ಅನುಭವಗಳೇ ಬರವಣಿಗೆಗೆ ಪ್ರೇರಣೆ: ಆಂಗ್ಲ ಲೇಖಕಿ ಪ್ರೀತಿ ಶೆಣೈ
ಬೆಂಗಳೂರು, ಮೇ 4: ಪ್ರತಿಯೊಬ್ಬ ಲೇಖಕನಿಗೂ ತನ್ನ ಅನುಭವಗಳೆ ಮೊದಲ ಬರಹಗಳಿಗೆ ಪ್ರೇರಣೆಯಾಗಿರುತ್ತದೆ. ತನ್ನ ಬಾಲ್ಯ, ಯೌವ್ವನ, ಶಾಲಾ, ಕಾಲೇಜುಗಳ ಸಂದರ್ಭಗಳಲ್ಲಿ ನಡೆದ ಘಟನೆಗಳನ್ನೆ ಕತೆ, ಕಾದಂಬರಿ, ಕವಿತೆಯ ಮೂಲಕ ಸೃಜನಾತ್ಮಕವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತದೆ ಎಂದು ಆಂಗ್ಲ ಲೇಖಕಿ ಪ್ರೀತಿ ಶೆಣೈ ಅಭಿಪ್ರಾಯಿಸಿದ್ದಾರೆ.
ಶನಿವಾರ ಸಪ್ನ ಬುಕ್ ಹೌಸ್‌ನಲ್ಲಿ ತಮ್ಮ ಕಾದಂಬರಿ ‘ವೇಕ್ ಅಪ್, ಲೈಫ್ ಇಸ್ ಕಾಲಿಂಗ್’ ಕೃತಿಯನ್ನು ಲೋಕಾರ್ಪಣೆ ಮಾಡಿ ಓದುಗರೊಂದಿಗೆ ಸಂವಾದ ನಡೆಸಿದ ಅವರು, ನಾನು ಬರಹಗಾರ್ತಿಯ ಜೊತೆಗೆ ಚಿತ್ರಕಲಾವಿದೆಯೂ ಆಗಿರುವುದರಿಂದ ತನ್ನ ಸುತ್ತಮುತ್ತ ಇರುವ ವಸ್ತುಗಳು, ಬಣ್ಣಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅದನ್ನೆ ಬರಹರೂಪಕ್ಕೆ ಇಳಿಸಲು ಪ್ರಯತ್ನಿಸುತ್ತೇನೆಂದು ತಿಳಿಸಿದರು.
ವೇಕ್ ಅಪ್, ಲೈಫ್ ಇಸ್ ಕಾಲಿಂಗ್ ಕಾದಂಬರಿಯನ್ನು ಬರೆದು ಮುಗಿಸಲು 8ವರ್ಷ ತೆಗೆದುಕೊಂಡಿದ್ದೇನೆ. ಈ ಕೃತಿ ಮನಃಶಾಸ್ತ್ರಿಯ ವಿಷಯವನ್ನಾಧರಿಸಿದ ಕಾರಣ, ಮನಃಶಾಸ್ತ್ರಜ್ಞರನ್ನು ಹಲವು ಸಲ ಭೇಟಿ ಮಾಡಿದ್ದೇನೆ. ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಂಶೋಧನೆ ನಡೆಸಿ ಕಾದಂಬರಿ ರೂಪಕ್ಕೆ ಇಳಿಸಿದ್ದೇನೆ. ಈ ಕೃತಿ ರಚಿಸುವಾಗ ಸಂತಸ ಹಾಗೂ ಸೃಜನಾತ್ಮಕ ಚಿಂತನೆ ನನ್ನೊಳಗೆ ಮೂಡಲು ಕಾರಣವಾಗಿದೆ ಎಂದು ಅವರು ಹೇಳಿದರು.
ನನಗೆ ಬರವಣಿಗೆ ಎನ್ನುವುದು ಫ್ಯಾಷನ್. ಹೀಗಾಗಿ ಪ್ರತಿದಿನ ನನ್ನ ಓದುಗರೊಂದಿಗೆ ನಾನು ಓದಿದ್ದನ್ನು, ನೋಡಿದ್ದನ್ನು, ಚಿಂತಿಸಿದ್ದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಓದುಗರು ಕೂಡ ನನ್ನೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗೆ ಪರಸ್ಪರ ಕಲಿಯುತ್ತಾ, ಓದುತ್ತಾ ಸಾಗುತ್ತಿದ್ದೇವೆ ಎಂದು ಅವರು ತಮ್ಮ ಬದುಕಿನ ದಿನನಿತ್ಯದ ಚಟುವಟಿಕೆಗಳನ್ನು ಹಂಚಿಕೊಂಡರು.