×
Ad

ಧರ್ಮಶಾಸ್ತ್ರವೇ ನಮ್ಮ ಸಂವಿಧಾನ ಎಂದ ಎಸ್.ಎಲ್.ಭೈರಪ್ಪ

Update: 2019-04-28 20:29 IST

ಬೆಂಗಳೂರು, ಎ.28: ನಮ್ಮ ಧರ್ಮಶಾಸ್ತ್ರವೇ ನಮ್ಮ ಸಂವಿಧಾನ. ಆದರೆ, ಈಗಿನ ನಮ್ಮ ಸಂವಿಧಾನದಲ್ಲಿ ಪರಂಪರೆ ಒಳಗೊಂಡಿದೆಯೇ, ಇಲ್ಲ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ವಿವಾದಿತ ಹೇಳಿಕೆ ನೀಡಿದ್ದಾರೆ.

ರವಿವಾರ ನಗರದ ದಿ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಸಭಾಂಗಣದಲ್ಲಿ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿರುವ ಸುಮತೀಂದ್ರ ನಾಡಿಗ ಅವರ ಕೊನೆಯ ಕೃತಿ ‘ಶ್ರೀವತ್ಸ ಸ್ಮತಿ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬ್ರಿಟೀಷರು ಬಂದು ಕಾನೂನು, ವಿವಾಹ ಹಾಗೂ ಭೂ ಒಡೆತನದಲ್ಲಿ ಸುಧಾರಣೆ ತಂದರು. ಆದರೆ, ಇದಕ್ಕೆ ದೇಶಿಯರು ವಿರೋಧ ವ್ಯಕ್ತಪಡಿಸಿದರು. ತದನಂತರ, ಸ್ವತಃ ಬ್ರಿಟೀಷರೇ, ನಿಮ್ಮ ಧರ್ಮಶಾಸ್ತ್ರದ ಕಾನೂನುಗಳನ್ನು ಸಂಗ್ರಹಿಸಿ ನಮಗೆ ಕೊಡಿ ಎಂದು ಪಿ.ವಿ.ಕಾಣೆ ಅವರಂತ ವಿದ್ವಾಂಸರಿಗೆ ಮನವಿ ಮಾಡಿಕೊಂಡಿದ್ದರು. ಬಳಿಕ ಅವರು ಸುಮಾರು 7 ಸಂಪುಟಗಳಲ್ಲಿ ಶಾಸ್ತ್ರಗಳ ಸಾರವನ್ನು ಸಂಗ್ರಹಿಸಿ ಕೊಟ್ಟಿದ್ದರು. ಆ ಸಾರವನ್ನು ಬಿಟ್ಟು ನಾವೀಗ, ಅಮೆರಿಕಾ, ಬ್ರಿಟನ್ ನ್ಯಾಯಾಧೀಶರ ತೀರ್ಪುಗಳ ಸಾರಾಂಶಗಳತ್ತ ಆಕರ್ಷಿತರಾಗಿದ್ದೇವೆ ಎಂದು ಭೈರಪ್ಪ ತಿಳಿಸಿದರು.

ಅನುಮತಿ ಇಲ್ಲದೆ ಪತ್ನಿಯೊಂದಿಗೆ ಸಂಪರ್ಕ ಬೆಳೆಸುವುದನ್ನು ಅತ್ಯಾಚಾರವೆಂದು ಪರಿಗಣಿಸಬೇಕು ಎನ್ನುವ ವಾದ ಇದೆ. ಅಷ್ಟೇ ಅಲ್ಲದೆ, ಇದನ್ನು ಕಾನೂನು ಮಾಡಿ, ಅಂಗೀಕಾರ ಪಡೆಯಲು ಪ್ರಯತ್ನ ನಡೆದಿದೆ.ಆದರೆ, ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ ಎಂದು ಗೃಹ ಸಚಿವರೇ ಈಗಾಗಲೇ ಹೇಳಿದ್ದಾರೆ. ಇನ್ನೂ ಒಂದು ಕಾಲಕ್ಕೆ ಈ ಕಾನೂನು ಬಂದು ಬಿಟ್ಟರೆ, ಪತ್ನಿಯನ್ನು ಮುಟ್ಟಲು ಒಂದು ಪುಸ್ತಕದಲ್ಲಿ ಸಹಿ ಮಾಡಬೇಕಾದ ಸ್ಥಿತಿ ಬರಲಿದೆ ಎಂದು ಭೈರಪ್ಪ ವ್ಯಂಗವಾಡಿದರು.

ಶಬರಿ ಮಲೆ ದೇಗುಲ ಪ್ರವೇಶ: ಶಬರಿ ಮಲೆ ದೇಗುಲ ಪ್ರವೇಶದ ವಿಚಾರದಲ್ಲಿಯೂ ಹಿಂದೂ ಧರ್ಮದ ವಿರುದ್ಧವಾಗಿ ಕಾನೂನು ಮಾಡಲಾಗಿದೆ. ಮಹಿಳೆಯರನ್ನು ದೇಗುಲಕ್ಕೆ ಪ್ರವೇಶಿಸಲು ಅವಕಾಶ ನೀಡದಿದ್ದರೆ, ತಾರತಮ್ಯ ಮಾಡಿದಂತೆ ಆಗುತ್ತದೆ ಎಂದು ಕೆಲವರು ವಾದ ಮಾಡುತ್ತಾರೆ. ಆದರೆ, ಹೆಣ್ಣು ಋತುಮತಿಯಾಗುವ ಮುನ್ನ ಹಾಗೂ ಮುಟ್ಟಾಗುವಿಕೆ ನಿಂತ ಬಳಿಕ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಈ ಎಲ್ಲವೂ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರದಂತೆ ಕಾಣುತ್ತವೆ. ಇದರ ಯೋಜನೆಗಳೆಲ್ಲ ವ್ಯಾಟಿಕನ್‌ನಲ್ಲಿ ಸಿದ್ಧವಾಗುತ್ತವೆ. ನಮ್ಮ ಸಮಾಜ, ಸಂಸಾರ, ದಾಂಪತ್ಯ ಬದುಕಿನ ಗಟ್ಟಿತನವನ್ನು ಒಡೆದು, ಭೀತಿ ಹುಟ್ಟಿಸುವ ಹುನ್ನಾರಗಳಿವು ಎಂದ ಅವರು, ಕೆಲ ಕಾನೂನು ಹಿಂದೂಗಳಿಗೆ ಮಾತ್ರವಂತೆ. ಏಕೆಂದರೆ, ಮೈನಾರಿಟಿ (ಅಲ್ಪಸಂಖ್ಯಾತರು) ಅವರಿಗೆ ಸ್ಪೆಷಾಲಿಟಿ ಇದೆಯಲ್ಲ. ಅವರ ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಯಾಕೆ ಎಲ್ಲರೂ ಗಟ್ಟಿಯಾಗಿ ಮಾತನಾಡಲ್ಲ ಎಂದು ಪ್ರಶ್ನಿಸಿದರು.

ಹಿಂದಿನ ಕವಿಗಳೆಲ್ಲ ಕೇವಲ ಹೊಗಳುವ, ಇಲ್ಲವೆ ಬೈಯುವ ಕೆಲಸ ಮಾಡಿದ್ದಾರೆ. ಆದರೆ, ನಾಡಿಗರು ಕೀಟಲೆ ರಸವನ್ನು ಪರಿಚಯಿಸಿದ್ದಾರೆ. ನಿಜವಾದ ಸೃಷ್ಟಿಶೀಲತೆ ಅವರಲ್ಲಿ ಇತ್ತು ಎಂದು ಭೈರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News