ಟಾಲ್‌ಸ್ಟಾಯ್ ಮತ್ತು ಹೀಗೊಬ್ಬ ಗುರು

Update: 2019-04-27 18:14 GMT

ಬಿ.ಎಂ. ಬಶೀರ್

ನನ್ನ ಬಾಲ್ಯವನ್ನು ಸುತ್ತಿಕೊಂಡ ಹಲವು ನೆನಪುಗಳ ಬಳ್ಳಿಗಳಲ್ಲಿ ನಾನು ಮೊತ್ತ ಮೊದಲು ಶುಕ್ರವಾರದ ನಮಾಝನ್ನು ತಪ್ಪಿಸಿಕೊಂಡ ದಿನವೂ ಒಂದು. ವಿಚಿತ್ರವೆಂದರೆ ಈ ಬಳ್ಳಿ ತುಸು ಮಿಸುಕಾಡಿದರೂ, ಅಲ್ಲೊಬ್ಬ ಗುರು, ಜೊತೆಗೆ ಟಾಲ್‌ಸ್ಟಾಯ್, ಆತನ ಕತೆಯೊಂದರಲ್ಲಿ ಬರುವ ಹತ್ತು ಹಲವು ಪಾತ್ರಗಳು ಘಮ್ಮೆಂದು ಕಣ್ಣರಳಿಸುತ್ತವೆ.

***

ಏಳನೆ ತರಗತಿ ಮುಗಿದದ್ದೇ ನನ್ನನ್ನು ದೂರದ ನೆಲ್ಯಾಡಿಯಲ್ಲಿರುವ ಸಂತ ಜೋರ್ಜ್ ಪ್ರೌಢ ಶಾಲೆಗೆ ಸೇರಿಸಲಾಯಿತು. ಸುತ್ತಮುತ್ತಲಿನ ಪರಿಸರದಲ್ಲೆಲ್ಲ ಆ ಶಾಲೆ ಸಾಕಷ್ಟು ಹೆಸರು ಗಳಿಸಿತ್ತು. ಸ್ಥಳದ ಕೊರತೆ, ಕೊಠಡಿಯ ಕೊರತೆ ಇತ್ಯಾದಿಗಳಿದ್ದರೂ, ಮೇಷ್ಟ್ರುಗಳ ಅಪಾರ ಶ್ರಮ, ಶ್ರದ್ಧೆಯ ಕಾರಣದಿಂದ ಈ ಶಾಲೆ ಗುರುತಿಸಲ್ಪಟ್ಟಿತ್ತು. ನನ್ನೊಂದಿಗೆ ನನ್ನ ಸೋದರ ಮಾವಂದಿರ ನಾಲ್ವರು ಹುಡುಗರೂ ಬರುತ್ತಿದ್ದರು. ಬಂಧುಗಳು, ಸ್ನೇಹಿತರು ಎಲ್ಲವೂ ಆಗಿರುವ ಕಾರಣದಿಂದ ನಾವು ಐದು ಮಂದಿ ಒಟ್ಟಾಗಿಯೇ ಇರುತ್ತಿದ್ದೆವು. ನಾವು ಕಲಿಯುವುದಕ್ಕೆ ದಡ್ಡರಾಗಿದ್ದರೂ, ದೂರದ ಉಪ್ಪಿನಂಗಡಿಯಿಂದ ಬರುತ್ತಿರುವ ಮಕ್ಕಳೆಂದೂ, ಪ್ರಪ್ರಥಮವಾಗಿ ಪ್ಯಾಂಟ್ ಹಾಕಿ ಇನ್‌ಶರ್ಟ್ ಮಾಡಿಕೊಂಡು ಬರುತ್ತಿದ್ದ ಮಕ್ಕಳೆಂದು, ನಮ್ಮಲ್ಲೇ ಒಂದಿಬ್ಬರು ಕ್ರೀಡೆಯಲ್ಲಿ ಮೊದಲಿಗರಾಗಿದ್ದರೆಂದೂ, ನಾನು ಕವಿ ಬಿ.ಎಂ. ಇದಿನಬ್ಬರ ತಮ್ಮನ ಮಗನೆಂದು, ಎಲ್ಲಕ್ಕಿಂತ ಮುಖ್ಯವಾಗಿ ಉಪ್ಪಿನಂಗಡಿಯ ಮಕ್ಕಳು ಪಾಠದ ಬದಲಿಗೆ ಪುಂಡಾಟದಲ್ಲೇ ಹೆಚ್ಚು ಆಸಕ್ತಿ ಹೊಂದಿರುತ್ತಾರೆನ್ನುವ ಪೂರ್ವಗ್ರಹದ ಕಾರಣಕ್ಕಾಗಿಯೂ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ, ಮೇಷ್ಟ್ರುಗಳ ಕಣ್ಣಿಗೆ ಬಿದ್ದಿದ್ದೆವು. ಇದಲ್ಲದೆ ಮತ್ತೊಂದು ಮುಖ್ಯ ಕಾರಣವೂ ಇತ್ತು. ನಾವು ಅದಾಗಲೇ ಮದ್ರಸದಿಂದ ಹೊರ ಬಿದ್ದ ಮಕ್ಕಳು. ನಮಾಝ್- ಅದರಲ್ಲೂ ಶುಕ್ರವಾರದ ನಮಾಝನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಧಾರ್ಮಿಕವಾಗಿ ಶ್ರದ್ಧಾವಂತರಾಗಿದ್ದುದರಿಂದ ನಮ್ಮ ಮನೆಯವರೂ ಕೂಡ, ನಮ್ಮನ್ನು ಶಾಲೆಗೆ ದಾಖಲು ಮಾಡಿದ ಸಂದರ್ಭದಲ್ಲಿ ಐವರು