ಬೆಂಗಳೂರಿನ ಪೋಷಕರಲ್ಲಿ ಆತಂಕ ಮೂಡಿಸಿದ ಎಸೆಸೆಲ್ಸಿ ಫಲಿತಾಂಶ
ಬೆಂಗಳೂರು, ಮೇ 1: ಆಧುನಿಕ ಸೌಲಭ್ಯ, ಶಿಕ್ಷಣ ಇಲಾಖೆಯ ಕಚೇರಿ, ಡಯಟ್, ಶಿಕ್ಷಣಾಧಿಕಾರಿಗಳ ಕಚೇರಿ, ಬಿಇಒ ಕಚೇರಿ, ಕ್ಷೇತ್ರ ಸಂಪನ್ಮೂಲಾಧಿಕಾರಿಗಳು ಹೀಗೆ ಎಲ್ಲ ರೀತಿಯ ವ್ಯವಸ್ಥೆ ಇರುವ ಬೆಂಗಳೂರು ಎಸೆಸೆಲ್ಸಿ ಫಲಿತಾಂಶದಲ್ಲಿ ಕುಸಿತ ಕಂಡಿರುವುದು ಪೋಷಕರಲ್ಲಿ, ಶಿಕ್ಷಣ ತಜ್ಞರಲ್ಲಿ ಆತಂಕಕ್ಕೆ ಈಡು ಮಾಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಗೆ 2018ರಲ್ಲಿ ಶೇ.72.03ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.68.83ಕ್ಕೆ ಇಳಿದಿದೆ. ರಾಜಧಾನಿಯ ಹೃದಯಭಾಗದ ಜಿಲ್ಲೆಯ ಫಲಿತಾಂಶ ಒಂದು ವರ್ಷದಲ್ಲಿ ಶೇ.3.2ರಷ್ಟು ಕುಸಿದಿದೆ. ಹಾಗೆಯೆ ಬೆಂಗಳೂರು ಉತ್ತರ ಜಿಲ್ಲೆ 2018ರಲ್ಲಿ ಶೇ.77.37ರಷ್ಟು ಫಲಿತಾಂಶ ಪಡೆದಿತ್ತು.
ಈ ಬಾರಿ ಶೇ.76.21ರಷ್ಟಾಗಿದ್ದು, ಶೇ.1.16ರಷ್ಟು ಇಳಿಕೆಯಾಗಿದೆ.ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಆಧಾರದಲ್ಲಿ ಗುಣಮಟ್ಟದ ಸ್ಥಾನ ಮಾನದಲ್ಲೂ ಬೆಂಗಳೂರು ದಕ್ಷಿಣ ಜಿಲ್ಲೆ 32ನೆ ಸ್ಥಾನಕ್ಕೆ ಇಳಿದಿದೆ. ಗುಣಮಟ್ಟದ ವಿಭಾಗದದಲ್ಲಿ ಕಳೆದ ವರ್ಷ 27ನೆ ಸ್ಥಾನದಲ್ಲಿತ್ತು. ನಗರ ಪ್ರದೇಶದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಎಸೆಸೆಲ್ಸಿ ಫಲಿತಾಂಶದಲ್ಲಿ ಮಾತ್ರ ಸುಧಾರಣೆ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.