ಪ್ರಜ್ಞಾ ಠಾಕೂರ್ ಎಂಬ ಸುಳ್ಳಿನ ಮೂಟೆ

Update: 2019-04-29 05:29 GMT

ಹೇಗಾದರೂ ಸರಿ, ಗೆಲ್ಲಲೇ ಬೇಕು ಎನ್ನುವ ಹತಾಶೆಯಲ್ಲಿ ಬಿಜೆಪಿ ಅನಾಹುತಗಳನ್ನು ಅಪ್ಪಿಕೊಳ್ಳಲು ಮುಂದಾಗಿದೆ. ಈ ಅನಾಹುತಕ್ಕೆ ಕೇವಲ ಬಿಜೆಪಿ ಮಾತ್ರವಲ್ಲ, ಜೊತೆಗೆ ಈ ದೇಶವೂ ಬಲಿಯಾಗುವ ಸಾಧ್ಯತೆಗಳು ಕಾಣುತ್ತಿವೆ. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದರೂ ಈವರೆಗೆ ಅದು ಹಲವು ಪ್ರಬುದ್ಧ ರಾಜಕೀಯ ನಾಯಕರನ್ನು ತನ್ನದಾಗಿಸಿಕೊಂಡಿತ್ತು. ಕೋಮುವಾದವನ್ನು ಯಾವ ಹಂತದವರೆಗೆ ಬಳಸಬಹುದು ಎನ್ನುವ ಮುನ್ನೆಚ್ಚರಿಕೆ ಅವರಲ್ಲಿತ್ತು. ಅಟಲ್, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಪ್ರಮೋದ್ ಮಹಾಜನ್ ಅವರಂತಹ ನಾಯಕರು ಕೋಮುವಾದವನ್ನು ರಾಜಕೀಯಕ್ಕೆ ಬಳಸಿಕೊಂಡರಾದರೂ, ತಾವು ಹೇಳುತ್ತಿರುವ ಸುಳ್ಳುಗಳ ಕುರಿತಂತೆ ಅವರಲ್ಲಿ ಒಂದಿಷ್ಟು ಪಾಪಪ್ರಜ್ಞೆಗಳು ಇದ್ದವು. ಹಾಗೆಯೇ ಅಭಿವೃದ್ಧಿಯ ಬಗ್ಗೆಯೂ ತಮ್ಮದೇ ಆದ ದೂರದೃಷ್ಟಿಗಳನ್ನು ಹೊಂದಿದ ಹಲವು ನಾಯಕರು ಬಿಜೆಪಿಯೊಳಗಿದ್ದರು. ಆದರೆ ಮೋದಿಯ ಕಾಲದಲ್ಲಿ ‘ಬಣ್ಣದ ಮಾತುಗಳೇ’ ರಾಜಕೀಯ ಮುತ್ಸದ್ದಿತನದ ಮಾನದಂಡವಾಯಿತು.

ಜನರೂ ಆ ಬಣ್ಣದ ಮಾತುಗಳನ್ನು ನಂಬಿ ಮೋದಿ ನೇತೃತ್ವದ ಸರಕಾರದ ಮೇಲೆ ಅತಿ ವಿಶ್ವಾಸವಿಟ್ಟರು. ಮೋದಿಯನ್ನು ಬಳಸಿಕೊಂಡು ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಪೊರೇಟ್ ಕುಳಗಳು ತಮ್ಮೆಲ್ಲ ಹಿತಾಸಕ್ತಿಗಳನ್ನೂ ಸಾಧಿಸಿಕೊಂಡವು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಬಣ್ಣದ ಮಾತುಗಳು ಪರಿಣಾಮ ಬೀರಲಾರವು ಎಂದು ಮನಗಂಡಾಗ ಅಧಿಕಾರ ಹಿಡಿಯುವುದಕ್ಕಾಗಿ ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಈವರೆಗೆ ಕೇಸರಿ ತೀವ್ರಗಾಮಿಗಳ ಜೊತೆಗೆ ಒಳ ಸಂಬಂಧವನ್ನಷ್ಟೇ ಇಟ್ಟುಕೊಂಡಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅದನ್ನು ಬಹಿರಂಗವಾಗಿ ಘೋಷಿಸಿದೆ. ಪ್ರಜ್ಞಾ ಸಿಂಗ್ ಠಾಕೂರ್ ಎಂಬ ಶಂಕಿತ ಭಯೋತ್ಪಾದಕಿಗೆ ಟಿಕೆಟ್ ನೀಡುವ ಮೂಲಕ ಅಧಿಕಾರ ಹಿಡಿಯಲು ಯಾವ ದಾರಿಯನ್ನು ಆರಿಸುವುದಕ್ಕೂ ನಾವು