ವಿದ್ಯಾರ್ಥಿಗಳಿಗೂ ‘ಶುಕ್ರವಾರದ ನಮಾಝ್’ಗೆ ತೆರಳಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡಿದ್ದರು. ಶಾಲೆಯ ಮಧ್ಯಾಹ್ನದ ಕೊನೆಯ ಗಂಟೆ 1:15ಕ್ಕೆ ಬಾರಿಸುತ್ತಿತ್ತು. ಮಸೀದಿಯಲ್ಲಿ ಶುಕ್ರವಾರದ ನಮಾಝ್ 12:45ಕ್ಕೆ ಆರಂಭವಾಗುತ್ತಿತ್ತು. ಶಾಲೆಯ ಪ್ರಾಂಶುಪಾಲರು ಅಬ್ರಹಾಂ ವರ್ಗೀಸ್ ಎನ್ನುವವರಾಗಿದ್ದರು. ಆ ಶಾಲೆಯನ್ನು ಕಟ್ಟಿ ಬೆಳೆಸಿದ ಹೆಗ್ಗಳಿಕೆ ಅವರದು. ವಿದ್ಯಾರ್ಥಿಗಳಿಗೆ ಶುಕ್ರವಾರದ ನಮಾಝ್‌ಗೆ ಅನುಮತಿ ನೀಡಬೇಕೆಂದು ಕೇಳಿಕೊಂಡಾಗ ಅವರು ಧಾರಾಳವಾಗಿ ಒಪ್ಪಿಗೆ ನೀಡಿದ್ದರು. ಆ ಕುರಿತಂತೆ ಇತರ ಶಿಕ್ಷಕರಿಗೆ ಸೂಚನೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು, ಅದೆಂತಹ ಪಾಠವಿರಲಿ, ಮಧ್ಯಾಹ್ನ 12:45ಕ್ಕೆ ಸರಿಯಾಗಿ ನಾವು ಐದು ಮಂದಿ ಒಮ್ಮೆಲೇ ಎದ್ದು ನಿಲ್ಲುತ್ತಿದ್ದೆವು. ಇಡೀ ತರಗತಿಯ ಅಷ್ಟೂ ಕಣ್ಣುಗಳು ಆ ಸಂದರ್ಭದಲ್ಲಿ ನಮ್ಮೆಡೆಗೆ ಹೊರಳುತ್ತಿದ್ದವು. ಶಿಕ್ಷಕರು ಹೊರ ಹೋಗುವುದಕ್ಕೆ ಅನುಮತಿ ನೀಡುತ್ತಿದ್ದರು. ನಾವು ತರಗತಿಯಿಂದ ಹೊರ ಹೋಗುತ್ತಿರುವುದನ್ನು ಅಷ್ಟೂ ವಿದ್ಯಾರ್ಥಿಗಳು ಹೊಟ್ಟೆ ಕಿಚ್ಚಿನಿಂದ ನೋಡುತ್ತಿದ್ದರು. ಶುಕ್ರವಾರದ ಬೆಳಗ್ಗಿನ ಕೊನೆಯ ತರಗತಿ ವಿಜ್ಞಾನವಾಗಿತ್ತು. ವಿಜ್ಞಾನ ನನ್ನ ಪಾಲಿಗೆ ಅದೆಷ್ಟು ಸಂಕಟದ ವಿಷಯವಾಗಿತ್ತು ಎಂದರೆ, ಪಾಠ ಕೇಳುತ್ತಾ ಕೇಳುತ್ತಾ ನಿದ್ದೆಗೆ ಜಾರುತ್ತಿದ್ದ ನನ್ನನ್ನು ಮೇಷ್ಟ್ರ ಛಡಿಯೇಟು ಮತ್ತೆ ತರಗತಿಗೆ ತಂದಿಳಿಸುತ್ತಿತ್ತು. ವಿಜ್ಞಾನ ತರಗತಿಯಲ್ಲಿ ಹಗಲುಗನಸು ಕಾಣುತ್ತಾ, ನನ್ನದೇ ಜಗತ್ತೊಂದಕ್ಕೆ ಜಾರಿಕೊಳ್ಳುವುದು ನನಗೆ ಇಷ್ಟದ ಸಂಗತಿಯಾಗಿತ್ತು. ವಿಜ್ಞಾನದ ಮೇಷ್ಟ್ರು ಕೇಳಿದ ಒಂದೇ ಒಂದು