ಹಳ್ಳ ಹಿಡಿದಿರುವ ಪ್ರಧಾನಿ ಮೋದಿಯ ‘ಉಜ್ವಲಾ’ ಯೋಜನೆ

Update: 2020-02-13 14:41 GMT

ಪ್ರಧಾನಿ ನರೇಂದ್ರ ಮೋದಿ ಅವರು ಬಡಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುವ ‘ಉಜ್ವಲಾ’ ಯೋಜನೆಯನ್ನು ಜಾರಿಗೊಳಿಸಿದಾಗ ಬಹಳಷ್ಟು ಕುಟುಂಬಗಳು ಸಂತಸಗೊಂಡಿದ್ದವು. ತಾವಿನ್ನು ಅಡುಗೆ ಮಾಡಲು ಕಟ್ಟಿಗೆ,ಕಲ್ಲಿದ್ದಲು ಅಥವಾ ಸೀಮೆಎಣ್ಣೆಯನ್ನು ಬಳಸಬೇಕಿಲ್ಲ ಮತ್ತು ವಿಷಾನಿಲಗಳಿಂದ ಕೂಡಿದ ಹೊಗೆಯನ್ನು ಉಸಿರಾಡಬೇಕಿಲ್ಲ ಎನ್ನುವುದು ಅವರ ಸಂತಸಕ್ಕೆ ಕಾರಣವಾಗಿತ್ತು. ಆದರೆ ಮೋದಿಗಾಗಿ ಪ್ರಮುಖ ಮತಗಳಿಕೆ ನೀತಿಯಾಗಿ ರೂಪಿಸಲಾಗಿದ್ದ ಲಕ್ಷಾಂತರ ಮನೆಗಳಿಗೆ ಅನಿಲ ಸಂಪರ್ಕವೊದಗಿಸುವ,ಮಹಿಳೆಯರನ್ನು ಸಶಕ್ತಗೊಳಿಸುವ ಮತ್ತು ವಾಯುಮಾಲಿನ್ಯವನ್ನು ತಗ್ಗಿಸುವ ಉದ್ದೇಶ ಹೊಂದಿದ್ದ ‘ಉಜ್ವಲಾ’ ಯೋಜನೆ ಇಂದು ಭ್ರಷ್ಟಾಚಾರ ಮತ್ತು ದುರುಪಯೋಗಗಳ ಆರೋಪಗಳ ಸುಳಿಯಲ್ಲಿ ಸಿಲುಕಿ ಹೊಳಪು ಕಳೆದುಕೊಳ್ಳುತ್ತಿದೆ.

ಉಜ್ವಲಾ ಯೋಜನೆ ಘೋಷಣೆಯಾದಾಗ ಸಂತಸಪಟ್ಟವರಲ್ಲಿ ಭಾರತದ ಅತ್ಯಂತ ಬಡರಾಜ್ಯ ಬಿಹಾರದ ನಿಸಾರ್‌ಪುರ ಗ್ರಾಮದ ನಿವಾಸಿ ರೀನಾ ದೇವಿ ಕೂಡ ಒಬ್ಬಳು. ಆದರೆ ‘ಉಚಿತ ’ ಉಜ್ವಲಾ ಕಿಟ್ ಪಡೆಯಲು ಆಕೆ 3,000 ರೂ.ಗಳನ್ನು ಕಟ್ಟಬೇಕಾಗಿತ್ತು. ನಿಸಾರ್‌ಪುರ ಗ್ರಾಮದಲ್ಲಿ 3,000 ರೂ.ಗಳೆಂದರೆ ಹೆಚ್ಚಿನವರ ತಿಂಗಳ ಕೂಲಿಯಾಗಿದೆ.

