ಚುನಾವಣೆ ನಂತರ ಸುಮಲತಾ ಭೇಟಿ: ಪಕ್ಷ ವಿರೋಧಿ ಚಟುವಟಿಕೆ ಹೇಗಾಗುತ್ತದೆ- ಚಲುವರಾಯಸ್ವಾಮಿ

Update: 2019-05-03 14:06 GMT

ಬೆಂಗಳೂರು, ಮೇ 3: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ರನ್ನು ಚುನಾವಣೆ ಬಳಿಕ ನಾವು ಭೇಟಿ ಮಾಡಿದರೆ, ಅದು ಹೇಗೆ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಚುನಾವಣೆ ಮುಕ್ತಾಯದ ನಂತರ ನಾವು ಭೇಟಿಯಾಗಿದ್ದೇವೆ. ಚುನಾವಣೆಗೆ ಮುಂಚಿತವಾಗಿ ಇಂತಹ ಘಟನೆ ನಡೆದಿದ್ದರೆ, ಅದು ಚುನಾವಣೆ ಮೇಲೆ ಪರಿಣಾಮ ಬೀರುತ್ತಿತ್ತು. ಅಲ್ಲದೇ, ಪ್ರಮುಖ ವಿಷಯವಾಗಿರುತ್ತಿತ್ತು. ಆದರೆ, ಈಗ ಇದಕ್ಕೆ ಇಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಈ ವೀಡಿಯೊವನ್ನು ಯಾರು ಬಿಡುಗಡೆ ಮಾಡಿದ್ದಾರೋ ಗೊತ್ತಿಲ್ಲ. ಪೊಲೀಸರಿಗೆ ಯಾರು ಒತ್ತಡ ಹಾಕಿದರೋ, ಪೊಲೀಸರು ಹೊಟೇಲ್ ನವರ ಮೇಲೆ ಏನು ಒತ್ತಡ ಹಾಕಿದರೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಚುನಾವಣೆಗೆ ಮುನ್ನ ಹಾಗೂ ನಂತರ ನಾವು ಜೆಡಿಎಸ್ ಜೊತೆ ಅಂತರ ಕಾಯ್ದುಕೊಂಡಿದ್ದೇವೆ. ವೀಡಿಯೊ ವಿಷಯದ ಕುರಿತು ಮುಖ್ಯಮಂತ್ರಿ ಬೇಕಾದರೆ, ನಮ್ಮ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ದೂರು ನೀಡಲಿ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಯಾವ ವಿಷಯವನ್ನು ಯಾವ ರೀತಿ ನಿಭಾಯಿಸಬೇಕು ಎಂಬುದು ನಮ್ಮ ಮುಖಂಡರಿಗೆ ಗೊತ್ತಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ನಮಗೆ ನಮ್ಮ ಪಕ್ಷದ ಮೇಲೆ ವಿಶ್ವಾಸವಿದೆ. ಅವರು ತೀರ್ಮಾನ ಕೈಗೊಳ್ಳುತ್ತಾರೋ, ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅದು ಮಂಡ್ಯ ಜನರ ತೀರ್ಮಾನವಾಗಿರುತ್ತದೆ ಎಂದು ಅವರು ಹೇಳಿದರು.

ನಾನಾಗಲಿ, ನರೇಂದ್ರಸ್ವಾಮಿಯಾಗಲಿ ಯಾರ ಪರವಾಗಿಯೂ ಪ್ರಚಾರ ಮಾಡಿಲ್ಲ. ನಮ್ಮ ವಿಧಾನಸಭಾ ಕ್ಷೇತ್ರದಲ್ಲೆ ನಮ್ಮನ್ನು ಸೋಲಿಸಿದ್ದಾರೆ. ನಾವು ಹೋಗಿ ಅವರನ್ನು ಗೆಲ್ಲಿಸಲು ಸಾಧ್ಯವೇ ಎಂದು ಚಲುವರಾಯಸ್ವಾಮಿ ಹೇಳಿದರು.

ಜೆಡಿಎಸ್ ಶಾಸಕ ಸುರೇಶ್ ಗೌಡ ನಿನ್ನೆ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ನಾನು 25 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಯಾರ ವಿರುದ್ಧವೂ ನಾನು ಕ್ಷುಲ್ಲಕವಾಗಿ ಮಾತನಾಡಿಲ್ಲ, ಮಾತನಾಡುವುದು ಇಲ್ಲ ಎಂದರು.

ನಾಗಮಂಗಲ ಕ್ಷೇತ್ರದಲ್ಲಿ ಸೋತಿದ್ದೇವೆ, ಗೆದ್ದಿದ್ದೇವೆ. ಆದರೆ, ಎಂದಿಗೂ ಒಬ್ಬರ ವಿರುದ್ಧ ಕೀಳುಮಟ್ಟದ ಪದ ಪ್ರಯೋಗ ಮಾಡಿಲ್ಲ. ನಾವು ಸುಮಲತಾ ಪರವಾಗಿ ಕೆಲಸ ಮಾಡಿಲ್ಲ. ಮೈತ್ರಿ ಅಭ್ಯರ್ಥಿ ವಿಷಯದಲ್ಲಿ ಅಂತರ ಕಾಯ್ದುಕೊಂಡಿದ್ದೇವೆ. ಅದೇ ರೀತಿ ಪಕ್ಷೇತರ ಅಭ್ಯರ್ಥಿ ವಿಚಾರದಲ್ಲಿಯೂ ಮೌನವಹಿಸಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News