ಕಲಿಕೆ ವಿವಿಧ ಹಂತಗಳಲ್ಲಿ... 2

Update: 2019-04-27 18:18 GMT

ಅಧ್ಯಯನ ಮತ್ತು ಅರಿವು

ಕಲಿಕೆಯೆಂಬ ಪ್ರಕ್ರಿಯೆ ಭಾಗ-18

ಯೋಗೇಶ್ ಮಾಸ್ಟರ್

►ಜ್ಞಾನ ಮತ್ತು ಕೌಶಲ್ಯ

ಈಬೆಳೆಯುವ ಪೈರು ಅಂಕಣದ ವಿವಿಧ ಲೇಖನಗಳಲ್ಲಿ ಪದೇ ಪದೇ ಒತ್ತಿ ಹೇಳಿರುವ ಅಂಶವೆಂದರೆ ಕಲಿಸುವುದು ಎಂದರೆ ರೂಢಿಸುವುದು. ಮಕ್ಕಳಿಗೆ ಬೋಧನೆ ಎಂಬುದು ಇಲ್ಲ. ಬೋಧನೆಯೂ ಕೂಡಾ ತರಬೇತಿ ಕೊಡುವಂತಹ ಅಥವಾ ರೂಢಿಸುವಂತಹ ಪ್ರಕಿಯೆಯ ಒಂದು ಸಣ್ಣ ಭಾಗ. ಬೋಧನೆ ಎಂಬುದರ ಅರ್ಥವನ್ನೂ ವಿಸ್ತರಿಸಿಯೇ ಗ್ರಹಿಸಬೇಕು. ಬಾಯಿಂದ ಹೇಳುವುದು ಮತ್ತು ಕಿವಿಯಿಂದ ಕೇಳುವುದು ಮಾತ್ರ ಬೋಧನೆ ಎಂದಿಗೂ ಅಲ್ಲ. ವೌಖಿಕವಲ್ಲದ, ವಾಚಕವಲ್ಲದ ಬೋಧನೆಗಳೂ ಕೂಡಾ ಸಾಕಷ್ಟಿವೆ. ಅವು ಚಟುವಟಿಕೆಗಳ ಮೂಲಕವಾಗಿರುತ್ತದೆ. ಚಿತ್ರರೂಪದಲ್ಲಿರುತ್ತವೆ. ಮಾಡುವ ಕೆಲಸಗಳ ಮೂಲಕವಾಗಿರುತ್ತವೆ. ಬರಿದೇ ಗಮನಿಸುವಿಕೆಯ ಮೂಲಕವೂ ಆಗಿರುತ್ತದೆ. ಹಾಗಾಗಿ ಬೋಧನೆಯ ವ್ಯಾಪ್ತಿಯನ್ನು ಹೇಳುವಿಕೆ ಮತ್ತು ಕೇಳುವಿಕೆಗೆ ಮಾತ್ರವೆಂದೂ ಕುಗ್ಗಿಸಲೇಬಾರದು.

ಇರಲಿ, ಈಗ ನಾವು ಗಮನಿಸಬೇಕಾದದ್ದು ಏನೆಂದರೆ, ಭಾಷೆ, ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ಇವುಗಳನ್ನು ಒಂದು ಪಠ್ಯಕ್ರಮದಂತೆ ವಿವಿಧ ವಯಸ್ಸಿಗೆ ಅನುಗುಣವಾಗಿ ಯೋಜಿಸಿ ದಂತೆ, ಇತರ ವಿಷಯಗಳನ್ನೂ ಕೂಡಾ ಯೋಜಿಸಲೇಬೇಕು.

ಈ ತರಬೇತಿಯ ಯೋಜನೆಯು ಎರಡು ಮುಖ್ಯವಾದ ಅಂಶಗಳನ್ನು ಒಳಗೊಂಡಿರುತ್ತದೆ. ಒಂದು ಜ್ಞಾನ, ಮತ್ತೊಂದು ಆ ಜ್ಞಾನವನ್ನು ಬಳಸಿಕೊಳ್ಳುವ ಕೌಶಲ್ಯ. ಜ್ಞಾನವೆಂದರೆ ಯಾವುದೇ ಒಂದು ವಸ್ತು ಅಥವಾ ವಿಷಯದಲ್ಲಿ ಇರಬೇಕಾಗಿರುವಂತಹ ತಿಳುವಳಿಕೆ ಮತ್ತು ಅದರ ಬಗ್ಗೆ ಹೊಂದಲೇ ಬೇಕಾಗಿರುವ ಮಾಹಿತಿ. ಹಾಗೆಯೇ ಕೌಶಲ್ಯವೆಂದರೆ, ಇದೇ ಜ್ಞಾನವನ್ನು ತನ್ನ ಮತ್ತು ಇತರರಿಗಾಗಿ ಬಳಸಿಕೊಳ್ಳಲು ಬೇಕಾಗಿರುವಂತಹ ಪ್ರಾಯೋಗಿಕ ತಂತ್ರಗಾರಿಕೆ, ಜಾಣ್ಮೆ, ಚತುರತೆ; ಹೀಗೆ ಏನಾದರೂ ಹೇಳಿ. ಒಟ್ಟಾರೆ ಈ ಜ್ಞಾನ ಮತ್ತು ಕೌಶಲ್ಯವನ್ನು ರೂಢಿಸಿಕೊಳ್ಳಲು ಬೇಕಾಗಿರುವುದು ಮುಖ್ಯವಾಗಿ ಶಿಸ್ತು. ತನ್ನನ್ನು ತಾನು ಕ್ರಮಗೊಳಿಸಿಕೊಳ್ಳಲು ಬೇಕಾಗಿರುವಂತಹ ಶಿಸ್ತು. ಶಿಸ್ತು ಎಂದರೆ ತಾನು ಮಾಡಬೇಕಾಗಿರುವುದನ್ನು ಕ್ರಮಬದ್ಧವಾಗಿ ಮಾಡಿಕೊಂಡು ಹೋಗುವುದಕ್ಕೆ ಬದ್ಧವಾಗಿರುವುದು ಅಷ್ಟೇ.

ಸರಿ, ಈಗ ತಿಳಿದಿದ್ದೇನೆಂದರೆ, ಮಗುವಿಗೆ ಜ್ಞಾನ ಮತ್ತು ಕೌಶಲ್ಯವನ್ನು ಹಂತಹಂತವಾಗಿ ಪರಿಚಯಿಸುತ್ತಾ ರೂಢಿ ಮಾಡಿಸುವುು ಅಥವಾ ತರಬೇತಿಗೊಳಿಸುವುದು.