ಹಿಂಜರಿಯೆವು ಎನ್ನುವ ಸೂಚನೆಯನ್ನು ಬಿಜೆಪಿಯೊಳಗಿನ ನಾಯಕರು ನೀಡಿದ್ದಾರೆ. ಪ್ರಜ್ಞಾ ಠಾಕೂರ್ ಬಂಧನವಾದಾಗ ಆರೆಸ್ಸೆಸ್ ಮತ್ತು ಬಿಜೆಪಿಯು ಸನಾತನ ಸಂಸ್ಥೆಯಂತಹ ಸಂಘಟನೆಯ ಜೊತೆಗೆ ಸಂಬಂಧವಿಲ್ಲ ಎಂದು ಘೋಷಿಸಿದ್ದವು. ಪ್ರಜ್ಞಾಠಾಕೂರ್ ಜೊತೆಗಿರುವ ಸಂಬಂಧವನ್ನು ಬಿಜೆಪಿ ಅಂದು ನಿರಾಕರಿಸಿತ್ತು. ಆದರೆ ಇಂದು ಅದೇ ಶಂಕಿತ ಉಗ್ರವಾದಿಯನ್ನು ತಮ್ಮ ನಾಯಕಿ ಎಂಬಂತೆ ವೈಭವೀಕರಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಹಿಂಸೆ, ಕ್ರೌರ್ಯ, ವಿಭಜನೆಗಳನ್ನು ತಮ್ಮ ಪ್ರಣಾಳಿಕೆ ಮಾಡಿಕೊಂಡಿದೆ.

 ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ ಬೆನ್ನಿಗೇ ಪ್ರಜ್ಞಾ ಠಾಕೂರ್ ಬರೇ ಸ್ಫೋಟ ಆರೋಪಿ ಮಾತ್ರವಲ್ಲ, ಆಕೆ ಮೋದಿಗಿಂತಲೂ ಭೀಕರ ಸುಳ್ಳುಗಳ ಮೂಟೆ ಎನ್ನುವುದು ಬಯಲಾಗಿದೆ. ಬಾಬರಿ ಮಸೀದಿಯ ಧ್ವಂಸವನ್ನು ಬಹಿರಂಗವಾಗಿ ಸಮರ್ಥಿಸಿದ ಈಕೆಯ ಕುರಿತಂತೆ ಚುನಾವಣಾ ಆಯೋಗ ದಿವ್ಯ ವೌನವನ್ನು ತಾಳಿದೆ. ಜೊತೆಗೆ, ಈ ಧ್ವಂಸದ ಸಂದರ್ಭದಲ್ಲಿ ತಾನು ಗುಮ್ಮಟದ ಮೇಲೇರಿದ್ದೆ ಎಂಬ ಸುಳ್ಳನ್ನು ಹೇಳಿದ್ದಾಳೆ. ಈಕೆಯ ಜನ್ಮದಿನಾಂಕವನ್ನು ಆಧರಿಸಿ ತಾಳೆ ನೋಡಿದರೆ ಬಾಬರಿ ಮಸೀದಿ ಧ್ವಂಸವಾದಾಗ ಈಕೆ ಐದು ವರ್ಷದ ಬಾಲಕಿ ಅಷ್ಟೇ. ಇದೀಗ ಸಾಮಾಜಿಕ ತಾಣಗಳಲ್ಲಿ ಈಕೆಯ ಸುಳ್ಳು ತಮಾಷೆಯ ವಸ್ತುವಾಗಿದೆ. ಇದೇನೋ ತಮಾಷೆಯ ವಸ್ತು. ಆದರೆ ಈಕೆ ಇನ್ನೊಂದು ಸುಳ್ಳನ್ನು ಜನರ ನಡುವೆ ಸ್ಫೋಟಿಸಿದ್ದಾಳೆ. ತನ್ನ ಸ್ತನದ ಕ್ಯಾನ್ಸರ್ ಗೋಮೂತ್ರ ಸೇವನೆಯಿಂದ ಗುಣವಾಯಿತು ಎನ್ನುವುದನ್ನು ಯಾವ ಅಂಜಿಕೆಯೂ ಇಲ್ಲದೆ ಹೇಳಿದ್ದಾಳೆ. ಆದರೆ ಈಕೆಗೆ ಶಸ್ತ್ರಕ್ರಿಯೆ ಮಾಡಿದ ವೈದ್ಯರು ಮಾತ್ರ ಅದನ್ನು ನಿರಾಕರಿಸಿದ್ದಾರೆ. ಈಕೆಗೆ ಮೂರೂ ಬಾರಿ ಶಸ್ತ್ರಕ್ರಿಯೆ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗೋಮೂತ್ರದಿಂದ ಸ್ತನ ಕ್ಯಾನ್ಸರ್ ಗುಣವಾಗಿದ್ದಿದ್ದರೆ, ಈ ಶಸ್ತ್ರಕ್ರಿಯೆಯನ್ನು ಯಾಕಾಗಿ ಮಾಡಲಾಯಿತು? ಇಂದು ದೇಶದ ದೊಡ್ಡ ಸಂಖ್ಯೆಯ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸುವ ಮೂಲಕ ಅವರು ಈ ರೋಗದಿಂದ ಗುಣಮುಖರಾಗುತ್ತಿದ್ದಾರೆ.

