ಗಂಭೀರ ಪ್ರಕರಣಗಳಲ್ಲಿ ಭಾಗಿ: ಆರೋಪಿ ಯುವಕನಿಗೆ ಗುಂಡೇಟು

Update: 2019-04-29 16:45 GMT

ಬೆಂಗಳೂರು, ಎ.29: ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪದಡಿ, ಪೊಲೀಸರು ವಶಕ್ಕೆ ಪಡೆಯಲು ಹೋದಾಗ, ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವಕನೋರ್ವನ ಮೇಲೆ ಇಲ್ಲಿನ ಉಪ್ಪಾರಪೇಟೆ ಠಾಣೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒರಿಸ್ಸಾದ ಬಿಸ್ವನಾಥ್ ಜಿಲ್ಲೆಯ ನಿವಾಸಿ ಮನ್ಸೂರ್ ಖಾನ್(23) ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಎಂದು ತಿಳಿದುಬಂದಿದೆ.

ಸೋಮವಾರ ಬೆಳಗ್ಗೆ ನಗರದ ಉಪ್ಪಾರಪೇಟೆ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಹಿಂಭಾಗದ ರಸ್ತೆಯ ಪಕ್ಕದಲ್ಲಿರುವ ಕಟ್ಟಡದ ಬಳಿ ಆರೋಪಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಂಗ್ರಹವಾಗಿರುವ ಹಿನ್ನೆಲೆ ಇನ್‌ಸ್ಪೆಕ್ಟರ್ ರಾಜೇಂದ್ರ ಅವರು ಪೇದೆ ಜಯಚಂದ್ರ ಹಾಗೂ ಇನ್ನಿತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರನ್ನು ಗಮನಿಸಿದ ಆರೋಪಿ ಮನ್ಸೂರ್ ಖಾನ್ ಏಕಾಏಕಿ ಪೇದೆ ಜಯಚಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್‌ಸ್ಪೆಕ್ಟರ್ ರಾಜೇಂದ್ರ ಅವರು ಆರೋಪಿ ಮನ್ಸೂರ್‌ಗೆ ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೆ, ಪೊಲೀಸರ ಮಾತು ಕೇಳದೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ರಾಜೇಂದ್ರ ಅವರು ಹಾರಿಸಿದ ಗುಂಡು ಆರೋಪಿ ಬಲ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ಈ ವೇಳೆ ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News