ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೈತ್ರಿ ವಿಚಾರ ಸ್ಥಳೀಯ ನಾಯಕರಿಗೆ ಬಿಟ್ಟಿದ್ದು- ದಿನೇಶ್ ಗುಂಡೂರಾವ್

Update: 2019-05-03 14:07 GMT

ಬೆಂಗಳೂರು, ಮೇ 3: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಯಾರ ಬೇಕಾದರೂ ಮೈತ್ರಿ ಮಾಡಿಕೊಳ್ಳಬಹುದಾಗಿದ್ದು, ಈ ಸಂಬಂಧ ಸ್ಥಳೀಯ ನಾಯಕರೇ ತೀರ್ಮಾನ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರವನ್ನು ಸ್ಥಳೀಯ ನಾಯಕರಿಗೆ ಬಿಟ್ಟುಕೊಡಲಾಗಿದ್ದು, ಅವರೇ ಸ್ಥಳೀಯವಾಗಿ ತೀರ್ಮಾನ ಮಾಡಿಕೊಳ್ಳುತ್ತಾರೆ ಎಂದರು.

ಅಗತ್ಯವಿದ್ದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬಹುದು. ಇಲ್ಲವಾದಲ್ಲಿ ಸ್ವತಂತ್ರವಾಗಿಯೂ ಚುನಾವಣೆ ಎದುರಿಸಬಹುದಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಚಲುವರಾಯಸ್ವಾಮಿ ಸ್ಪಷ್ಟನೆ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜೊತೆ ಊಟ ಮಾಡುತ್ತಿರುವ ವೀಡಿಯೋ ಬಿಡುಗಡೆಯಾಗಿರುವ ಕುರಿತು ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಊಟಕ್ಕೆ ಕರೆದಕ್ಕೆ ಹೋಗಿದ್ದೆವು. ಅದಕ್ಕೆ ಯಾವುದೇ ರಾಜಕೀಯ ಬಣ್ಣ ಹಚ್ಚೋದು ಬೇಡ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ನಾನು ಇದುವರೆಗೂ ವೀಡಿಯೊ ನೋಡಿಲ್ಲ. ಪತ್ರಿಕೆಗಳಲ್ಲಿ ಭಾವಚಿತ್ರ ನೋಡಿ ಅವರನ್ನು ಕರೆಸಿ ಮಾತನಾಡಿಸಿದೆ ಅಷ್ಟೇ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಂಡ್ಯ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಲಿಕ್ಕೆ ಆಗಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲದಕ್ಕೂ ಚುನಾವಣೆಯ ಫಲಿತಾಂಶ ಉತ್ತರ ಕೊಡುತ್ತದೆ. ವೀಡಿಯೊ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನ ಜೊತೆ ಮಾತನಾಡಿಲ್ಲ. ಜೊತೆಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿರುವ ವಿಚಾರವು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News