ನಿದ್ರೆಯ ಶಿಸ್ತು: ಒಂದು ಸರಿಯಾದ ಸಮಯಕ್ಕೆ ನಿದ್ರೆ ಹೋಗುವುದು ಮುಖ್ಯವಾಗಿ ರೂಢಿಸಬೇಕಾಗಿರುವ ಒಂದು ಶಿಸ್ತು. ಈ ಶಿಸ್ತನ್ನು ಒಂದು ವರ್ಷದಿಂದ ಆರು ವರ್ಷದವರೆಗೂ ರೂಢಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ತಾವೇ ಅದನ್ನು ರೂಢಿಸಿ ಕೊಂಡು ಹೋಗುತ್ತಾರೆ. ಆಹಾರ ಮತ್ತು ದೇಹಕ್ಕೆ ಬೇಕಾಗಿರುವ ಇತರ ಅಗತ್ಯಗಳಂತೆ ನಿದ್ರೆ ಕೂಡಾ ಅತಿ ಆವಶ್ಯಕ. ಜೊತೆಗೆ ಇದು ದೇಹಕ್ಕೆ ಮಾತ್ರವಲ್ಲದೇ ಮನಸ್ಸಿಗೆ, ನರಗಳಿಗೆ ಮತ್ತು ದೇಹದ ಅಂಗಾಂಗಗಳಿಗೆ ಕೂಡಾ ವಿಶ್ರಾಂತಿ ನೀಡುತ್ತದೆ. ನಿದ್ರೆ ಹೋಗುವಾಗ ಮಲಗುವ ವಿಧಾನ, ಮಲಗುವ ಸ್ಥಳದ ಸ್ವಚ್ಛತೆ, ಹಾಸುಗೆ ಹೊದಿಕೆಗಳ ಸ್ವಚ್ಛತೆ, ಅವುಗಳನ್ನು ಇಡುವುದರಲ್ಲಿನ ಕ್ರಮ; ಈ ಎಲ್ಲವನ್ನೂ ಅತ್ಯವಶ್ಯವಾಗಿ ಮಗುವಿನ ಗಮನಕ್ಕೆ ಬರುವಂತೆ ಮಾಡಬೇಕು. ಕೆಲವು ಮನೆಗಳಲ್ಲಿ ಹಾಸಿಗೆಯನ್ನು ಜಾಡಿಸುವುದೂ ಇಲ್ಲ. ಹೊದಿಕೆಯನ್ನು ಕೊಡವುವುದೂ ಇಲ್ಲ. ದಿನವೆಲ್ಲಾ ಅವು ಹಾಗೇ ಇರುತ್ತದೆ. ರಾತ್ರಿ ಮತ್ತೆ ಹೋಗಿ ಅದರಲ್ಲಿ ಬಿದ್ದುಕೊಳ್ಳುವರು. ಇದು ಸರಿಯಾದ ಕ್ರಮವೂ ಅಲ್ಲ. ಆರೋಗ್ಯಕರವಾದ ಮನಸ್ಥಿತಿಯನ್ನು ರೂಢಿಸುವುದೂ ಇಲ್ಲ. ಜೊತೆಗೆ ಧೂಳು, ಇರುವೆ, ಕ್ರಿಮಿಗಳು ಅಥವಾ ರೋಗಾಣುಗಳೇನಾದರೂ ಕೂಡಾ ಆ ಕುಪ್ಪೆಯಲ್ಲಿ ವಸತಿ ಮಾಡಿಕೊಂಡಿದ್ದು ಅವು ಮಕ್ಕಳಿಗೆ ನಾನಾ ತರಹದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆದ್ದರಿಂದ ಸರಿಯಾದ ಸಮಯಕ್ಕೆ ಮಲಗುವ ರೂಢಿಯ ಜೊತೆಗೆ ಮಲಗುವ ಸ್ಥಳವನ್ನು ಶುದ್ಧವಾಗಿಟ್ಟುಕೊಳ್ಳುವ ರೂಢಿಯನ್ನು ಕೂಡಾ ಮಾಡಿಸಬೇಕು. ಅಂಬೆಗಾಲಿಡುವ ಮಗುವಿನ ವಯೋಮಾನದಿಂದಲೇ ಈ ರೂಢಿಯ್ನು ಮಾಡಿಸುವುದು ನಿಜಕ್ಕೂ ಒಳಿತು.

ಕ್ರಮವಾಗಿ ಸ್ನಾನ, ಹಲ್ಲುಜ್ಜುವುದು, ಮಲಗುವುದು ಮತ್ತುಪುಸ್ತಕಗಳನ್ನು ಓದುವುದು ಎಲ್ಲವೂ ಕೂಡಾ ಸ್ವಶಿಸ್ತಿನಿಂದ ರೂಢಿಗೊಳ್ಳುವ ತರಬೇತಿಗಳೇ. ಇವೆಲ್ಲವೂ ಆರು ಅಥವಾ ಏಳು ವರ್ಷದಷ್ಟರ ಹೊತ್ತಿಗೆ ರೂಢಿಗೊಂಡಿರಬೇಕು. ರಾತ್ರಿಯಾಗುತ್ತಿದ್ದಂತೆ ಮಗುವು ತನ್ನ ಊಟದ ನಂತರ ತಾನಾಗಿ ಹಲ್ಲುಜ್ಜಿ ಮಲಗುವುದಕ್ಕೆ ಹೋಯಿತೆಂದರೆ ರೂಢಿಸುವುದರಲ್ಲಿ ನೀವು ಯಶಸ್ವಿಯಾಗಿದ್ದೀರಿ ಎಂದೇ ಅರ್ಥ. ಒಂಬತ್ತರಿಂದ ಹನ್ನೊಂದು ಗಂಟೆಗಳ ನಿದ್ರೆಯ ಅಗತ್ಯ ಮಕ್ಕಳಿಗೆ ಇರುವುದರಿಂದ ರಾತ್ರಿ ಎಂಟು - ಒಂಬತ್ತು ಗಂಟೆಗಳಿಗೆಲ್ಲಾ ಮಲಗಲು ಹೋಗುವಂತೆ ಮನೆಯಲ್ಲಿ ವ್ಯವಸ್ಥೆಯಾಗಿರಬೇಕು.

