ಮೈಸೂರು ವಿವಿ ಅರೆಕಾಲಿಕ, ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಹೈಕೋರ್ಟ್ ಆದೇಶ

Update: 2019-04-28 13:11 GMT

ಬೆಂಗಳೂರು, ಎ.28: ಮೈಸೂರು ವಿವಿಯಲ್ಲಿ ಅರೆಕಾಲಿಕ ಅಥವಾ ಅತಿಥಿ ಉಪನ್ಯಾಸಕರಾಗಿ 10 ವರ್ಷಕ್ಕೂ ಅಧಿಕ ಅವಧಿ ಪೂರ್ಣಗೊಳಿಸಿರುವವರನ್ನು ಖಾಯಂಗೊಳಿಸುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸೇವೆ ಕಾಯಂಗೊಳಿಸಲು ರಾಜ್ಯ ಸರಕಾರ ಹಾಗೂ ಮೈಸೂರು ವಿವಿಗೆ ನಿರ್ದೇಶಿಸುವಂತೆ ಕೋರಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಅಟ್ಟಿಹಳ್ಳಿಯ ಡಾ.ಎಂ.ಕಾಂತರಾಜು ಸೇರಿ 50ಕ್ಕೂ ಅಧಿಕ ಉಪನ್ಯಾಸಕರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ, ಈ ತೀರ್ಪು ನೀಡಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ-1976ರ ಸೆಕ್ಷನ್ 51ಬಿ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000ದ ಸೆಕ್ಷನ್ 56ರ ಅನುಸಾರ ಅತಿಥಿ ಉಪನ್ಯಾಸಕರು ಅಥವಾ ಅರೆಕಾಲಿಕ ಉಪನ್ಯಾಸಕರನ್ನು ಒಂದು ಸಲದ ಕ್ರಮವಾಗಿ ತಕ್ಷಣವೇ ಖಾಯಂಗೊಳಿಸಬೇಕು. ತೀರ್ಪು ನೀಡಿದ ದಿನದಿಂದ ಆರು ತಿಂಗಳ ಒಳಗೆ ಸೇವೆ ಖಾಯಂಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಹೈಕೋರ್ಟ್ ಮೈಸೂರು ವಿವಿಗೆ ಆದೇಶಿಸಿದೆ.

ತೀರ್ಪಿನಲ್ಲೇನಿದೆ: ಸೇವಾ ಕಾಯಂ ನಿಯಮ 2014 ಅನ್ನು 2007ರ ಫೆ.7ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಆನಂತರವೂ ವಿವಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000ದ ಸೆಕ್ಷನ್ 56 ಅನ್ವಯ ತಾತ್ಕಾಲಿಕ ನೇಮಕಗಳನ್ನು ಮುಂದುವರಿಸಿದೆ. ಸೆಕ್ಷನ್ 56ರ ಉಪ ನಿಯಮ(1)ರ ಅನ್ವಯ ಮಂಜೂರಾದ ಹುದ್ದೆಗಳಿಗೆ ವಿಳಂಬ ಮಾಡದೆ ನೇಮಕಾತಿಗಳನ್ನು ಮಾಡಿಕೊಳ್ಳಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಸೇವಾ ಖಾಯಂ ನಿಯಮದಂತೆ 10 ವರ್ಷಕ್ಕೂ ಅಧಿಕ ಅವಧಿ ಸೇವೆ ಸಲ್ಲಿಸಿರುವ ಉಪನ್ಯಾಸಕರನ್ನು ಖಾಯಂಗೊಳಿಸಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ. ಯುಜಿಸಿ ನಿಯಮದಂತೆ ಎನ್‌ಇಟಿ, ಎಸ್‌ಎಲ್‌ಇಟಿ ಸೇರಿ ಅಗತ್ಯ ವಿದ್ಯಾರ್ಹತೆಗಳನ್ನು ಪಡೆಯಲು ನಿಗದಿತ ಅವಧಿಯಲ್ಲಿ ಅಗತ್ಯ ವಿದ್ಯಾರ್ಹತೆ ಪಡೆದುಕೊಳ್ಳಲು ಷರತ್ತುಗಳನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದೆ. ಸೇವೆ ಖಾಯಂ ವೇಳೆ ವಿಶ್ವವಿದ್ಯಾಲಯ ರೋಸ್ಟರ್ ಮತ್ತು ಮೀಸಲು ನಿಯಮ ಪಾಲಿಸಬೇಕೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News