'ಬೆಂಗಳೂರು ನಗರ ಮಲೇರಿಯಾ ಮುಕ್ತ’
ಬೆಂಗಳೂರು, ಎ.29: ಇತ್ತೀಚಿಗೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮಲೇರಿಯಾ ರೋಗ ಕಾಣಿಸಿಕೊಂಡಿಲ್ಲ. ಹೀಗಾಗಿ, ಈ ಜಿಲ್ಲೆ ಮಲೇರಿಯಾ ಮುಕ್ತವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಸ್.ಪ್ರಕಾಶ್ ಇಂದಿಲ್ಲಿ ಪ್ರಕಟಿಸಿದರು.
ಸೋಮವಾರ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆ ವ್ಯಾಪ್ತಿಯಲ್ಲಿ 12,171 ಮಹಿಳಾ, 19,385 ಪುರುಷ ಆರೋಗ್ಯ ಸಹಾಯಕರು ಹಾಗೂ 3230 ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2019ನೇ ಆರಂಭದ ಜನವರಿ ಮಾಸದಿಂದ ಇದುವರೆಗೂ ಜಿಲ್ಲೆಯಾದ್ಯಂತ 46,241 ರಕ್ತಲೇಪನ ಪರೀಕ್ಷೆಗಳನ್ನು ನಡೆಸಲಾಗಿದ್ದು, ಯಾವುದೇ ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಮಲೇರಿಯಾ ಮುಕ್ತಗೊಂಡಿದೆ ಎಂದು ವಿವರಿಸಿದರು.
ಇದಕ್ಕೂ ಮೊದಲು ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ. ಸುನಂದಾ ಮಾತನಾಡಿ, 2016ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 13 ಪ್ರಕರಣಗಳು, 2017ರಲ್ಲಿ 10 ಪ್ರಕರಣಗಳು ಕಾಣಿಸಿಕೊಂಡಿದ್ದವು. 2018-19ರಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯಕರ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಲೇರಿಯಾ ಕುರಿತು ಜಾಗೃತಿ ವಹಿಸಬೇಕಾಗಿದೆ. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ರೋಗಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಅವರು ತಿಳಿಸಿದರು.
ಉಡುಪಿ, ಮಂಗಳೂರು ಹಾಗೂ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಲೇರಿಯಾ ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ವರದಿ ಹೇಳಿದ್ದು, ಇಂತಹ ಪ್ರದೇಶಗಳ ವಲಸಿಗರಿಂದ ಮಲೇರಿಯಾ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ರೋಗದ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.