ಈಗಾಗಲೇ ಕ್ಯಾನ್ಸರ್ ಕುರಿತಂತೆ ಜನರಲ್ಲಿ ಹತ್ತು ಹಲವು ಗೊಂದಲಗಳಿವೆ. ಆಯುರ್ವೇದದಿಂದ, ಹೋಮಿಯೋಪತಿಯಿಂದ ಕ್ಯಾನ್ಸರ್ ಗುಣವಾಗುತ್ತದೆ ಎಂದು ಕೆಲವರು ವಾದಿಸಿದರೆ, ಇದನ್ನು ಅಲೋಪತಿ ವೈದ್ಯರು ಸಂಪೂರ್ಣ ನಿರಾಕರಿಸುತ್ತಾರೆ. ಆದರೆ ಪತಂಜಲಿಯಂತಹ ಸಂಸ್ಥೆಗಳು ತಮ್ಮ ಸ್ವಾರ್ಥಕ್ಕಾಗಿ ಈ ಕಾಯಿಲೆಯನ್ನು ಗುಣಪಡಿಸುವ ಭ್ರಮೆಗಳನ್ನು ಅಮಾಯಕರಲ್ಲಿ ಬಿತ್ತುತ್ತಿವೆ. ಜೊತೆಗೆ ಸರಕಾರದಿಂದಲೂ ದೊಡ್ಡ ಮೊತ್ತದ ಅನುದಾನಗಳನ್ನು ದೋಚುತ್ತಿವೆ. ಇದೇ ಹೊತ್ತಿನಲ್ಲಿ ಬಿಜೆಪಿಯ ‘ಹೆಮ್ಮೆ’ ಎಂದು ಗುರುತಿಸಲ್ಪಡುತ್ತಿರುವ ಪ್ರಜ್ಞಾ ಠಾಕೂರ್ ಎಂಬ ಶಂಕಿತ ಭಯೋತ್ಪಾದಕಿ ‘ಗೋಮೂತ್ರದಿಂದ ತನ್ನ ಸ್ತನ ಕ್ಯಾನ್ಸರ್’ ಗುಣವಾಗಿದೆ ಎನ್ನುವುದು ಆಕೆ ಮಾಲೆಗಾಂವ್ ಸ್ಫೋಟದಲ್ಲಿ ಎಸಗಿದಷ್ಟೇ ದೊಡ್ಡ ಅಪರಾಧವಾಗಿದೆ. ಹಲವು ಅಮಾಯಕರ ಪ್ರಾಣ ಕಿತ್ತುಕೊಂಡ ಮಾಲೆಗಾಂವ್ ಸ್ಫೋಟದಲ್ಲಿ ಈಕೆ ಭಾಗಿಯಾಗಿದ್ದಾಳೆ ಎಂದು ಆರೋಪಟ್ಟಿ ಹೇಳುತ್ತಿದೆ. ಇದೀಗ ಸ್ತನದ ಕ್ಯಾನ್ಸರ್‌ಗೆ ಸಂಬಂಧಿಸಿ ಈಕೆಯ ಮಾತುಗಳನ್ನು ನಂಬಿ ಅಮಾಯಕ ಮಹಿಳೆಯರು ವೈದ್ಯರನ್ನು ಸಂಪರ್ಕಿಸದೇ ಗೋಮೂತ್ರ ಸೇವಿಸಿದರೆ ದೇಶದಲ್ಲಿ ಸ್ತನ ಕ್ಯಾನ್ಸರ್‌ಗೆ ಬಲಿಯಾಗುವವರ ಸಂಖ್ಯೆ ಅಧಿಕವಾಗಲಿದೆ. ಈ ಸ್ವಯಂಘೋಷಿತ ಸಾಧ್ವಿ ವೇಷದ ಸ್ಫೋಟ ಆರೋಪಿ, ತನ್ನ ಸ್ವಾರ್ಥಕ್ಕಾಗಿ ತನ್ನವರನ್ನೇ ಬಲಿಕೊಡುವುದಕ್ಕೂ ಹೇಸಲಾರೆ ಎನ್ನುವುದನ್ನು ಈ ಸುಳ್ಳಿನ ಮೂಲಕ ಸಾಬೀತು ಮಾಡಿದ್ದಾಳೆ.