ಈಜು ಕಲಿಸಿ: ಯಾವುದೇ ವಯಸ್ಸಿನ ಮಕ್ಕಳು ನೀರಿನಲ್ಲಿ ಆಡುವುದನ್ನು ಇಷ್ಟಪಡುತ್ತಾರೆ. ಜೊತೆಗೆ ನೀರಿನ ಒಡನಾಟ ಅವರಿಗೆ ನಿಸರ್ಗ ಸಹಜವಾಗಿ ಆಪ್ತ. ಗರ್ಭದೊಳಿದ್ದಾಗಿನಿಂದಲೂ ಅವರಿಗೆ ನೀರಿನ ಸಂಪರ್ಕವಿದ್ದು ಅವರಿಗೆ ಅದು ಪ್ರಿಯವಾಗಿಯೇ ಇರುತ್ತದೆ. ಒಂದು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಯಾವಾಗಲಾದರೂ ಈಜು ಕಲಿಸಲು ಪ್ರಾರಂಭಿಸಬಹುದು. ಆರು ತಿಂಗಳಿನ ಮಕ್ಕಳಿಗೆ ಈಜು ಕಲಿಸುವ ಪದ್ಧತಿಗಳು ಉಂಟು. ಯಾವುದೇ ಮಗುವು ನೀರಿನ ಬಗ್ಗೆ ಭಯಪಡುತ್ತಿದೆ ಎಂದರೆ, ಮಗುವಿಗೆ ಏನೋ ಫೋಬಿಯಾದಂತಹ ಸಮಸ್ಯೆ ಇದೆ ಎಂದು ಅರ್ಥ. ಕೆಲವು ಪೋಷಕರು, (ನಮ್ಮ ಬೆಂಗಳೂರು ಮತ್ತು ಸುತ್ತಮುತ್ತ ಕಡೆ ಬಹಳ ನೋಡಿದ್ದೇನೆ) ಮಗು ಹೇಳಿದ ಮಾತು ಕೇಳಲಿಲ್ಲವೆಂದರೆ ನೀರು ಎರಚುವುದು ಅಥವಾ ಉಸಿರುಗಟ್ಟುವಂತೆ ಒಂದೇ ಸಮನೆ ನೀರು ಸುರಿಯುವುದು ಶಿಕ್ಷೆಯ ಭಾಗವಾಗಿ ಮಾಡುತ್ತಾರೆ. ಇಂತವೆಲ್ಲಾ ಫೋಬಿಯಾಗಳನ್ನು ಸೃಷ್ಟಿಸುತ್ತದೆ. ಮಗುವು ನೀರಿನ ಬಗ್ಗೆ ಹೆದರಿಕೆ ಅಥವಾ ತಿರಸ್ಕಾರವನ್ನು ಹೊಂದುತ್ತದೆ. ಇದು ಮುಂದೆ ತೊಂದರೆಗೆ ಈಡು ಮಾಡುತ್ತದೆ. ಈಜಿನಿಂದಾಗಿ ಶಾರೀರಿಕ ವ್ಯಾಯಾಮವೂ ಕೂಡಾ ಆಗುತ್ತದೆ. ಜೊತೆಗೆ ಶ್ವಾಸಕೋಶಕ್ಕೂ ಒಳ್ಳೆಯ ವ್ಯಾಯಾಮವಾಗುತ್ತದೆ. ಉಸಿರಾಟದ ಸಾಮರ್ಥ್ಯ ಹೆಚ್ಚುತ್ತದೆ.

