ಶಿಕ್ಷಕಿಯರ ಸಂಘದಿಂದ ವಿವಿಧ ಬೇಡಿಕೆಗಳಿಗೆ ಆಗ್ರಹ
ಬೆಂಗಳೂರು, ಮೇ.4: ಶಿಕ್ಷಕಿಯರ ಸಮಸ್ಯೆಗಳ ಕುರಿತು ಸರಕಾರ ನೇರವಾಗಿ ಚರ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸುಮತಿ, ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಶಿಕ್ಷಕಿಯರಿಗೆ ಅವರದೇ ಆದ ಅನೇಕ ಜಲ್ವಂತ ಸಮಸ್ಯೆಗಳಿವೆ. ಅಂತಹ ಸಮಸ್ಯೆಗಳ ಕುರಿತು ನೇರವಾಗಿ ಸರಕಾರದೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು ಹಾಗೂ ಪರಿಹಾರ ಕಂಡುಕೊಳ್ಳಬೇಕು ಎಂದು ಶಿಕ್ಷಕಿಯರ ಸಂಘ ಒತ್ತಾಯಿಸುತ್ತಿದೆ ಎಂದು ತಿಳಿಸಿದರು.
ಮಹಿಳೆಯರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಶೋಷಣೆ, ಹಿಂಸೆ ಹಾಗೂ ಅಸಮಾನತೆಯ ಒತ್ತಡಗಳು ಅವಳ ಕ್ರಿಯಾಶೀಲ ಬದುಕಿಗೆ ಮಾರಕವಾಗುತ್ತಿವೆ. ಇದರಿಂದಾಗಿ ಮಹಿಳೆಯರ ಮಾನಸಿಕ ಬೆಳವಣಿಗೆಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿದೆ. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆಯೇ ಹೊರತು ಆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಅವಳಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಸಂಘ ಕಾರ್ಯಪ್ರವೃತ್ತವಾಗಿದೆ ಎಂದರು.
ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಸಂದರ್ಭದಲ್ಲಿ ಶಿಕ್ಷಕಿಯರ ಸಮಸ್ಯೆಗಳಿಗೆ ಸ್ಪಂದಿಸಿ ಶಿಕ್ಷಕಿಯರ ಸಂಘಕ್ಕೆ ಮಾನ್ಯತೆ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಾರ್ಯದರ್ಶಿಯವರಿಗೆ ಆದೇಶ ಮಾಡಿದ್ದರು. ಆದರೆ, ಬಹುಸಂಖ್ಯಾತ ಮಹಿಳೆಯರ ಸಂಘಕ್ಕೆ ಸರಕಾರದ ಮಾನ್ಯತೆ ಸಿಕ್ಕರೆ ಪುರುಷ ಪ್ರಾದಾನ್ಯತೆ ಪಡೆದ ಶಿಕ್ಷಕರ ಸಂಘದ ಅಸ್ತಿತ್ವವೇ ಕಳೆದು ಹೋಗುತ್ತದೆ ಎಂಬ ಭಯದಲ್ಲಿ ಸರಕಾರದ ಮೇಲೆ ಒತ್ತಡ ತಂದು ಮಾನ್ಯತೆ ನೀಡದಂತೆ ತಡೆಯುವಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಯಶಸ್ವಿಯಾಗಿದ್ದರು ಎಂದು ವಿಷಾದಿಸಿದರು.
ಪ್ರಮುಖ ಬೇಡಿಕೆಗಳು
* ಲೈಂಗಿಕ ದೂರು ನಿವಾರಣ ಸಮಿತಿ ರಚನೆ
* ಶಿಕ್ಷಕರ ಸದನದಲ್ಲಿ ಒಂದು ಕೊಠಡಿ ನೀಡಬೇಕು
* ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು
* ಪ್ರತಿ ತಿಂಗಲೂ ವೇತನ ನೀಡಬೇಕು