ಖೋಟಾ ನೋಟು ದಂಧೆ: ಬಿಎಂಟಿಸಿ ಚಾಲಕ, ನಿರ್ವಾಹಕ ಸೇರಿ ಮೂವರ ಬಂಧನ
ಬೆಂಗಳೂರು, ಮೇ 3: ಖೋಟಾ ನೋಟು ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಬಿಎಂಟಿಸಿ ಚಾಲಕ, ನಿರ್ವಾಹಕ ಹಾಗೂ ಓರ್ವ ಛಾಯಾಚಿತ್ರಗಾರನನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಿಂಗಸುಗೂರು ತಾಲೂಕಿನ ಲಕ್ಕಿಹಾಳ ಗ್ರಾಮದ ಸೋಮನಗೌಡ(38), ಚನ್ನರಾಯಪಣ್ಣದ ದೊಡ್ಡಮತಿಘಟ್ಟ ಗ್ರಾಮದ ನಿವಾಸಿಗಳಾದ ಕಿರಣ್‌ಕುಮಾರ್ (24) ಹಾಗೂ ನಂಜೇಗೌಡ(32) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಎ.26ರಂದು ನಗರದ ಯಲಹಂಕ ಕೋಗಿಲು ಕ್ರಾಸ್ ಬಳಿ 5 ಲಕ್ಷ ರೂ. ಮೌಲ್ಯದ ಖೋಟಾ ನೋಟುಗಳನ್ನು ಇಟ್ಟುಕೊಂಡು ಚಲಾವಣೆ ಮಾಡಲು ಯತ್ನಿಸುವಾಗ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ರಾಮಕೃಷ್ಣ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರಿಂದ 81.30 ಲಕ್ಷ ರೂ. ಖೋಟಾ ನೋಟುಗಳನ್ನು ಮತ್ತು ಅವುಗಳನ್ನು ತಯಾರಿಸಲು ಬಳಸುತ್ತಿದ್ದ ಕಂಪ್ಯೂಟರ್ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಚಾಲಕ, ನಿರ್ವಾಹಕ
ಆರೋಪಿ ಸೋಮನಗೌಡ ಬಿಎಂಟಿಸಿ ಸಂಸ್ಥೆಯ ಬಸ್ ನಿರ್ವಾಹಕನಾಗಿದ್ದು, ಮತ್ತೋರ್ವ ನಂಜೇಗೌಡ ಸಹ ಬಿಎಂಟಿಸಿ ಬಸ್ ಚಾಲಕ ವೃತ್ತಿಯಲ್ಲಿದ್ದಾನೆ. ಕಿರಣ್‌ಕುಮಾರ್ ಛಾಯಾಚಿತ್ರಗಾರನಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.