ಇಬ್ಬರು ಸರಗಳ್ಳರ ಬಂಧನ: 4.55 ಲಕ್ಷ ರೂ.ಮೌಲ್ಯದ ವಸ್ತು ಜಪ್ತಿ
ಬೆಂಗಳೂರು, ಎ.29: ಮಾದಕ ವಸ್ತು ಗಾಂಜಾ ವ್ಯಸನಕ್ಕಾಗಿ ಸರಗಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ಇಲ್ಲಿನ ಚಂದ್ರಾಲೇಔಟ್ ಠಾಣಾ ಪೊಲೀಸರು, 4.55 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಾಪೂಜಿ ನಗರದ 2ನೇ ಕ್ರಾಸ್‌ನ ಮುದಾಸ್ಸರ್(20), ರಿಝ್ವಾನ್(21) ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎ.23ರಂದು ಆರೋಪಿಗಳು ಚಂದ್ರಾ ಲೇಔಟ್‌ನಲ್ಲಿ ಸುಮನಾ ಎಂಬ ಮಹಿಳೆಯ 18 ಗ್ರಾಂ ತೂಕದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಗಾಂಜಾ ಸೇರಿ ಇನ್ನಿತರ ದುಶ್ಚಟಗಳಿಗೆ ಬಲಿಯಾಗಿ ಸುಲಭವಾಗಿ ಹಣ ಗಳಿಸಲು ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಕೊಂಡು ಚಿನ್ನಾಭರಣ ಕಸಿದು ಪರಾರಿಯಾಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.