×
Ad

ಮುಂದಿನ ದಿನಗಳಲ್ಲಿ ಜಲ ಕ್ಷಾಮ: ಭೂ ವಿಜ್ಞಾನಿ ದೇವರಾಜ ರೆಡ್ಡಿ

Update: 2019-04-28 22:45 IST

ಬೆಂಗಳೂರು, ಎ.28: ಕೊಳವೆ ಬಾವಿಗಳ ಹಾವಳಿಯಿಂದ ಭೂಗರ್ಭದಲ್ಲಿ ಜಲಸ್ತರಗಳು ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಲ ಕ್ಷಾಮ ಎದುರಾಗಲಿದೆ ಎಂದು ಭೂ ವಿಜ್ಞಾನಿ ದೇವರಾಜ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಪ್ರಗತಿಪರ ರೈತರಿಗೆ ಭಾಗ್ಯವಂತರು, ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡದ ಅವರು, ದೇಶದಲ್ಲಿ ನೀರಿಗಾಗಿ ಸುಮಾರು 6 ಕೋಟಿಗೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದರಿಂದ ಶೇ.80ರಷ್ಟು ಜಲಸ್ತರಗಳು ಬರಿದಾಗಿವೆ. ದೇಶದಲ್ಲಿ ಪ್ರತಿನಿತ್ಯ 250 ಬಿಲಿಯನ್ ಕ್ಯೂಬಿಕ್ ನೀರನ್ನು ಹೊರತೆಗೆಯುವಲ್ಲಿ ಭಾರತ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನೀರನ್ನು ಮಿತವಾಗಿ ಬಳಸದಿದ್ದರೆ ನೀರಿಗಾಗಿಯೇ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದೆ ತಾತನ ಕಾಲಕ್ಕೆ ಬಾವಿಗಳು, ಮಗನ ಕಾಲಕ್ಕೆ ಕೊಳವೆ ಬಾವಿಗಳು, ಮೊಮ್ಮಕ್ಕಳ ಕಾಲಕ್ಕೆ ಎಲ್ಲಾ ಖಾಲಿ ಖಾಲಿಯಾಗಲಿವೆ. ಕೇವಲ 50 ರಿಂದ 100 ಅಡಿಗೆ ಭೂಮಿಯಲ್ಲಿ ಲಭ್ಯವಾಗುತ್ತಿದ್ದ ನೀರು ಈಗ 1,000 ಅಡಿ ಕೊರೆಸಿದ್ದರೂ ನೀರು ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಹಾಗಾಗಿ ಮುಂದಿನ ಪೀಳಿಗೆ ಉಳಿವಿಗೆ ಈಗಿನಿಂದಲೇ ಗಿಡ ಮರಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಅತಿ ಅವಶ್ಯಕ ಇದರಿಂದ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರ ಹೆಚ್ಚಾಗಿ ನೀರನ್ನೇ ಅವಲಂಬಿಸಿದೆ. ವರುಣನ ಅವಕೃಪೆಯಿಂದ ಮಳೆಯಾಗದೇ ಬರ ತಾಂಡವವಾಡುತ್ತಿದೆ. ರೈತರು ನೀರಿಗಾಗಿ ಸಾಲ ಮಾಡಿ ಕೊಳವೆ ಬಾವಿ ತೊಡಿಸಿದ್ದರೂ ನೀರು ಬಾರದೇ ಕಂಗಲಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರ್ದೈವ. ಸರಕಾರ ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಜಲ ಕ್ಷಾಮ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಸಮಾರಂಭದಲ್ಲಿ ಅಂಕಣಕಾರ ಷಡಷರಿ, ಯೋಗ ತಜ್ಞ ಜಗದೀಶ್ ಶೆಟ್ಟಿ, ಉಡುಪಿ ಕೃಷ್ಣ, ವಿಜಯ್ ಸಮರ್ಥ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News