ವಿಪರ್ಯಾಸವೆಂದರೆ, ಸರಕಾರದ ಸರ್ವ ಸವಲತ್ತುಗಳನ್ನು ದೋಚಿ ಪತಂಜಲಿಯಂತಹ ಸಂಸ್ಥೆಯನ್ನು ಕಟ್ಟಿದ ಬಾಬಾ ವೇಷದ ಉದ್ಯಮಿ ರಾಮ್‌ದೇವ್ ಈಕೆಯ ಬೆನ್ನಿಗೆ ನಿಂತಿದ್ದಾರೆ. ‘ಜೈಲಿನಲ್ಲಿ ಈಕೆಯ ಮೇಲೆ ನಡೆದ ದೌರ್ಜನ್ಯವೇ ಕ್ಯಾನ್ಸರ್‌ಗೆ ಕಾರಣ’ ಎಂದು ಹೇಳಿದ್ದಾರೆ. ಕ್ಯಾನ್ಸರ್‌ಗೂ ಇದಕ್ಕೂ ಇರುವ ಸಂಬಂಧ ಏನು ಎನ್ನುವುದನ್ನು ರಾಮ್‌ದೇವ್ ಸ್ಪಷ್ಟಪಡಿಸಿಲ್ಲ. ಇತ್ತೀಚೆಗೆ ಪಾರಿಕ್ಕರ್, ಅನಂತಕುಮಾರ್‌ರಂತಹ ಹಿರಿಯ ನಾಯಕರು ಕ್ಯಾನ್ಸರ್‌ಗೆ ಬಲಿಯಾದರು. ಇವರೆಲ್ಲ ಯಾವ ಜೈಲಿನಲ್ಲಿ ಯಾವ ಕಾರಣಕ್ಕಾಗಿ ದೌರ್ಜನ್ಯ ಅನುಭವಿಸಿದರು ಎನ್ನುವುದನ್ನು ಈ ನಕಲಿ ಕ್ಯಾನ್ಸರ್ ವೈದ್ಯ ದೇಶಕ್ಕೆ ಸ್ಪಷ್ಟಪಡಿಬೇಕಾಗಿದೆ. ತನ್ನ ಆರೋಗ್ಯದ ಕುರಿತಂತೆಯೇ ಹಸಿ ಹಸಿ ಸುಳ್ಳು ಹೇಳುವ ಠಾಕೂರ್, ತನ್ನನ್ನು ಬಂಧಿಸಿದ ಕರ್ಕರೆಯ ಕುರಿತಂತೆ ಸುಳ್ಳು ಹೇಳುವುದು ದೊಡ್ಡ ವಿಷಯವೇನೂ ಅಲ್ಲ. ದುರಂತವೆಂದರೆ, ಕನಿಷ್ಠ ವಿದ್ಯಾರ್ಹತೆ, ವಿದ್ವತ್ತು, ಸಜ್ಜನಿಕೆ, ಚಾರಿತ್ರ ಯಾವುದೂ ಇಲ್ಲದ ಈ ಸುಳ್ಳಿನ ಮೂಟೆಯನ್ನು ಬಿಜೆಪಿಯ ನಾಯಕಿಯನ್ನಾಗಿಸಲು ಹೊರಟಿರುವುದು ಬಿಜೆಪಿ ಎಂತಹ ದೈನೇಸಿ ಸ್ಥಿತಿಯನ್ನು ತಲುಪಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈಕೆ ಮತ್ತು ಈಕೆಯಂತಹ ವ್ಯಕ್ತಿತ್ವಗಳು ಮುಂದಿನ ದಿನಗಳಲ್ಲಿ ಸಂಸತ್ತಿನೊಳಗೆ ಸೇರಿದರೆ ಈ ದೇಶದ ವಿಜ್ಞಾನ, ಆರೋಗ್ಯ, ಶಿಕ್ಷಣಗಳ ಗತಿ ಏನಾಗಬಹುದು? ಈ ದೇಶದ ಭವಿಷ್ಯ ಎಂತಹ ಸಂದಿಗ್ಧ ಘಟ್ಟದಲ್ಲಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಲು ಇದಿಷ್ಟು ಸಾಕು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News