×
Ad

ವಿದ್ಯಾರ್ಥಿಗಳ ಉದ್ಯೋಗ ಅವಕಾಶಗಳ ಸೃಷ್ಟಿಗೆ ಸಿಐಐ ಜತೆಗೆ ಬೆಂಗಳೂರು ಕೇಂದ್ರ ವಿವಿ ಒಪ್ಪಂದ

Update: 2019-04-30 23:29 IST

ಬೆಂಗಳೂರು, ಎ.30: ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಧುನಿಕ ಮಾದರಿಗಳನ್ನು ಅಳವಡಿಸಿಕೊಳ್ಳಲು, ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡಲು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಭಾರತೀಯ ಕೈಗಾರಕೋದ್ಯಮಗಳ ಒಕ್ಕೂಟದೊಂದಿಗೆ (ಸಿಐಐ) ಒಪ್ಪಂದಕ್ಕೆ ಸಹಿ ಹಾಕಿತು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಶೈಕ್ಷಣಿಕ ವಲಯ-ಉದ್ಯಮ ರಂಗದ ಸಹಭಾಗಿತ್ವ ಸಮಾವೇಶದಲ್ಲಿ ಸಿಐಐ ಕರ್ನಾಟಕ ಘಟಕದ ಉಪಾಧ್ಯಕ್ಷ ಸಂದೀಪ್ ಸಿಂಗ್ ಕರಾರು ಪತ್ರ ಹಸ್ತಾಂತರಿಸಿದರು.

ವಿದ್ಯಾರ್ಥಿಗಳು ವಿವಿಧ ಉದ್ಯಮ ರಂಗಗಳಿಗೆ ಇಂಟರ್ನ್‌ಶಿಪ್‌ಗೆ ತೆರಳಲು, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಈ ಒಪ್ಪಂದದಿಂದ ಸಹಾಯವಾಗಲಿದೆ. ಪ್ರಮುಖ ಕಂಪನಿಗಳ ಸಹಯೋಗದೊಂದಿಗೆ ಆಧುನಿಕ ಪ್ರಯೋಗಾಲಯಗಳನ್ನು ನಿರ್ಮಿಸಲು, ಗ್ರಂಥಾಲಯಗಳನ್ನು ರೂಪಿಸಲು ಈ ಕರಾರಿನಿಂದ ಅನುಕೂಲ ಆಗಲಿದೆ ಎಂದು ಕುಲಪತಿ ಪ್ರೊ.ಎಸ್.ಜಾಫೆಟ್ ತಿಳಿಸಿದರು.

ಶಿಕ್ಷಣ ತಜ್ಞ ಪ್ರೊ. ಎಚ್.ಎ.ರಂಗನಾಥ್, ದೇಶದಲ್ಲಿ ಸುಮಾರು 17 ವಿಧದ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಅವುಗಳೆಲ್ಲವೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಂಬ ಒಂದೇ ಪ್ರಾಕಾರಕ್ಕೆ ಹೊಂದಿಕೊಳ್ಳುವ ಕಡ್ಡಾಯ ನಿಯಮವಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಕಲಿಕೆ ಆಗುತ್ತಿಲ್ಲ. ಹಾಗಾಗಿ ನಮ್ಮ ವಿದ್ಯಾರ್ಥಿಗಳು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಪ್ರಯೋಗಾಲಯಗಳ ಪ್ರವೇಶಕ್ಕೆ ಅರ್ಹತೆ ಪಡೆಯುತ್ತಿಲ್ಲ ಎಂದರು.

ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಮುಖ್ಯ ಪೋಷಕ ಎಸ್.ಪದು ಪದ್ಮನಾಭನ್, ವಿವಿಗಳು ಉದ್ಯಮಗಳೊಂದಿಗೆ ಸಹಭಾಗಿತ್ವ ಸಾಧಿಸಿದರೆ ಪ್ರಗತಿಗೆ ಅನುಕೂಲ. ನಗರವು ಆರ್ಥಿಕತೆ, ಸಂಶೋಧನೆ ಶಿಕ್ಷಣ ಕೇಂದ್ರಗಳ ಸಂಗಮ ಇವೆಲ್ಲಗಳೊಂದಿಗೆ ಸಂಪರ್ಕದ ಅವಕಾಶ ಕಲ್ಪಿಸಿದರೆ ಉದ್ಯಮಕ್ಕೆ ಬೇಕಾದ ಕೌಶಲಗಳು ವಿದ್ಯಾರ್ಥಿಗಳಿಗೆ ತಲುಪಲಿವೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ. ರಾಮಚಂದ್ರ ಗೌಡ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News