×
Ad

ಸಮಾನ ಮನಸ್ಕ ಶಾಸಕರ ಸಭೆ ಮುಂದೂಡಿಕೆ: ಎಸ್.ಟಿ.ಸೋಮಶೇಖರ್

Update: 2019-04-29 22:22 IST

ಬೆಂಗಳೂರು, ಎ.29: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ, ಇಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದು, ಬಹುತೇಕ ಶಾಸಕರು ಆಯಾ ಕ್ಷೇತ್ರಗಳಲ್ಲಿ ಇರುತ್ತಾರೆ. ಆದುದರಿಂದ, ಎ.30ರಂದು ನಗರದ ಖಾಸಗಿ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಶಾಸಕರ ಸಭೆಯನ್ನು ಮುಂದೂಡಲಾಗಿದೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಶಾಸಕರಿಗೆ ಉಪ ಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಸೂಚನೆ ಬಂದಿದೆ. ಆದುದರಿಂದ, ಶಾಸಕರ ಸಭೆಯನ್ನು ಮುಂದೂಡಲಾಗಿದ್ದು, ಶೀಘ್ರವೇ ಮುಂದಿನ ದಿನಾಂಕ ತಿಳಿಸಲಾಗುವುದು ಎಂದರು.

ನಾನು ಅತೃಪ್ತ ಶಾಸಕನಲ್ಲ. ಒತ್ತಡ ಹಾಕಿ ರಾಜಕೀಯ ಮಾಡುವವನಲ್ಲ, ಏನೆ ಇದ್ದರೂ ನೇರವಾಗಿಯೇ ತಿಳಿಸುತ್ತೇನೆ. ಬ್ಲಾಕ್ ಮೇಲ್ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ ಎಂದು ಅವರು ಹೇಳಿದರು.

ನಾವು ಸರಕಾರ ಅಥವಾ ಪಕ್ಷದ ವಿರುದ್ಧ ಸಭೆಯನ್ನು ಕರೆದಿಲ್ಲ. ನಿಗಮ ಮಂಡಳಿಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿವೆ. ಅವುಗಳ ಬಗ್ಗೆ ಚರ್ಚಿಸಿ, ಸರಕಾರದ ಮುಂದೆ ನಮ್ಮ ಸಮಸ್ಯೆಗಳನ್ನು ಮಂಡಿಸುತ್ತೇವೆ. ನಮ್ಮ ಮಟ್ಟದಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತೇವೆ ಎಂದು ಸೋಮಶೇಖರ್ ಹೇಳಿದರು.

ನಾವು ನಡೆಸಲು ಉದ್ದೇಶಿಸಿರುವ ಶಾಸಕರ ಸಭೆಯ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಿಗಮ, ಮಂಡಳಿಗಳ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಈ ಸಭೆಯನ್ನು ನಡೆಸದಂತೆ ನಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

ವೇಣುಗೋಪಾಲ್ ಆಕ್ರೋಶ: ಶಾಸಕರ ಸಭೆ ಕರೆಯಲು ನಿಮಗೆ ಅನುಮತಿ ಕೊಟ್ಟವರು ಯಾರು? ಯಾವುದೇ ಸಮಸ್ಯೆಗಳಿದ್ದರೆ, ಅದನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ನಿಮ್ಮ ಇಷ್ಟಕ್ಕೆ ತಕ್ಕಂತೆ ಶಾಸಕರ ಸಭೆ ನಡೆಸುವುದು ಅಶಿಸ್ತಿನ ನಡವಳಿಕೆಯಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸೋಮಶೇಖರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.

ನಿನ್ನೆ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖರ ಸಭೆಯಲ್ಲಿಯೂ ಸೋಮಶೇಖರ್ ಕರೆದಿರುವ ಶಾಸಕರ ಸಭೆಯ ಬಗ್ಗೆ ಚರ್ಚೆ ನಡೆದಿದ್ದು, ಇಂತಹ ಸಭೆಗಳಿಂದ ಸರಕಾರ ಹಾಗೂ ಪಕ್ಷದ ಬಗ್ಗೆ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಗಲಿದೆ. ಆದುದರಿಂದ, ಯಾವುದೇ ಕಾರಣಕ್ಕೂ ಈ ಸಭೆ ನಡೆಯಲು ಅವಕಾಶ ನೀಡಬಾರದು ಎಂಬ ಅಭಿಪ್ರಾಯವು ವ್ಯಕ್ತವಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News