ ಹುದುಗಿಕೊಂಡಿರುವುದು ನಿಜಕ್ಕೂ ವಿಷಾದಕರ. ಸ್ವಾತಂತ್ರ ಹೋರಾಟ ದ ಧೀರೋದಾತ್ತ ನೈಜ ಕಥಾನಕಗಳು ಇಂದಿನ ಯುವ ತಲೆಮಾರಿಗೆ ಲಭ್ಯವಾಗುವಂತೆ ಮಾಡಿದಲ್ಲಿ, ದೇಶಕ್ಕೆ ಪಿಡುಗಾಗಿ ಪರಿಣಮಿಸಿರುವ ಕೋಮುವಾದಿ, ಜಾತಿವಾದಿ ಹಾಗೂ ವರ್ಗೀಯ ಶಕ್ತಿಗಳ ರಹಸ್ಯ ಕಾರ್ಯಸೂಚಿಗಳನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವಾಗಲಿದೆ.

ಕೃಪೆ: ಕಾರವಾನ್

ಬ್ರಿಟಿಷ್ ಆಡಳಿತಗಾರರ ಬರ್ಬರತೆಗೆ

ಸಾಕ್ಷಿ ನುಡಿಯುವ ಛಾಯಾಚಿತ್ರಗಳು

1914-1919ರ ಅವಧಿಯಲ್ಲಿ ಪಂಜಾಬ್‌ನಲ್ಲಿ ಭುಗಿಲೆದ್ದ ಅಶಾಂತ ಪರಿಸ್ಥಿತಿಯನ್ನು ನಿಯಂತ್ರಿಸಲು ಬ್ರಿಟಿಷ್ ಆಡಳಿತಗಾರರು ಎಸಗಿದ ಬರ್ಬರ ಕೃತ್ಯಗಳ ಹೃದಯವಿದ್ರಾವಕ ದೃಶ್ಯಗಳ ಛಾಯಾಚಿತ್ರಗಳು ಈ ಪತ್ರಾಗಾರದಲ್ಲಿವೆ. ಪಂಜಾಬಿಗಳು ಅದರಲ್ಲೂ ವಿಶೇಷವಾಗಿ ಸಿಖ್ಖರನ್ನು ಮರದ ಅಥವಾ ಲೋಹದ ಚೌಕಟ್ಟಿಗೆ ಕಟ್ಟಿ ಅವರಿಗೆ ಛಡಿಯೇಟು ನೀಡುವ ಹಾಗೂ ಬಲವಂತವಾಗಿ ಅವರನ್ನು ಮೈಯಲ್ಲಿ ಬಟ್ಟೆಯಿಲ್ಲದೇ ರಸ್ತೆಯಲ್ಲಿ ತೆವಳಿಕೊಂಡು ಹೋಗುವಂತೆ ಮಾಡುವ ದೃಶ್ಯಗಳಿರುವ ಈ ಫೋಟೊಗಳನ್ನು ಕಂಡಾಗ ನಾಚಿಕೆ ಹಾಗೂ ಆಕ್ರೋಶ ಎರಡೂ ಏಕಕಾಲದಲ್ಲಿ ಉದ್ಭವಿಸುತ್ತವೆ. ಆವಾಗ ಪಂಜಾಬ್ ವಸ್ತುಶಃ ಸೇನಾ ಶಿಬಿರವಾಗಿ ಪರಿಣಮಿಸಿತ್ತು. ದೇಶಭಕ್ತ ಭಾರತೀಯರ ಸ್ವಾಭಿಮಾನವನ್ನು ಹತ್ತಿಕ್ಕುವ ಉದ್ದೇಶದೊಂದಿಗೆ ಬ್ರಿಟಿಷರು ಭಾರತೀಯರನ್ನು ಬಲವಂತವಾಗಿ ಪ್ರತಿಯೊಬ್ಬ ಬ್ರಿಟಿಷ್ ಪುರುಷ ಹಾಗೂ ಮಹಿಳೆಗೆ ಸೆಲ್ಯೂಟ್ ಹೊಡೆಯುವಂತೆ ಮಾಡುತ್ತಿದ್ದರು. ಭಾರತೀಯರಿಗೆ ಬೈಸಿಕಲ್‌ನಲ್ಲಿ ಸವಾರಿ ಮಾಡದಂತೆ ನಿರ್ಬಂಧಿಸಲಾಗಿತ್ತು ಹಾಗೂ ಬಲವಂತವಾಗಿ ಅವರ ಗಡ್ಡ ಹಾಗೂ ಮೀಸೆಯನ್ನು ಬೋಳಿಸಲಾಗು ತ್ತಿತ್ತು. ಇಂತಹ ದಬ್ಬಾಳಿಕೆಗಳೇ ಭಗತ್ ಸಿಂಗ್‌ರಂತಹ ಮಹಾನ್ ಕ್ರಾಂತಿಕಾರರು ಸೃಷ್ಟಿಯಾಗಲು ಕಾರಣವಾಯಿತೆಂಬುದರಲ್ಲಿ ಯಾವುದೇ ಸಂದೇಹ ವಿಲ್ಲವೆಂದು ಅವರು ತಿಳಿಸಿದ್ದಾರೆ.

Writer - ಪ್ರೊ. ಶಂಸುಲ್ ಇಸ್ಲಾಂ

contributor

Editor - ಪ್ರೊ. ಶಂಸುಲ್ ಇಸ್ಲಾಂ

contributor

Similar News