ನಾನು ಮಾಧ್ಯಮಗಳನ್ನು ಬಹಿಷ್ಕರಿಸಿದ್ದೇನೆ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಎ.28: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಹಲವು ಬಾರಿ ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಂದು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿರುವುದಾಗಿ ತಿಳಿಸಿದರು.
ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖರ ಸಭೆಯನ್ನು ಮುಗಿಸಿ ಹೊರ ಬಂದ ಮುಖ್ಯಮಂತ್ರಿಯನ್ನು ಮಾತನಾಡಿಸಲು ಮುಂದಾದ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಈ ಮೇಲಿನಂತೆ ಹೇಳಿದರು.
‘ಐಯಮ್ ಬಾಯ್ಕಟಿಂಗ್ ಯೂ’(ನಾನು ನಿಮ್ಮನ್ನು ಬಹಿಷ್ಕರಿಸಿದ್ದೇನೆ) ಎಂದು ಹೇಳಿದ ಮುಖ್ಯಮಂತ್ರಿ, ಆನಂತರ ಮರು ಮಾತನಾಡದೆ ಹೋಗಿ ತಮ್ಮ ಕಾರಿನಲ್ಲಿ ಕುಳಿತುಕೊಂಡರು. ಆಗ ಮತ್ತೊಮ್ಮೆ ಅವರನ್ನು ಮಾತನಾಡಿಸಲು ಮುಂದಾದಾಗ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.
‘ಅದೇನು ಸ್ಟೋರಿ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ, ಅದೇನು ಚರ್ಚೆ ಮಾಡುತ್ತಿರೋ ಮಾಡಿಕೊಳ್ಳಿ. ಆ ಮೂಲಕ ಮಜಾ ಮಾಡಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ದೃಶ್ಯ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಕಿಡಿಗಾರಿದರು.