ಬೆಂಗಳೂರು: ಫನಿ ಚಂಡಮಾರುತ ಪರಿಣಾಮ; ರಾಜ್ಯದಲ್ಲಿ ಎರಡು ದಿನ ಮಳೆ ಸಂಭವ
ಬೆಂಗಳೂರು, ಮೇ 1: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫನಿ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಂಭವವಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ವಿಶಾಖ ಪಟ್ಟಣದಿಂದ ಸುಮಾರು 400ಕಿಮೀ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದ್ದು, ಅದು ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ಮೇ 3ರವರೆಗೂ ಚಂಡಮಾರುತದ ಶಕ್ತಿ ಹೆಚ್ಚಾಗುತ್ತಲೆ ಹೋಗುತ್ತದೆ. ಆ ನಂತರ ದುರ್ಬಲಗೊಳ್ಳಲಿದೆ. ಈ ಚಂಡಮಾರುತದ ಪ್ರಭಾವ ಮೇ 5ರವರೆಗೂ ಇರುತ್ತದೆ ಎಂದರು.
ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕಾಗಿದೆ. ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಭಾಗಶಃ ಮೋಡದ ವಾತಾವರಣ ಕಂಡು ಬಂದಿದೆ. ತಾಪಮಾನವು ಗಣನೀಯವಾಗಿ ಏರಿಕೆಯಿಂದಾಗಿ ಸ್ಥಳೀಯವಾಗಿ ವಾಯುಭಾರ ಕುಸಿತವಾಗಿ ಬೆಂಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ಕೆಲವೆಡೆ ಭಾರೀ ಮಳೆಯಾಗಿದೆ. ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ತಾಪಮಾನದಲ್ಲಿ ಸ್ವಲ್ಪ ಇಳಿಮುಖ ವಾಗಲಿದೆ. ಹೈ-ಕರ್ನಾಟಕ ಭಾಗದಲ್ಲೂ ಒಂದೆರಡು ದಿನ ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಹೇಳಿದರು.