ಅಕ್ರಮ ವಿದ್ಯುತ್ ಪಡೆಯುವವರ ವಿರುದ್ಧ ಕ್ರಮ: ಬಿಬಿಎಂಪಿ ಮೇಯರ್
ಬೆಂಗಳೂರು, ಎ.28: ನಗರದಾದ್ಯಂತ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿರುವ ಕುರಿತು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸಬಾರದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ನಗರದ ಮಹಾಲಕ್ಷ್ಮಿ ಲೇಔಟ್‌ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ತಂತಿ ಸ್ಪರ್ಶಸಿ ಗಾಯಗೀಡಾಗಿರುವ ಬಾಲಕನ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಅಕ್ರಮ ವಿದ್ಯುತ್ ಪಡೆದುಕೊಂಡಿರುವ ಕಾರಣ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಿದರು.
ಅಕ್ರಮ ವಿದ್ಯುತ್ ಸಂಪರ್ಕಗಳ ಸಂಬಂಧ ಶೀಘ್ರವೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಗರದಲ್ಲೆಲ್ಲೂ ವಿದ್ಯುತ್ ಅವಘಡಗಳು ಸಂಭವಿಸದಂತೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಉದ್ಯಾನವನ ಹಾಗೂ ರಸ್ತೆ ಬದಿಯಲ್ಲಿ ವಿದ್ಯುತ್ ತಂತಿಗಳು ಹೊರ ಚಾಚಿದ್ದು, ಅಪಾಯಕ್ಕೆ ದಾರಿ ಮಾಡಿಕೊಡುತ್ತಿವೆ. ಅದರ ಸಂಬಂಧ ತಕ್ಷಣ ಎಚ್ಚೆತ್ತುಕೊಳ್ಳಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಖಡಕ್ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ಬಾಲಕ ಸಾಯಿಚರಣ್‌ಗೆ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಪರಿಹಾರ ಒದಗಿಸಲಾಗುತ್ತದೆ ಎಂದು ಮೇಯರ್ ಭರವಸೆ ನೀಡಿದರು.
ಶಾಸಕ ಗೋಪಾಲಯ್ಯ ಚಾಲಕನ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬಾಲಕನ ಆರೋಗ್ಯ ಸುಧಾರಣೆವರೆಗೂ ಅವರ ಚಿಕಿತ್ಸಾ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಭರವಸೆ ನೀಡಿದರು. ಅನಂತರ ಬಾಲಕನ ತಂದೆ ಬಸವರಾಜ್‌ರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದರು.