ಟಿಡಿಆರ್ ಹಗರಣ: ದ್ವಿತೀಯ ದರ್ಜೆ ಸಹಾಯಕ ಹನುಮಂತಯ್ಯ ಅಮಾನತು

Update: 2019-05-03 16:41 GMT

ಬೆಂಗಳೂರು, ಮೇ.3: ದ್ವಿತೀಯ ದರ್ಜೆ ಸಹಾಯಕ ಎಲ್.ಹನುಮಂತಯ್ಯ ಎಂಬುವರನ್ನು ಅಮಾನತುಗೊಳಿಸಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಟಿಡಿಆರ್ ಹಗರಣದಲ್ಲಿ ಸಿಕ್ಕಿಕೊಂಡಿರುವ ಬಿಬಿಎಂಪಿ ಅಧಿಕಾರಿಗೆ ಎಸಿಬಿ ದಾಳಿಯ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಹಿನ್ನೆಲೆ ಎಲ್.ಹನುಮಂತಯ್ಯನನ್ನು ಅಮಾನತುಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಟಿಡಿಆರ್ ನೀಡುವಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಎಸಿಬಿ ಮುಂದಾಗಿತ್ತು. ಆ ಹಿನ್ನೆಲೆ ದಾಳಿ ನಡೆಸಲು ಅನುಮತಿ ಕೋರಿ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಪಾಲಿಕೆಯ ಆಯುಕ್ತರು ಅನುಮತಿ ನೀಡಿ ಪತ್ರ ಬರೆದಿದ್ದರು.

ಆಯುಕ್ತರು ಬರೆದ ಪತ್ರವನ್ನು ಹನುಮಂತಯ್ಯ ರಹಸ್ಯವಾಗಿ ಟಿಡಿಆರ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಿ ಕೃಷ್ಣಲಾಲ್ ಎಂಬುವವರಿಗೆ ನೀಡಿದ್ದಾರೆ ಎನ್ನಲಾಗಿದೆ. ಎಸಿಬಿ ದಾಳಿಯ ವೇಳೆ ಆಯುಕ್ತರು ಎಸಿಬಿಗೆ ಬರೆದ ಪತ್ರ ಪತ್ತೆಯಾಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸಿಬಿ ಪತ್ರ ಬರೆದ ಕಾರಣ, ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್ ಹನುಮಂತಯ್ಯ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News