ಸುಭಾಶ್ಚಂದ್ರ ಬೋಸರು ಗಾಂಧೀಜಿಯವರಿಗೆ ಬರೆದ ಪತ್ರ

Update: 2019-05-04 18:51 GMT
ಸುಭಾಶ್ಚಂದ್ರ ಬೋಸ್, ಗಾಂಧೀಜಿ

ಮಾರ್ಚ್ 31, 1939

ಪ್ರಿಯ ಮಹಾತ್ಮಾಜಿ,

ಪಂತ್‌ರವರ ಠರಾವು(ನಿರ್ಣಯ)ದ ಕುರಿತ ನಿಮ್ಮ ಪ್ರತಿಕ್ರಿಯೆ ಏನೆಂದು ತಿಳಿಸಿದ್ದರೆ ನಿಮಗೆ ಆಭಾರಿಯಾಗಿರುತ್ತಿದ್ದೆ. ಕಾಂಗ್ರೆಸ್‌ನ ತ್ರಿಪುರಿ ಅಧಿವೇಶನದ ಪೂರ್ಣ ಕತೆಯನ್ನು ನೀವು ಕೇಳಿದರೆ , ಅನುಕೂಲಕರ ಸ್ಥಾನದಲ್ಲಿರುವ ನೀವು ನಿಷ್ಪಕ್ಷಪಾತ ನಿಲುವನ್ನು ತಳೆಯಬಹುದಾಗಿದೆ. ಪತ್ರಿಕೆಗಳ ವರದಿಯ ಆಧಾರದಲ್ಲಿ ಹೇಳುವುದಾದರೆ, ಇದುವರೆಗೆ ನಿಮ್ಮನ್ನು ಭೇಟಿಯಾದವರೆಲ್ಲಾ ಪಂತ್‌ರವರ ಠರಾವನ್ನು ಬೆಂಬಲಿಸಿದವರು. ಆದರೆ ಇದರಿಂದ ಸಮಸ್ಯೆಯೇನಿಲ್ಲ. ನಿಮ್ಮನ್ನು ಭೇಟಿಯಾದ ವ್ಯಕ್ತಿ ಯಾರೆಂಬುದನ್ನು ಲೆಕ್ಕಿಸದೆ ನೀವು ವಿಷಯದ ಸರಿಯಾದ ವೌಲ್ಯವನ್ನು ಸುಲಭವಾಗಿ ನಿರ್ಣಯಿಸಬಲ್ಲಿರಿ. ಪಂತ್‌ರ ನಿರ್ಣಯದ ಕುರಿತ ನನ್ನ ಸ್ವಂತ ಅಭಿಪ್ರಾಯವನ್ನು ನೀವು ಸುಲಭವಾಗಿ ಊಹಿಸಬಲ್ಲಿರಿ. ಆದರೆ ನನ್ನ ವೈಯಕ್ತಿಕ ಭಾವನೆಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ. ಯಾಕೆಂದರೆ ಸಾರ್ವಜನಿಕ ಜೀವನದಲ್ಲಿ ನಾವು ಪದೇಪದೇ ನಮ್ಮ ವೈಯಕ್ತಿಕ ಅಭಿಪ್ರಾಯಕ್ಕಿಂತ ಸಾರ್ವಜನಿಕ ಪರಿಗಣನೆಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಈ ಹಿಂದಿನ ಪತ್ರದಲ್ಲಿ ನಾನು ತಿಳಿಸಿದಂತೆ, ಪಂತ್ ಅವರ ನಿರ್ಣಯವು ಕಾಂಗ್ರೆಸ್‌ನಿಂದ ಅನುಮೋದನೆ ಪಡೆದಿರುವುದರಿಂದ ಇದರ ಬಗ್ಗೆ ಸಾಂವಿಧಾನಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಜನರು ಏನಾದರೂ ಭಾವಿಸಲಿ, ಅದಕ್ಕೆ ಬದ್ಧನಾಗಿರುವುದಾಗಿ ನಾನು ಭಾವಿಸುತ್ತೇನೆ. ಈಗ, ನಿರ್ಣಯದ ಬಗ್ಗೆ ನಾನು ಅವಿಶ್ವಾಸ ಹೊಂದಿದ್ದೇನೆ ಮತ್ತು ಈ ಕಾರಣಕ್ಕಾಗಿ ನಾನು ರಾಜೀನಾಮೆ ನೀಡಬೇಕೆಂದು ನೀವು ಭಾವಿಸುತ್ತೀರಾ? ಈ ವಿಷಯದ ಕುರಿತ ನಿಮ್ಮ ಅಭಿಪ್ರಾಯ ನನ್ನ ಮೇಲೆ ಗಣನೀಯ ಪ್ರಭಾವ ಬೀರಲಿದೆ.

