ಇಂದು ಐಪಿಎಲ್ ಲೀಗ್ ಹಂತಕ್ಕೆ ತೆರೆ

Update: 2019-05-04 18:31 GMT

ಮುಂಬೈ, ಮೇ 4: ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್‌ನ ಪ್ಲೇ-ಆಫ್ ಅವಕಾಶ ತೂಗುಯ್ಯೆಲೆಯಲ್ಲಿದ್ದು, ರವಿವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟವನ್ನು ನಡೆಸಲಿದೆ. ಈ ಮೂಲಕ ಈ ವರ್ಷದ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬೀಳಲಿದೆ.

ಮತ್ತೊಂದೆಡೆ, ಮುಂಬೈ ಉತ್ತಮ ಪ್ರದರ್ಶನ ಮುಂದುವರಿಸಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯುವ ವಿಶ್ವಾಸ ದಲ್ಲಿದೆ. ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ವನ್ನು ಮುಖಾಮುಖಿಯಾಗಲಿದೆ. ಪಂಜಾಬ್ ವಿರುದ್ಧ ಶುಕ್ರವಾರ ಜಯ ಸಾಧಿಸಿದ್ದ ಕೆಕೆಆರ್ ಟೂರ್ನಿಯ ಕೊನೆಯ ಲೀಗ್ ಪಂದ್ಯದ ತನಕ ಪ್ಲೇ-ಆಫ್ ಸುತ್ತಿಗೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ. ಒಂದು ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಶನಿವಾರ ರಾತ್ರಿ ಆರ್‌ಸಿಬಿ ವಿರುದ್ಧ ಜಯ ಸಾಧಿಸಿದರೆ, ಕೆಕೆಆರ್ ತನ್ನ ನೆಟ್ ರನ್‌ರೇಟ್ ಹೆಚ್ಚಿಸಿಕೊಳ್ಳಲು ಭಾರೀ ಪ್ರಯತ್ನ ನಡೆಸಬೇಕಾಗುತ್ತದೆ.

4ನೇ ಸ್ಥಾನದಲ್ಲಿರುವ ಹೈದರಾಬಾದ್ ನೆಟ್ ರನ್‌ರೇಟ್ +0.653 ರಷ್ಟಿದೆ. ಇದು 5ನೇ ಸ್ಥಾನದಲ್ಲಿರುವ ಕೆಕೆಆರ್‌ಗಿಂತ(+0.173)ಉತ್ತಮವಾಗಿದೆ. ಒಂದು ವೇಳೆ ಹೈದರಾಬಾದ್ ತಂಡ ಆರ್‌ಸಿಬಿಗೆ ಸೋತರೆ ಕೆಕೆಆರ್ ಪ್ಲೇ-ಆಫ್‌ಗೇರುವ ಅವಕಾಶ ಹೆಚ್ಚಾಗಲಿದೆ.

ಮುಂಬೈ ಒಟ್ಟು 18 ಅಂಕ ಗಳಿಸಿ ಗೆಲುವಿನ ಓಟ ಮುಂದುವರಿಸುವ ಜೊತೆಗೆ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿಂತ ಉತ್ತಮ ನೆಟ್ ರನ್‌ರೇಟ್ ಪಡೆಯಲು ಯತ್ನಿಸಲಿದೆ. ಈಗಾಗಲೇ ಪ್ಲೇ-ಆಫ್‌ಗೆ ತೇರ್ಗಡೆಯಾಗಿರುವ ಮುಂಬೈ ಕಳೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಸೋತಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಹಾರ್ದಿಕ್ ಪಾಂಡ್ಯ 91 ರನ್ ಗಳಿಸಿದ ಹೊರತಾಗಿಯೂ ಗರಿಷ್ಠ ಮೊತ್ತದ ಪಂದ್ಯದಲ್ಲಿ ಮುಂಬೈ ಸೋಲುಂಡಿತ್ತು. ಕೆಕೆಆರ್-ಮುಂಬೈ ಮಧ್ಯೆ ನಡೆಯುವ ಈ ಕೊನೆಯ ಲೀಗ್ ಪಂದ್ಯದ ಫಲಿತಾಂಶ ಮುಂಬೈನ ಅಂಕಪಟ್ಟಿಯ ಸ್ಥಾನ ನಿರ್ಧರಿಸುವ ಜೊತೆಗೆ ಪ್ಲೇ-ಆಫ್ ಎದುರಾಳಿಯನ್ನು ನಿರ್ಧರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News