ಕಬ್ಬಿಣ ಕದಿಯುತ್ತಿದ್ದ ಮೂವರ ಸೆರೆ: 70 ಟನ್ ಕಬ್ಬಿಣ, ವಾಹನ ಜಪ್ತಿ

Update: 2019-05-03 16:00 GMT

ಬೆಂಗಳೂರು, ಮೇ 3: ಕಬ್ಬಿಣವನ್ನು ಕಾರ್ಖಾನೆಯಿಂದ ಗ್ರಾಹಕರಿಗೆ ಸಾಗಿಸುವ ಮಾರ್ಗಮದ್ಯೆ ಕಳ್ಳತನ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 70 ಟನ್ ಕಬ್ಬಿಣ ಹಾಗೂ ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಟಿಸಿ ಪಾಳ್ಯದ ನಿವಾಸಿ ಶಿವಪ್ಪ(25), ಮೇಡಿಹಳ್ಳಿ ನಿವಾಸಿಗಳಾದ ತನ್ವೀರ್, ಸಮೀರ್ ಬಂಧಿತ ಆರೋಪಿಗಳೆಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಚೆನ್ನೈನ ಜೆ.ಆರ್. ಮೆಟಲ್ ಲಿಮಿಟೆಡ್ ಎಂಬ ಕಬ್ಬಿಣದ ಕಾರ್ಖಾನೆಯಿಂದ ಕಬ್ಬಿಣದ ರಾಡ್‌ಗಳನ್ನು ಬೆಂಗಳೂರಿನ ವರ್ತೂರಿನಲ್ಲಿರುವ ಶೋಭ ಡೆವೆಲಪರ್ಸ್‌ಗೆ ಸರಬರಾಜು ಮಾಡುತ್ತಿದ್ದು, ದಾರಿಮಧ್ಯೆ ಮೇಡಳ್ಳಿ ಬಳಿಯಿರುವ ಮುನಾವರ್ ಪಾಷಾ ಎಂಬುವವರಿಗೆ ಸೇರಿದ ಗೋಡಾನ್‌ಗಳಲ್ಲಿ ಕಾನೂನು ಬಾಹಿರವಾಗಿ ಕಬ್ಬಿಣದ ರಾಡುಗಳನ್ನು ಲಾರಿಯಿಂದ ಕಳ್ಳತನ ಮಾಡಿ, ಅದಕ್ಕೆ ಬದಲಾಗಿ ಲಾರಿಯ ಕ್ಯಾಬಿನ್‌ನ ಡ್ಯಾಷ್‌ಬೋರ್ಡ್‌ನ ಪಕ್ಕದಲ್ಲಿ ಜೋಡಿಸಿದ್ದ ಬಾಕ್ಸ್‌ಗಳಿಗೆ ಮಣ್ಣನ್ನು ತುಂಬಿ ತೂಕವನ್ನು ಸರಿದೂಗಿಸಿ, ವೇ-ಬ್ರಿಡ್ಜ್‌ನಲ್ಲಿ ತೂಕ ಮಾಡಿಸಿ ಗ್ರಾಹಕರಿಗೆ ವಂಚಿಸಿ, ಮೋಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ಬಂಧಿತ ಆರೋಪಿಗಳ ಪೈಕಿ ಶಿವಪ್ಪ, ಲಾರಿ ಚಾಲಕನಾಗಿದ್ದು, ಈತ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News