ಉದ್ದೇಶಪೂರ್ವಕವಾಗಿ ಟಿಪ್ಪು ಬಗ್ಗೆ ತಪ್ಪು ಸಂದೇಶ ರವಾನೆ: ಸೂಫಿ ವಲಿಬಾ
ಬೆಂಗಳೂರು, ಮೇ 3: ಟಿಪ್ಪು ಸುಲ್ತಾನ್ ಕೋಮು ಸೌರ್ಹಾದತೆಯನ್ನು ಕಾಪಾಡಲು ಶ್ರಮಿಸಿದ ನಾಯಕನಾಗಿದ್ದಾರೆ. ಆದರೆ, ಇಂದು ಕೆಲವು ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ಟಿಪ್ಪುವಿನ ಬಗ್ಗೆ ತಪ್ಪು ಸಂದೇಶಗಳನ್ನು ಸಾರುತ್ತಿವೆ ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಟಿಪ್ಪು ಸುಲ್ತಾನ್ ಅರಮನೆಯ ಬಳಿ ಟಿಪ್ಪು ಸುಲ್ತಾನ್‌ರ 220ನೇ ಹುತಾತ್ಮ ದಿನಾಚರಣೆಯ ಪ್ರಯುಕ್ತ ಅಖಿಲ ಕರ್ನಾಟಕ ಸೂಫಿ ಸಂತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರದೇಶಿಗರ ವಿರುದ್ಧ ಟಿಪ್ಪು ಹಾಗೂ ಅವರ ತಂದೆ ತಮ್ಮ ಜೀವನವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ ಎಂದರು.
ಟಿಪ್ಪು ಸುಲ್ತಾನ್ ಮೈಸೂರು ಸಂಸ್ಥಾನದ ರಾಜನಾಗಿ ಅಪಾರವಾದ ಕೊಡುಗೆ ನೀಡಿದ್ದಾರೆ. ನಾಡಿನ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಲು ತಮ್ಮ ಮಕ್ಕಳನ್ನೇ ಒತ್ತೆಯಾಗಿಟ್ಟ ಧೀರನಾಗಿದ್ದಾನೆ. ಆದರೆ, ಇಂದು ಆಂಗ್ಲರ ಪರವಾಗಿದ್ದವರು ಟಿಪ್ಪುವನ್ನು ವಿರೋಧ ಮಾಡುತ್ತಿದ್ದಾರೆ. ಟಿಪ್ಪುವಿಗೆ ಧರ್ಮವನ್ನು ಅಂಟಿಸುತ್ತಿದ್ದಾರೆ ಎಂದು ದೂರಿದರು.
ವಿಶ್ವದ ಹಲವು ಮುಂದುವರೆದ ದೇಶಗಳಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಕೆಲಸ ನಡೆಯುತ್ತಿದೆ. ಟಿಪ್ಪುವಿನ ಹಲವು ಸ್ವತ್ತುಗಳು ಇಂದಿಗೂ ಲಂಡನ್‌ನಲ್ಲಿ ಪ್ರದರ್ಶಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಯಾವ ದೇಶಕ್ಕಾಗಿ ಹೋರಾಡಿದರೋ ಅಲ್ಲಿ ಟಿಪ್ಪುವಿಗೆ ಸರಿಯಾದ ಮಾನ್ಯತೆಯಿಲ್ಲದಂತಾಗಿದೆ. ಆದುದರಿಂದಾಗಿ, ಟಿಪ್ಪುಸುಲ್ತಾನ್ ಸಾಹಸಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕೋಟೆ ವೆಂಕಟರಮಣ ದೇವಸ್ಥಾನದ ಅರ್ಚಕ ಶ್ರೀರಂಗಭಟ್ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಅನುದಾನರಹಿತ ಅಲ್ಪಸಂಖ್ಯಾತರ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಾ. ಗುಲ್‌ಷಾದ್ ಅಹಮದ್ ಮತ್ತು ದಿ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪೇಖ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೋಮು ಸೌಹಾರ್ದ ದಿನ ಆಚರಿಸಲು ಆಗ್ರಹ: ಟಿಪ್ಪು ಸುಲ್ತಾನ್ ಜನ್ಮದಿನವನ್ನು ‘ಕೋಮು ಸೌಹಾರ್ದದಿನ’ವನ್ನಾಗಿ ಅಧಿಕೃತವಾಗಿ ಆಚರಿಸಲು ಸರಕಾರ ಆದೇಶ ನೀಡಬೇಕು. ಆ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವೆ ಸಾಮರಸ್ಯವನ್ನು ಗಟ್ಟಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘ ಆಗ್ರಹಪಡಿಸಿತು.