ದುಡಿಯುವ ಕೈಗಳ ನ್ಯಾಯಕ್ಕಾಗಿ ಎಸ್‌ಡಿಟಿಯು ಸ್ಥಾಪನೆ: ಅಬ್ದುಲ್ ರಹೀಂ ಪಟೇಲ್

Update: 2019-04-30 12:35 GMT

ಬೆಂಗಳೂರು, ಎ.30: ಬಂಡವಾಳಶಾಹಿಗಳ ವಿವಿಧ ಕುತಂತ್ರಗಳಿಗೆ ಬಲಿಯಾಗುತ್ತಿರುವ ದುಡಿಯುವ ವರ್ಗಕ್ಕೆ ನ್ಯಾಯ ಕಲ್ಪಿಸಲು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಸ್ಥಾಪನೆ ಮಾಡಲಾಗಿದೆ ಎಂದು ರಾಜ್ಯ ಸಮಿತಿ ನೂತನ ಅಧ್ಯಕ್ಷ ಅಬ್ದುಲ್ ರಹೀಂ ಪಟೇಲ್ ಹೇಳಿದರು.

ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಸ್‌ಡಿಟಿಯು ರಾಜ್ಯ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಮಾನವೀಯ ಮೌಲ್ಯಗಳನ್ನು ಬದಿಗಿಟ್ಟು ಕೇವಲ ಲಾಭದಾಯಕ ಅಂಶಗಳನ್ನು ಪರಿಗಣಿಸುತ್ತಿರುವ ಇಂದಿನ ಆಧುನಿಕತೆಯಲ್ಲಿ, ಕೇವಲ ಖಾಸಗಿ ವಲಯ ಮಾತ್ರವಲ್ಲದೇ, ಕಾರ್ಮಿಕರ ಕಲ್ಯಾಣಕ್ಕಾಗಿರುವ ಸರಕಾರ ಮತ್ತು ಇಲಾಖೆಗಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು.

ಈ ತಾರತಮ್ಯ ಅಥವಾ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಬೇಕಾಗಿರುವ ಇಂದಿನ ಕಾರ್ಮಿಕ ಸಂಘಟನೆಗಳು ರಾಜಕೀಯ ಪಕ್ಷಗಳ ನಿಯಂತ್ರಣದಲ್ಲಿರು ವುದರಿಂದ ಈ ಸಂಘಟನೆಗಳು ಕಾರ್ಮಿಕರ ಪರವಾಗಿ ತಮ್ಮ ಧ್ವನಿಯನ್ನು ಗಟ್ಟಿಗೊಳಿಸುವುದರಲ್ಲಿ ವಿಫಲತೆ ಕಂಡಿದೆ ಎಂದು ಅಬ್ದುಲ್ ರಹೀಂ ಪಟೇಲ್ ತಿಳಿಸಿದರು.

ಈ ನ್ಯೂನತೆಯನ್ನು ಹೋಗಲಾಡಿಸಿ ಒಂದು ಪ್ರಬಲವಾದ ಕಾರ್ಮಿಕ ಸಂಘಟನೆಯಾಗಿ ಎಸ್‌ಡಿಟಿಯು ಹುಟ್ಟಿಕೊಂಡಿದೆ. ರಾಜ್ಯಾದ್ಯಂತ ವಿವಿಧ ಕಾರ್ಮಿಕರನ್ನು ಸಂಘಟಿಸಿ ಅವರಲ್ಲಿ ಕಾರ್ಮಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಮಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದರ ಜೊತೆ ಜೊತೆಯಲ್ಲೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಆರೋಗ್ಯಕರವಾದ ವಾತಾವರಣವನ್ನು ನಿರ್ಮಿಸಲು ಎಸ್‌ಡಿಟಿಯು ಪ್ರಯತ್ನಿಸಲಿದೆ ಎಂದು ಅಬ್ದುಲ್ ರಹೀಂ ಪಟೇಲ್ ಹೇಳಿದರು.

ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸೊ ಫ್ರಾಂಕೊ ಎಸ್‌ಡಿಟಿಯು ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ಎಸ್‌ಡಿಟಿಯು ಉಪಾಧ್ಯಕ್ಷರಾಗಿ ಫಝಲುಲ್ಲಾ ಮಡಿಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಜಲೀಲ್ ಮಂಗಳೂರು ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಜಾಬೀರ್ ಅರಿಯಡ್ಕ, ದಸ್ತಗೀರ್ ಗುಲ್ಬರ್ಗ, ಉಬೇದುಲ್ಲಾ ಬೆಂಗಳೂರು, ನ್ಯಾಯವಾದಿ ಮಜೀದ್ ಖಾನ್‌ರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಹಮ್ಮದ್ ಇಲ್ಯಾಸ್ ತುಂಬೆ, ಮುಖಂಡರಾದ ಮೆಹಬೂಬ್ ಷರೀಫ್, ದೇವನೂರು ಪುಟ್ಟನಂಜಯ್ಯ, ಅಬ್ದುಲ್ ಜಲೀಲ್, ಫಝಲುಲ್ಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News