×
Ad

ವಿವಿಧ ಪ್ರಕರಣಗಳನ್ನು ಬೇಧಿಸಿದ ಪೊಲೀಸರು: 11 ಮಂದಿ ಸೆರೆ, 75 ಲಕ್ಷ ರೂ. ಚಿನ್ನಾಭರಣ ಜಪ್ತಿ

Update: 2019-05-03 21:15 IST

ಬೆಂಗಳೂರು, ಮೇ 3: ಇರಾನಿ ಗ್ಯಾಂಗ್‌ನ ಸರಗಳ್ಳರಿಬ್ಬರು ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ 11 ಜನರನ್ನು ಬಂಧಿಸಿರುವ ಈಶಾನ್ಯ ವಿಭಾಗದ ಪೊಲೀಸರು 75 ಲಕ್ಷ ರೂ. ಬೆಲೆಯ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸರಗಳ್ಳತನ ಪ್ರಕರಣ ಸಂಬಂಧ ಮಹಾರಾಷ್ಟ್ರ ಮೂಲದ ಅಲಿ (23), ಸಯ್ಯದ್ ಹುಸೇನ್ (37) ಎಂಬುವರನ್ನು ಬಂಧಿಸಿ ಇವರಿಂದ 18 ಲಕ್ಷ ಮೌಲ್ಯದ ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಬಂಧನದಿಂದ 20 ಸರ ಅಪಹರಣ ಪ್ರಕರಣಗಳು ಬೆಳಕಿಗೆ ಬಂದಿವೆ.

ಆಟೊರಿಕ್ಷಾ ಕಳವು: ಎಂಎಸ್ ಪಾಳ್ಯ ನಿವಾಸಿಯಾದ ರಹಮತ್ ಎಂಬುವವರು ಮನೆ ಮುಂದೆ ನಿಲ್ಲಿಸಿದ್ದ ಆಟೊರಿಕ್ಷಾವನ್ನು ಕಳ್ಳತನ ಮಾಡಿದ್ದ ಆರೋಪದಡಿ ಸಾದಿಕ್ (21) ಎಂಬಾತನನ್ನು ಬಂಧಿಸಿ 20 ಲಕ್ಷ ರೂ. ಮೌಲ್ಯದ 8 ಆಟೊರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ.

ಮನೆಗಳ್ಳನ ಬಂಧನ: ಸಿ.ರಾಮಯ್ಯ ಲೇಔಟ್‌ನ ರಾಮಚಂದ್ರಪುರ ರಸ್ತೆ ನಿವಾಸಿ ಸುಂದರಂ ನಾಯ್ಡು ಎಂಬುವವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಡಿ ಚಂದ್ರಶೇಖರ್ (30) ಎಂಬಾತನನ್ನು ಬಂಧಿಸಿ ಈತನಿಂದ 5 ಲಕ್ಷ ರೂ. ಬೆಲೆಬಾಳುವ 166 ಗ್ರಾಂ ತೂಕದ ಆಭರಣಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದರೋಡೆಗೆ ಸಂಚು: ಹೆಸರಘಟ್ಟ ರಸ್ತೆಯಲ್ಲಿ ರಾತ್ರಿ ವೇಳೆ ಮಾರಕಾಸ್ತ್ರ ಹಾಗೂ ಏರ್‌ಗೈನ್ ಮೂಲಕ ಸಾರ್ವಜನಿಕರಿಗೆ ಬೆದರಿಸಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಆರೋಪದಡಿ ರಫೀಕ್ ಅಹ್ಮದ್ (25), ಶೋಯೆಬ್ (23) ಮತ್ತು ಇಸ್ಮಾಯಿಲ್ ಖಾನ್ (22) ಎಂಬಾತನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ಇವರಿಂದ 2 ಬೈಕ್, ಒಂದು ಏರ್‌ಗನ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಿಳೆ ಸೆರೆ: ರಾಮಚಂದ್ರಪುರ ನಿವಾಸಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದು, ಮಾಲಕರ ಮನೆಯಿಂದಲೇ ಒಂದು ಕೆಜಿ ಬೆಳ್ಳಿ ವಸ್ತುಗಳು ಹಾಗೂ ಚಿನ್ನಾಭರಣವನ್ನು ದೋಚಿದ್ದ ಆರೋಪದಡಿ ಶಶಿಕಲಾ (50) ಎಂಬಾಕೆಯನ್ನು ವಿದ್ಯಾರಣ್ಯ ಪುರ ಪೊಲೀಸರು ಬಂಧಿಸಿ 2 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧನ: ಮುನೇಶ್ವರ ಲೇಔಟ್‌ನಿವಾಸಿ ರವಿಚಂದ್ರರೆಡ್ಡಿ ಎಂಬುವವರ ಮನೆಯಲ್ಲಿ ಆಭರಣ ಕಳವು ಮಾಡಿದ್ದ ರಹೀಂಖಾನ್ (33) ಮತ್ತು ನಯಿಮ್ ಖಾನ್ (28) ಎಂಬುವವರನ್ನು ಬಂಧಿಸಿ 18 ಪ್ರಕರಣಗಳಿಗೆ ಸಂಬಂಧಿಸಿದಂತೆ 30 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆ 11 ಮಂದಿ ಬಂಧನದಿಂದ 25 ಮನೆಗಳ್ಳತನ, 20 ಸರಗಳ್ಳತನ, ಒಂದು ದರೋಡೆ ಮತ್ತು ಎಂಟು ಆಟೊ ಕಳ್ಳತನ ಪ್ರಕರಣ ಸೇರಿ 54 ಪ್ರಕರಣಗಳು ಪತ್ತೆಯಾಗಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ವಿವರಿಸಿದರು.

ಈ ಸಂದರ್ಭದಲ್ಲಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಡಿಸಿಪಿ ಕಲಾಕೃಷ್ಣಸ್ವಾಮಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News