ಮಕ್ಕಳ ವಿಶಿಷ್ಟ ಪ್ರತಿಭೆಗಳ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ: ಪ್ರೊ.ವೇಣುಗೋಪಾಲ್

Update: 2019-05-03 17:25 GMT

ಬೆಂಗಳೂರು, ಮೇ 3: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲಾ ವಿಭಾಗದ ವತಿಯಿಂದ ಮಕ್ಕಳ ರಂಗಶಿಬಿರ-2019 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ರಂಗಶಿಬಿರವನ್ನು ಉದ್ಘಾಟಿಸಿ, ಈಗಿನ ಮಕ್ಕಳು ತಮ್ಮ ಸೃಜನಶೀಲತೆಯ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಅಗತ್ಯವಾಗಿವೆ. ಆದರೆ, ನಮ್ಮ ಕಾಲದಲ್ಲಿ ಮರಕೋತಿ ಆಟದಂತಹ ಅನೇಕ ಗ್ರಾಮೀಣ ಆಟಗಳಿದ್ದವು. ಈ ಆಟಗಳ ನಡುವೆಯೇ ಬೇಸಿಗೆಕಾಲ ಮುಗಿದು ಹೋಗುತ್ತಿತ್ತು ಎಂದು ತಮ್ಮ ಬಾಲ್ಯದಿನಗಳನ್ನು ನೆನಪಿಸಿಕೊಂಡರು. ಶಿಬಿರದಲ್ಲಿ ನೂರಾರು ಮಕ್ಕಳು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಬೆರೆತು ಕಲಿಯುವ ಅವಕಾಶ ದೊರೆಯುತ್ತದೆ. ಸುಪ್ತವಾಗಿ ಅಡಗಿರುವ ವಿಶಿಷ್ಟ ಪ್ರತಿಭೆಯನ್ನು ರಂಗದ ಮೇಲೆ ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಪ್ರಪಂಚವನ್ನು ಸಕಾರಾತ್ಮಕವಾಗಿ ಎದುರಿಸುವ ಶಕ್ತಿ ವೃದ್ಧಿಸುತ್ತದೆ ಎಂದು ಅವರು ಹೇಳಿದರು.

ಮಕ್ಕಳಿಗೆ ತರಬೇತಿ ನೀಡುವ ಕಾಯಕ ಅತ್ಯಂತ ಸಂತೋಷದ ವಿಷಯವಾದರೂ ತ್ರಾಸದಾಯಕ. ಶಿಬಿರದ ಹೊಣೆ ಹೊತ್ತವರು ಮಕ್ಕಳ ಭದ್ರತೆಗೆ ಹೆಚ್ಚಿನ ಗಮನ ನೀಡಬೇಕು. ಮಕ್ಕಳ ಆಹಾರದ ವಿಷಯದಲ್ಲೂ ಗಮನ ಹರಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ಪೋಷಕರೆ ಮಕ್ಕಳ ಊಟದತ್ತ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದರು.

ಪಠ್ಯ ಹಾಗೂ ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಹೊರ ಬರಲು ರಂಗ ಶಿಬಿರಗಳು ಸಹಕಾರಿಯಾಗಿದೆ. ಇಲ್ಲಿ ಅಂಕ ಗಳಿಕೆಯ ಗೋಜಿಲ್ಲ. ಅನುತ್ತೀರ್ಣವಾಗುವ ಭಯವೂ ಇಲ್ಲ. ವಿವಿಧ ಮನಸ್ಥಿತಿಯ, ವಿವಿಧ ಸಂಸ್ಕೃತಿಯ ಅಪ್ರತಿಮ ಪ್ರತಿಭೆವುಳ್ಳ ಮಕ್ಕಳು ಒಂದೇ ವೇದಿಕೆಯಲ್ಲಿ ಕೂಡಿ ಕಲಿತರೆ ಅವರ ಆತ್ಮವಿಶ್ವಾಸದ ಮಟ್ಟ್ಟ ಮತ್ತಷ್ಟು ಹೆಚ್ಚಲಿದೆ ಎಂದು ಕುಲಸಚಿವ ಪ್ರೊ.ಬಿ.ಕೆ.ರವಿ ಹೇಳಿದರು.

ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಜಾನಪದ, ನೃತ್ಯ, ಯೋಗ, ಹಾಡುಗಾರಿಕೆ, ಕುಸುರಿ ಕಲೆಗಳ ತರಬೇತಿ ನೀಡಲಾಗುತ್ತಿದೆ ಎಂದು ಪ್ರದರ್ಶನ ಕಲಾ ವಿಭಾಗದ ನಿರ್ದೇಶಕ ರಾಮಕೃಷ್ಣಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News