×
Ad

ಎಂಜಿನಿಯರ್‌ಗಳ ನೇಮಕ ವಿಚಾರ: ಹೊಸ ಪಟ್ಟಿ ಪ್ರಕಟಿಸಬೇಕೆಂಬ ಕೆಎಟಿ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Update: 2019-05-03 22:09 IST

ಬೆಂಗಳೂರು, ಮೇ 3: ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕಾಯಂ ಆದ 417 ಸಹಾಯಕ ಮತ್ತು ಕಿರಿಯ ಎಂಜಿನಿಯರ್‌ಗಳಿಗೆ ನೀಡಲಾಗಿರುವ ಕೃಪಾಂಕ ಪ್ರಮಾಣವನ್ನು 30 ರಿಂದ 15ಕ್ಕೆ ಇಳಿಸಿ ಹೊಸ ಪಟ್ಟಿ ಪ್ರಕಟಿಸಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 

ಈ ಕುರಿತಂತೆ ನಗರದ ಬಿ.ಕುಮಾರಸ್ವಾಮಿ ಸೇರಿ 18 ಜನರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆ(ಯುಕೆಪಿ) ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವ ದಿಸೆಯಲ್ಲಿ ಗುತ್ತಿಗೆ ಆಧಾರದಲ್ಲಿ 1993-94ರಲ್ಲಿ ಐದು ಜಿಲ್ಲೆಗಳಿಂದ ಒಟ್ಟು 370 ಜನ ಸಹಾಯಕ ಮತ್ತು ಕಿರಿಯ ಅಭಿಯಂತರರು ನೇಮಕ ಮಾಡಿಕೊಳ್ಳಲಾಗಿತ್ತು. ಮುಂದುವರಿದು 1998ರಲ್ಲಿ ಈ ಪಟ್ಟಿಗೆ 43 ಜನರನ್ನು ಹಂಗಾಮಿಯಾಗಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಗುತ್ತಿಗೆ ಮತ್ತು ಹಂಗಾಮಿ ಆಧಾರದಲ್ಲಿ ಕಾರ್ಯ ನಿರ್ವಹಿಸಿದ್ದ ಒಟ್ಟು 417 ಜನರನ್ನು 2002ರಲ್ಲಿ ನೇರವಾಗಿ ಕಾಯಂ ನೇಮಕ ಮಾಡಲಾಗಿತ್ತು.

ಈ ನೇರ ಕಾಯಮಾತಿಯನ್ನು ನಿರುದ್ಯೋಗಿ ಎಂಜಿನಿಯರ್‌ಗಳು ಕೆಎಟಿಯಲ್ಲಿ ಪ್ರಶ್ನಿಸಿದ್ದರು. ಕೆಎಟಿ, ಸರಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ನಿರುದ್ಯೋಗಿ ಎಂಜಿನಿಯರ್‌ಗಳು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ್ದ ವಿಭಾಗೀಯ ನ್ಯಾಯಪೀಠ 2012ರಲ್ಲಿ ಈ ನೇರ ಕಾಯಮಾತಿಯನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News