ಪ್ರಶ್ನೆಗೆ ಉತ್ತರಿಸಿದ ನೆನಪು ನನಗಿಲ್ಲ. ಶುಕ್ರವಾರದಂದು ಮಾತ್ರ ಮಧ್ಯಾಹ್ನದ ನಮಾಝ್ ಈ ವಿಜ್ಞಾನ ತರಗತಿಯಿಂದ ನನ್ನನ್ನು ಪಾರು ಮಾಡುತ್ತಿತ್ತು. ವಿಜ್ಞಾನ ಮೇಷ್ಟ್ರು ಅತ್ಯುತ್ಸಾಹದಿಂದ ಪಾಠ ಹೇಳುವುದರಲ್ಲಿ ತನ್ಮಯರಾಗಿದ್ದಾಗ, ನಾವು ಅವರೊಂದಿಗೆ ಸೇಡು ತೀರಿಸಿಕೊಳ್ಳುವವರಂತೆ 12:45ಕ್ಕೆ ಸರಿಯಾಗಿ ‘ಸಾರ್...’ ಎಂದು ಅವರ ತನ್ಮಯತೆಯನ್ನು ಭಂಗಗೊಳಿಸುತ್ತಿದ್ದೆವು. ಪಾಠದ ಓಘವನ್ನು ಕೆಡಿಸಿದ ನಮ್ಮನ್ನು ದುರುಗುಟ್ಟಿ ನೋಡುತ್ತಾ ಮೇಷ್ಟ್ರು ‘‘ಹೋಗಿ...ಒಮ್ಮೆ ಇಲ್ಲಿಂದ ಹೋಗಿ....’’ ಎನ್ನುತ್ತಿದ್ದರು. ಪಾಠ ನಡೆಯುತ್ತಿದ್ದಾಗ ಮಧ್ಯದಲ್ಲೇ ನಾವು ಎದ್ದು ನಿಂತು, ಇಡೀ ತರಗತಿಯ ಏಕಾಗ್ರತೆಯನ್ನು ಕೆಡಿಸುವುದು ಅವರಿಗೆ ಅಸಾಧ್ಯದ ಸಿಟ್ಟು ತರಿಸುತ್ತಿತ್ತು. ಆದರೆ ಪ್ರಿನ್ಸಿಪಾಲರ ಕಟ್ಟುನಿಟ್ಟಿನ ಸೂಚನೆಯಿದ್ದುದರಿಂದ ಅವರು ಅಸಹಾಯಕರಾಗಿದ್ದರು. ನನಗಂತೂ ಶುಕ್ರವಾರದ ವಿಜ್ಞಾನದ ತರಗತಿಯಲ್ಲಿ ಒಮ್ಮಿಂದೊಮ್ಮೆಗೆ ಎದ್ದು ನಿಂತು ‘‘ಸಾರ್...’’ ಎಂದು ಕರೆಯುವುದು ಅತ್ಯಂತ ಇಷ್ಟದ ಸಂಗತಿಯಾಗಿತ್ತು. ‘‘ಈ ಮಹಾಶಯ ಒಂದು ದಿನವಾದರೂ ಪಾಠಕ್ಕೆ ಸಂಬಂಧಿಸಿದಂತೆ ಹೀಗೆ ಎದ್ದು ನಿಂದು ‘ಸಾರ್’ ಎಂದು ಕರೆದದ್ದಿದೆಯ?’’ ಎಂದು ಮೇಷ್ಟ್ರು ಕಿಡಿಕಾರುತ್ತಿದ್ದರು. ನಮಾಝ್ ಹೆಸರಿನಲ್ಲಿ ಕ್ಲಾಸಿನಿಂದ ಹೊರಗೆ ಬರುವಾಗ, ಹೊರಗಿನ ಮಧ್ಯಾಹ್ನದ ಆ ಸುಡು ಗಾಳಿಯನ್ನು ‘ಆಹಾ...’ ಎಂದು ಆಸ್ವಾದಿಸುತ್ತಿದ್ದೆ. ಇದು ಹೀಗೆಯೇ ಮುಂದುವರಿಯುತ್ತಿತ್ತು. ಅಂದು ಶುಕ್ರವಾರ. ವಿಜ್ಞಾನದ ಮೇಷ್ಟ್ರು ಯಾವುದೋ ಕಾರಣಕ್ಕೆ ರಜೆಯಲ್ಲಿದ್ದರು. ವಿಜ್ಞಾನದ ತರಗತಿ ಇಲ್ಲದಿರುವ ಖುಷಿಗೆ ಸಮನಾದದ್ದು ಇನ್ನೊಂದಿಲ್ಲ ಎನ್ನುವಂತೆ ಅದನ್ನು ಅನುಭವಿಸುತ್ತಿದ್ದೆ. ಬೆಳಗ್ಗಿನ ಕೊನೆಯ ತರಗತಿಯಲ್ಲಿ ಇನ್ನೇನು ನಾನು ಪತ್ತೇದಾರಿ ಕಾದಂಬರಿಯೊಂದನ್ನು ಬಿಡಿಸಿಟ್ಟು ಓದಬೇಕು ಎನ್ನುವಷ್ಟರಲ್ಲಿ ಶಾಲೆಯ ಪ್ರಿನ್ಸಿಪಾಲ್ ಅಬ್ರಹಾಂ ವರ್ಗೀಸರು ಇಂಗ್ಲಿಷ್ ಪಠ್ಯವನ್ನು ಹಿಡಿದುಕೊಂಡು ಬಂದರು. ಅದು ನಮಗೆ ಅನಿರೀಕ್ಷಿತವಾಗಿತ್ತು. ನಮ್ಮ ತರಗತಿಗೆ ಪ್ರಿನ್ಸಿಪಾಲರು ಬರುವುದು ತೀರಾ ಅಪರೂಪ. ನಾವೆಲ್ಲ ಒಳ್ಳೆಯ ಮಕ್ಕಳ ಮುಖಭಾವದಿಂದ ಕುಳಿತೆವು. ಅವರು ತರಗತಿ ಪ್ರವೇಶಿಸಿದವರು ನಮ್ಮನ್ನೆಲ್ಲ ಪರಿಚಯಿಸಿಕೊಂಡ ಬಳಿಕ ಇಂಗ್ಲಿಷ್ ಪಠ್ಯದಿಂದ ಟಾಲ್‌ಸ್ಟಾಯ್ ಅವರ ಕತೆಯೊಂದನ್ನು ಆಯ್ಕೆ ಮಾಡಿಕೊಂಡರು. ನೋಡು ನೋಡುತ್ತಿದ್ದಂತೆಯೇ ಟಾಲ್‌ಸ್ಟಾಯ್ ಕತೆ ಅಬ್ರಹಾಂ ವರ್ಗೀಸರ ಮೂಲಕ ತೆರೆದುಕೊಂಡ ರೀತಿಗೆ ಇಡೀ ತರಗತಿ ಮಾರು ಹೋಯಿತು. ಅದೊಂದು ನೆರೆ-ಹೊರೆಯ ಜಗಳದ ಕತೆ. ಒಂದು ಸಣ್ಣ ದ್ವೇಷದ ಕಿಡಿ ಹಂತ ಹಂತವಾಗಿ ಹರಡಿ ಇಡೀ ಊರನ್ನೇ ಹೇಗೆ ಆಹುತಿ ತೆಗೆದುಕೊಂಡಿತು ಎನ್ನುವುದು ಕತೆಯ ವಸ್ತು. ಈ ಜಗಳವನ್ನು ತಡೆಯುವುದಕ್ಕೆ ‘ಗ್ಯಾಬ್ರಿಯಲ್’ ಎನ್ನುವ ಮುದುಕ ಮಾಡುವ ಪ್ರಯತ್ನ, ಆತನ ವೈಫಲ್ಯ, ಗ್ಯಾಬ್ರಿಯಲ್ ಮಗನ ಸಿಟ್ಟು, ಸೊಸೆಯ ಹಟಮಾರಿತನ ಇತ್ಯಾದಿಗಳನ್ನು ಅವರು ಅಭಿನಯಿಸುತ್ತಾ ನಮ್ಮ ಮುಂದಿಡುತ್ತಿದ್ದರು. ನಮ್ಮ ತರಗತಿಯಲ್ಲಿ ಒಂದು ಊರೇ ತೆರೆದುಕೊಂಡಿತ್ತು. ವಿವಿಧ ಪಾತ್ರಗಳು ಅಬ್ರಹಾಂ ವರ್ಗೀಸರ ಮೂಲಕ ಅಲ್ಲಿ ಜೀವ ತಳೆಯುತ್ತಿದ್ದವು. ಕೋಲೂರುತ್ತಾ ನಡುಗು ಕಂಠದಿಂದ ಮಗನಿಗೆ ಬುದ್ಧಿವಾದ ಹೇಳುವ ಗ್ಯಾಬ್ರಿಯಲ್‌ನ್ನು ಅದೇ ತರಹ ಅಭಿನಯಿಸಿ ತೋರಿಸುವಾಗ ಇಡೀ ತರಗತಿ ಗ್ಯಾಬ್ರಿಯಲ್ ಜೊತೆಗಿತ್ತು. ಕಡಲಿನೆಡೆಗೆ ಸಾಗುವ ನದಿಯಂತೆ ಅವರ ಪಾಠ ಹರಿಯುತ್ತಿತ್ತು. ನಮ್ಮ ಮುಂದೆ ಅಬ್ರಹಾಂ ವರ್ಗೀಸರು ಇದ್ದೇ ಇರಲಿಲ್ಲ. ಅಲ್ಲಿ ಟಾಲ್‌ಸ್ಟಾಯ್ ಕತೆಯ ವಿವಿಧ ಪಾತ್ರಗಳು ಓಡಾಡುತ್ತಿದ್ದವು. ನಾವು ಕೂಡ ಅಷ್ಟೇ, ತರಗತಿಯಿಂದ ಟಾಲ್‌ಸ್ಟಾಯ್ ಜಗತ್ತಿಗೆ ಎತ್ತಿ ಎಸೆಯಲ್ಪಟ್ಟಿದ್ದೆವು. ಹೀಗೆ ಸಾಗುತ್ತಿದ್ದಂತೆಯೇ ಒಮ್ಮೆಲೆ ಅವರು ಪಾಠವನ್ನು ನಿಲ್ಲಿಸಿದರು. ತಮ್ಮ ಗಡಿಯಾರದತ್ತ ಕಣ್ಣಾಯಿಸಿದರು. ನನ್ನನ್ನು ಮತ್ತು ನನ್ನ ನಾಲ್ವರು ಗೆಳೆಯರನ್ನು ನಿಲ್ಲಿಸಿದ ಅವರು ‘‘ನಮಾಝ್‌ಗೆ ಸಮಯವಾಯ್ತು. ಹೊರಡಿ’’ ಎಂದರು. ನನ್ನ ನಾಲ್ವರು ಗೆಳೆಯರು ಗಡಿಬಿಡಿಯಿಂದ ಎದ್ದು ಹೊರಟರು. ಆದರೆ ನನಗ್ಯಾಕೋ ತರಗತಿಯಿಂದ ಹೊರ ಹೋಗುವುದು ಇಷ್ಟವಿರಲಿಲ್ಲ. ನನ್ನತ್ತ ನೋಡಿ ‘‘ಹೋಗು ಹೋಗು ಹೊತ್ತಾಯ್ತು’’ ಎಂದರು. ನಾನು ತಡವರಿಸುತ್ತಾ ‘‘ಇವತ್ತು ನಾನು ಹೋಗುವುದಿಲ್ಲ ಸಾರ್...’’ ಎಂದೆ. ‘‘ಯಾಕೆ?’’ ನನ್ನಲ್ಲಿ ಉತ್ತರವಿರಲಿಲ್ಲ. ಅಬ್ರಹಾಂ ವರ್ಗೀಸ್ ನಕ್ಕು ‘‘ಸರಿ....’’ ಎಂದರು. ನಾನು ಕೂತೆ. ಮತ್ತೆ ತರಗತಿಯಲ್ಲಿ ಟಾಲ್‌ಸ್ಟಾಯ್ ಜಗತ್ತು ನಿಧಾನಕ್ಕೆ ತೆೆದುಕೊಳ್ಳತೊಡಗಿತು.

***

ಇತ್ತೀಚೆಗೆ ನನ್ನ ಮೆಚ್ಚಿನ ಅಬ್ರಹಾಂ ವರ್ಗೀಸ್ ಮೇಷ್ಟ್ರು ಉದ್ಯೋಗದಿಂದ ನಿವೃತ್ತರಾದರು. ಅವರಿಗೆ ಊರವರೆಲ್ಲ ಸೇರಿ ನೆಲ್ಯಾಡಿಯ ಸಂತ ಜೋರ್ಜ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅದ್ದೂರಿಯ ಸನ್ಮಾನವನ್ನು ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ. ಆದರೆ, ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಮನದಂಗಳದಲ್ಲಿ ಅವರಿಗೆ ನಿತ್ಯವೂ ಸನ್ಮಾನವೇ.

Writer - ಬಿ.ಎಂ. ಬಶೀರ್

contributor

Editor - ಬಿ.ಎಂ. ಬಶೀರ್

contributor

Similar News