×
Ad

ರೆಸೆಲ್ ಮಾರುಕಟ್ಟೆ ಒತ್ತುವರಿ ತೆರವುಗೊಳಿಸಿದ ಬಿಬಿಎಂಪಿ: ವ್ಯಾಪಾರಿಗಳ ಅಸಮಾಧಾನ

Update: 2019-05-04 22:22 IST

ಬೆಂಗಳೂರು, ಮೇ.4: ರೆಸೆಲ್ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಒತ್ತುವರಿ ಸ್ಥಳಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರವುಗೊಳಿಸಿದೆ.

ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಬಿಬಿಎಂಪಿ ಮಾರುಕಟ್ಟೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಬೆಸ್ಕಾ, ಬಿಡಬ್ಲೂಎಸ್‌ಎಸ್‌ಬಿ, ಪೊಲೀಸ್ ಇಲಾಖೆ, ಬಿಬಿಎಂಪಿ ಮಾರ್ಷಲ್‌ಗಳು, ಸಂಚಾರಿ ಪೊಲೀಸರ ನೆರವಿನಿಂದ ಮಧ್ಯಾಹ್ನದವರೆಗೆ ಸುಮಾರು 500ಕ್ಕೂ ಹೆಚ್ಚು ಅಂಗಡಿಗಳ ಮುಂದೆ ಅನಧಿಕೃವಾಗಿ ಹಾಕಲಾಗಿದ್ದ ಶೆಲ್ಟರ್‌ಗಳು, ನಾಮ ಫಲಕಗಳು, ಸಣ್ಣ ಗೇಟ್‌ಗಳನ್ನು ಕಿತ್ತು ಹಾಕಲಾಯಿತು.

ಹೈಕೋರ್ಟ್ ಸೂಚನೆಯಂತೆ ಒಟ್ಟು 6 ತಂಡಗಳು ಏಕಕಾಲದಲ್ಲಿ ರೆಸೆಲ್ ಮಾರುಕಟ್ಟೆಯ ಬಾರ್ಡ್ ವೇ ರಸ್ತೆ, ಶಿವಾಜಿ ರಸ್ತೆ, ಓಪಿಎಚ್ ರಸ್ತೆ, ರೆಸೆಲ್ ಮಾರುಕಟ್ಟೆ, ಬೋಟಿ ಮಾರುಕಟ್ಟೆ, ಸ್ಟೀಫನ್ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಟಿಪ್ಪರ್‌ಗಳಲ್ಲಿ ತುಂಬಿ ಹೊರ ಸಾಗಿಸಿದರು. ಕಳೆದ ತಿಂಗಳು ಕೆ.ಆರ್.ಮಾರುಕಟ್ಟೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದಂತೆ ರೆಸೆಲ್ ಮಾರುಕಟ್ಟೆಯ ಒಳ ಮತ್ತು ಹೊರ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ ಅನಧಿಕೃತವಾಗಿ ನಿರ್ಮಿಸಿದ್ದ ತಾತ್ಕಾಲಿಕ ಕಟ್ಟಡಗಳು ಮತ್ತು ಶೆಲ್ಟರ್ ಭಾಗಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು.

ಹೆಚ್ಚಿನ ಪೊಲೀಸ್ ಬಂದೋಬಸ್ತ್: ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕೆಲವರು ಪ್ರತಿರೋಧ ತೋರಿದ್ದರಾದ್ದರೂ ಹೈಕೋರ್ಟ್ ಸೂಚನೆಯಂತೆ ಕಾರ್ಯಾಚರಣೆ ನಡೆಸಲಾಗಿದೆ. ಬೇಕಾದಲ್ಲಿ ನ್ಯಾಯಾಲಯದ ಮೊರೆ ಹೋಗಿ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ ಅಂಗಡಿ ಮಾಲಕರು ಮೌನಕ್ಕೆ ಶರಣಾದರು. ಶಿವಾಜಿನಗರ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತು. ಹಾಗಾಗಿ ತೆರವುಗೊಳಿಸುವ ಕಾರ್ಯಾಚರಣೆ ಯಾವುದೇ ಅಹಿತಕರ ಘಟನೆ ಇಲ್ಲದೇ ಆರಂಭವಾಯಿತು.

ವ್ಯಾಪಾರಿಗಳ ಅಸಮಾಧಾನ: ರೆಸೆಲ್ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಇಲ್ಲಿನ ವ್ಯಾಪಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೇನು ರಂಜಾನ್ ಹಬ್ಬದ ಆಚರಣೆ ಆರಂಭವಾಗಲಿದೆ. ಇದೇ ವೇಳೆಯಲ್ಲಿ ಇಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದು ವ್ಯಾಪಾರಿಗಳಿಗೆ ಸಾಕಷ್ಟು ನಷ್ಟ ಉಂಟಾಗಲಿದೆ ಎಂದು ಕಾರ್ಯಾಚರಣೆಯ ಬಗ್ಗೆ ಅತೃಪ್ತಿ ಹೊರ ಹಾಕಿದರು.

ರೆಸಲ್ ಮಾರುಕಟ್ಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಬಿಎಂಪಿ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ ಅಂಗಡಿ ಮಾಲಕರು ತಾವೇ ಸ್ವಯಂ ಪ್ರೇರಿತರಾಗಿ ಒತ್ತುವರಿ ಭಾಗಗಳನ್ನು ತೆರವುಗೊಳಿಸಿದರು. ಅಂಗಡಿಗಳ ಮುಂದೆ ಅನಧಿಕೃತವಾಗಿ ನಿರ್ಮಿಸಿದ್ದ ಭಾಗಗಳನ್ನು ಜೆಸಿಬಿ ಸಹಾಯದಿಂದ ಕಿತ್ತು ಹಾಕಿದ್ದರೆ ಹಾನಿ ಉಂಟಾಗುತ್ತದೆ ಎಂದು ಅಂಗಡಿ ಮಾಲಕರು ತಾವೇ ತೆರವುಗೊಳಿಸಿದರು.

ಲಾಠಿ ಬೀಸಿದ ಪೊಲೀಸರು: ಮೀನು ಮಾರುಕಟ್ಟೆಯಲ್ಲಿ 4 ಅಂಗಡಿಗಳ ಮುಂದೆ ಅಕ್ರಮವಾಗಿ ನಿರ್ಮಿಸಿದ ಭಾಗಗಳನ್ನು ತೆರವುಗೊಳಿಸಲು ಸಿಬ್ಬಂದಿಗಳು ಮುಂದಾದಾಗ ಕೆಲ ವ್ಯಾಪಾರಿಗಳು ಅಡ್ಡಿ ಪಡಿಸಿದರು. ಒಂದು ಹಂತದಲ್ಲಿ ಸಿಬ್ಬಂದಿಗಳು ಮತ್ತು ಮಾಲಕರ ನಡುವೆ ಮಾತಿನ ಚಕಮಕಿಯು ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದರು. ಕೂಡಲೇ ಪೊಲೀಸರು ಲಾಠಿ ಬೀಸಿ ಅಲ್ಲಿಂದ ಜನರನ್ನು ಚದುರಿಸಿದರು. ನಂತರ ಒತ್ತುವರಿ ತೆರವು ಕಾರ್ಯಾಚರಣೆ ಸರಾಗವಾಗಿ ನೇರವೇರಿತು.

ಎಲ್ಲ ಮಾರುಕಟ್ಟೆಗಳ ಒತ್ತುವರಿ ತೆರವು: ಹೈಕೋರ್ಟ್ ನಿರ್ದೇಶನದಂತೆ ಕೆ.ಆರ್. ಮಾರುಕಟ್ಟೆಯಲ್ಲಿ ಒತ್ತುವರಿ ಭಾಗಗಳನ್ನು ತೆರವುಗೊಳಿಸಿದ ಬೆನ್ನಲ್ಲೆ ರೆಸಲ್ ಮಾರ್ಕೆಟ್ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿನ ಒತ್ತುವರಿ ಭಾಗಗಳ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಅಗ್ನಿ ಶಾಮಕ ದಳ ವಾಹನಗಳು, ಸರಾಗವಾಗಿ ಈ ರಸ್ತೆಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗುವುದು. ಅನಂತರ ಮಡಿವಾಳ ಮಾರುಕಟ್ಟೆ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿನ ಒತ್ತುವರಿ ಭಾಗಗಳನ್ನು ತೆಗೆದುಹಾಕಲಾಗುವುದು. ರೆಸೆಲ್ ಮಾರ್ಕೆಟ್ ಎದುರು ಇರುವ ಪಾರ್ಕಿಂಗ್ ಸ್ಥಳವನ್ನು ಖಾಲಿ ಮಾಡಿಸಲಾಗುವುದು ಎಂದು ಮಾರುಕಟ್ಟೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News