ಲಂಚ ಮತ್ತು ಭ್ರಷ್ಟಾಚಾರಗಳಿಂದಾಗಿ ಈ ಯೋಜನೆ ಈಗ ಹಳ್ಳ ಹಿಡಿದಿದೆ ಮತ್ತು ಯೋಜನೆಯ ಫಲಾನುಭವಿಗಳಾದ ಬಡ ಕುಟುಂಬಗಳಿಗೆ ಗ್ಯಾಸ್ ರಿಫಿಲ್‌ಗಳಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಪಡೆದುಕೊಂಡಿದ್ದ ಹೊಸ ಸ್ಟವ್‌ಗಳು ಮೂಲೆ ಸೇರಿವೆ ಮತ್ತು ಅವರು ಅಡುಗೆ ಮಾಡಲು ಮೊದಲಿನಂತೆ ಸಾಂಪ್ರದಾಯಿಕ ಇಂಧನಗಳಿಗೇ ಮೊರೆ ಹೋಗಿದ್ದಾರೆ ಎಂದು ಟೀಕಾಕಾರರು ಬೆಟ್ಟು ಮಾಡುತ್ತಿದ್ದಾರೆ.

►ಹೊಳಪು ಕಳೆದುಕೊಂಡ ಉಜ್ವಲಾ

ಮೋದಿ ಅವರು ದೇಶಾದ್ಯಂತ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಉಜ್ವಲಾ ಯೋಜನೆಯು ಯಶಸ್ವಿಯಾಗಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಟೀಕೆಗಳನ್ನು ತಳ್ಳಿ ಹಾಕಿರುವ ಮೋದಿಯವರ ಬಿಜೆಪಿಯು ದೇಶಾದ್ಯಂತ ಏಳು ಕೋಟಿಗೂ ಅಧಿಕ ಬಡಕುಟುಂಬಗಳು ಈಗ ಗ್ಯಾಸ್ ಒಲೆಗಳನ್ನು ಹೊಂದಿವೆ ಎಂದು ಹೇಳಿಕೊಂಡಿದೆ.

ಮೇ 2016ರಲ್ಲಿ ಆರಂಭಗೊಂಡ ಉಜ್ವಲಾ ಯೋಜನೆಯು 2022ರ ವೇಳೆಗೆ ಎಂಟು ಕೋಟಿ ಗ್ರಾಮೀಣ ಕುಟುಂಬಗಳಿಗೆ ಅಡಿಗೆ ಅನಿಲ ಸಂಪರ್ಕವನ್ನೊದಗಿಸುವ ಗುರಿಯನ್ನು ಹೊಂದಿದೆ.

►ಗಂಭೀರ ಆರೋಗ್ಯ ಸಮಸ್ಯೆ

ಮನೆಗಳಲ್ಲಿ ಮಾಲಿನ್ಯವು ಭಾರತದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು,ಅಶುದ್ಧ ಇಂಧನಗಳಿಂದಾಗಿ ಮಹಿಳೆಯರು ಉಸಿರಾಡುವ ಹೊಗೆಯು ಅವರು ಕ್ಯಾನ್ಸರ್,ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಗೆ ಗುರಿಯಾಗಲು ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ)ಯು ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಉಜ್ವಲಾ ಯೋಜನೆಯು ಎರಡು ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿನ 3.70 ಕೋ.ಮಹಿಳೆಯರು ತಮ್ಮ ಮನೆಗಳಲ್ಲಿ ಸ್ವಚ್ಛ ಇಂಧನವನ್ನು ಬಳಸಲು ನೆರವಾಗಿದೆ ಎಂದು ಡಬ್ಲೂಎಚ್‌ಒ ಕಳೆದ ವರ್ಷ ಪ್ರಶಂಸಿಸಿತ್ತು. ಆದರೆ,ಅನಿಲ ಮರುಪೂರೈಕೆಯ ವೆಚ್ಚವನ್ನು ಭರಿಸಲು ಹೆಚ್ಚಿನ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ ಮತ್ತು ಇದರಿಂದಾಗಿ ಅವು ಕಟ್ಟಿಗೆ,ಕಲ್ಲಿದ್ದಲು ಅಥವಾ ಬೆರಣಿಯಂಂತಹ ಹಳೆಯ ಇಂಧನಗಳಿಗೆ ಮೊರೆ ಹೋಗಿವೆ ಎಂದು ಈಗ ಅದು ಹೇಳುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಯೋಜನೆಯು ಸಂಪೂರ್ಣವಾಗಿ ಹಳ್ಳ ಹಿಡಿಯುವುದಂತೂ ನಿಜ ಎನ್ನುತ್ತಾರೆ ವಿಶ್ಲೇಷಕರು.

ಕೃಪೆ: economictimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News