ಆಹಾರದ ಶಿಸ್ತು: ಆಹಾರದ ವಿಷಯದಲ್ಲಿಯೂ ಕೂಡ ಕಲಿಕೆಯ ಮಹತ್ವದ ಪಾತ್ರವಿದೆ. ಆಹಾರ ಸೇವನೆಯ ಸಮಯದಲ್ಲಿ ಅನುಸರಿಸಬೇಕಾದ ಶುಚಿತ್ವದ ಶಿಸ್ತಿನ ಜೊತೆಗೆ ಮಗುವು ಎರಡು ವರ್ಷವಿರುವಾಗಲೇ ತನ್ನ ಆಹಾರವನ್ನು ತಾನೇ ಸಿದ್ಧಪಡಿಸಿಕೊಂಡು ತಿನ್ನುವುದನ್ನು ರೂಢಿ ಮಾಡಿಸಬೇಕು. ನಮ್ಮಲ್ಲಿ ಮಕ್ಕಳು ಚೆಲ್ಲಿಕೊಂಡುಬಿಡುತ್ತಾರೆ, ಬಿಸಿಯಾದ ಪಾತ್ರೆ ಅಥವಾ ವಸ್ತುಗಳನ್ನು ಮುಟ್ಟಿ ಕೈ ಸುಟ್ಟುಕೊಂಡುಬಿಡುತ್ತಾರೆ, ಗಾಜಿನ ಅಥವಾ ಇತರ ವಸ್ತುಗಳನ್ನು ಬೀಳಿಸಿ ಒಡೆದು ಹಾಕಿಬಿಡುತ್ತಾರೆ, ಪಾಪ, ಅವರಿಗೆ ಭಾರ ಎತ್ತಲಾಗುವುದಿಲ್ಲ; ಹೀಗೆ ಹಲವು ಕಾರಣಗಳನ್ನು ಕೊಟ್ಟುಕೊಂಡು ತಮ್ಮ ಮಗುವು ಸ್ವತಂತ್ರವಾಗಿ ಆಹಾರ ಸಿದ್ಧಪಡಿಸಿಕೊಂಡು ತಿನ್ನುವುದಕ್ಕೂ ಕ್ರಮವನ್ನು ರೂಢಿಸುವುದಿಲ್ಲ. ತಾವೇ ಕಲಿಸಿಕೊಡುವುದು, ತಾವೇ ತಿನ್ನಿಸುವುದು, ತಾವೇ ಸಿದ್ಧಪಡಿಸುವುದು, ಉಪಯೋಗಿಸಿದ ತಟ್ಟೆ ಮತ್ತು ಲೋಟಗಳನ್ನು ತಾವೇ ನಂತರ ತೊಳೆಯುವುದು; ಇತ್ಯಾದಿಗಳನ್ನು ಮಾಡುತ್ತಾ ಆಹಾರಕ್ಕೆ ಸಂಬಂಧಪಟ್ಟ ಶಿಸ್ತನ್ನು ರೂಢಿಸುವುದೇ ಇಲ್ಲ. ಇನ್ನೂ ಕೆಲವರಿಗೆ ಇದೊಂದು ಹೆಮ್ಮೆಯ ವಿಷಯ ನಮ್ಮ ಮಗು ಎಷ್ಟು ದೊಡ್ಡದಾದರೂ ನಾವೇ ಎಲ್ಲ ಮಾಡುತ್ತೇವೆ ಎಂದು ಹೇಳಿಕೊಳ್ಳುವುದು. ಇದು ಮಗುವನ್ನು ಪರಾವಲಂಬಿಯಾಗಿಸುವುದರ ಜೊತೆ ಅಶಿಸ್ತಿನ ವಿಷಯವೂ ಕೂಡಾ. ಒಂದು ಮಗುವಿಗೆ ತನ್ನ ಆಹಾರವನ್ನು ತಾನೇ ಸಿದ್ಧಪಡಿಸಿಕೊಂಡು, ಅಂದರೆ, ಪಾತ್ರೆಯಿಂದ ತಾನೇ ಹಾಕಿಕೊಂಡು, ಅದಕ್ಕೆ ಬೇಕಾದನ್ನು ಬೆರೆಸಿಕೊಂಡು ತಾನೇ ತಿನ್ನುವುದು ಎರಡನೆಯ ವರ್ಷದಿಂದಲೇ ಮಾಡಬೇಕು. ಆಗಲೇ ಅದಕ್ಕೆ ಆ ಸಾಮರ್ಥ್ಯವಿರುತ್ತದೆ. ನಿಜ ಹೇಳಬೇಕೆಂದರೆ, ಬೇಸಿಕ್ ಕುಕ್ಕಿಂಗ್ ಮಾಡುವುದನ್ನು ಎರಡು ಮೂರು ವರ್ಷದ ನಂತರ ಪ್ರಾರಂಭಿಸಿಬಿಡಬೇಕು. ಮಕ್ಕಳು ಸರಳವಾದ ಮತ್ತು ಅಗತ್ಯವಾದ ಪ್ರಾರಂಭಿಕ ಅಡುಗೆಗಳನ್ನು ಮಾಡಲು ಕಲಿಯಲಾರಂಭಿಸಬೇಕು. ಟೋಸ್ಟರ್, ಓವನ್, ಓಪನರ್, ಚಾಕುಗಳನ್ನು ಬಳಸುವುದು ಇತ್ಯಾದಿಗಳನ್ನೂ ಕೂಡಾ ಎರಡು ಮೂರು ವರ್ಷಗಳ ಹೊತ್ತಿಗೇ ಪ್ರಾರಂಭಿಸಿರಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News