ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಮೂವರ ಬಂಧನ: 78 ಮಹಿಳೆಯರ ರಕ್ಷಣೆ
ಬೆಂಗಳೂರು, ಎ.28: ಕಾನೂನು ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಡ್ಯಾನ್ಸ್‌ಬಾರ್ ನಡೆಸುತ್ತಿದ್ದ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 78 ಮಹಿಳೆಯರನ್ನು ರಕ್ಷಿಸಿ 4.25 ಲಕ್ಷ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮುರುಗೇಶ್ ಪಾಳ್ಯದ ಅಶೋಕ್ ಶೆಟ್ಟಿ, ಸಚಿನ್ ಹಾಗೂ ಮೋಹನ್ ಎಂಬುವರು ಬಂಧಿತ ಆರೋಪಿಗಳೆಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಇಲ್ಲಿನ ಬ್ರಿಗೇಡ್ ರಸ್ತೆ ಹಾಗೂ ಕಲಾಸಿಪಾಳ್ಯ ವ್ಯಾಪ್ತಿಯಲ್ಲಿನ ರೆಸ್ಟೋರೆಂಟ್‌ನಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಕಾನೂನು ಬಾಹಿರ ಡ್ಯಾನ್ಸ್‌ಬಾರ್ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಶನಿವಾರ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು, ಎರಡು ಡ್ಯಾನ್ಸ್‌ಬಾರ್‌ಗಳಲ್ಲಿದ್ದ 100 ಜನ ಗಿರಾಕಿಗಳನ್ನು ವಶಕ್ಕೆ ಪಡೆದಿದ್ದು, ರಾಜ್ಯದ 78 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಬಂಧಿತರ ವಿರುದ್ಧ ಅಶೋಕನಗರ ಹಾಗೂ ಕಲ್ಯಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.