***

ಒಂದು ವಿಷಯದ ಬಗ್ಗೆ ಈ ಪತ್ರದಲ್ಲಿ ನಾನು ಉಲ್ಲೇಖಿಸುತ್ತೇನೆ- ಅದು ನಮ್ಮ ಕಾರ್ಯಕ್ರಮದ ಕುರಿತ ಪ್ರಶ್ನೆ. ವಸಂತ ಋತುವಿನಲ್ಲಿ ಯುರೋಪ್‌ನಲ್ಲಿ ಬಿಕ್ಕಟ್ಟು ತಲೆದೋರುತ್ತದೆ ಮತ್ತು ಇದು ಬೇಸಿಗೆಯವರೆಗೂ ಮುಂದುವರಿಯುತ್ತದೆ ಎಂದು ಹಲವಾರು ತಿಂಗಳುಗಳಿಂದ ನನ್ನ ಮಿತ್ರರಿಗೆ ಹೇಳುತ್ತಾ ಬಂದಿದ್ದೇನೆ. ಅಂತರ್‌ರಾಷ್ಟ್ರೀಯ ಪರಿಸ್ಥಿತಿ ಹಾಗೂ ನಮ್ಮ ನೆಲದ ಸ್ಥಿತಿಗತಿಯನ್ನು ಗಮನಿಸಿದ ನನಗೆ ಪೂರ್ಣ ಸ್ವರಾಜ್ಯದ ವಿಷಯದ ಬಗ್ಗೆ ಒತ್ತಡ ಹೇರುವ ಸಮಯ ಬಂದಿದೆ ಎಂದು ಸುಮಾರು 8 ತಿಂಗಳ ಹಿಂದೆಯೇ ಮನವರಿಕೆಯಾಗಿತ್ತು. ನಮ್ಮ ಕೊನೆಯ ನಿರ್ಧಾರವನ್ನು ಬ್ರಿಟಿಷ್ ಸರಕಾರದ ಮುಂದೆ ಇರಿಸುವಲ್ಲಿ ಇನ್ನು ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ. ನೀವು ಹೀಗೆ ಮಾಡಿದರೆ ಹಾಗೂ ಒಡನೆಯೇ ಮುಂದಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡರೆ ಅತೀ ಶೀಘ್ರದಲ್ಲಿ ನಾವು ಪೂರ್ಣ ಸ್ವರಾಜ್ಯ ಪಡೆಯಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ. ಆಗ ಬ್ರಿಟಿಷ್ ಸರಕಾರ ಯಾವುದೇ ಸಂಘರ್ಷಕ್ಕೆ ಎಡೆ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸುತ್ತದೆ ಅಥವಾ ಸಂಘರ್ಷ ಆರಂಭವಾದರೂ ಈಗಿನ ಸಂದರ್ಭದಲ್ಲಿ ಅದು ಸುದೀರ್ಘಾವಧಿಗೆ ವ್ಯಾಪಿಸದು. ನಾವು ಎರಡೂ ಕೈಗಳಲ್ಲಿ ಧೈರ್ಯ ತುಂಬಿಕೊಂಡು ಮುಂದುವರಿದರೆ 18 ತಿಂಗಳ ಒಳಗೆ ನಾವು ಸ್ವರಾಜ್ಯವನ್ನು ಪಡೆಯಲಿದ್ದೇವೆ.

ಈ ಸಂಬಂಧ ಯಾವುದೇ ತ್ಯಾಗಕ್ಕೂ ನಾನು ಸಿದ್ಧ ಎಂಬ ದೃಢವಾದ ನಿಶ್ಚಯ ನನ್ನಲ್ಲಿದೆ. ನೀವು ಹೋರಾಟದ ನೇತೃತ್ವ ವಹಿಸಿದರೆ ನಿಮಗೆ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಸಂತೋಷದಿಂದ ಮುಂದೆ ಬರುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಬೇರೆ ವ್ಯಕ್ತಿ ಅಧ್ಯಕ್ಷನಾದರೆ ಉತ್ತಮವಾಗಿ ಹೋರಾಟವನ್ನು ನಡೆಸಬಹುದು ಎಂದು ನೀವು ಭಾವಿಸುವಿರಾದರೆ ನಾನು ಖುಷಿಯಿಂದಲೇ ಪದತ್ಯಾಗ ಮಾಡುತ್ತೇನೆ. ನಿಮ್ಮ ಆಯ್ಕೆಯ ಕಾರ್ಯಕಾರಿ ಸಮಿತಿಯ ಮೂಲಕ ಕಾಂಗ್ರೆಸ್ ಹೆಚ್ಚು ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತದೆ ಎಂದು ನೀವು ಭಾವಿಸುವಿರಾದರೆ ನಿಮ್ಮ ಆಶಯಕ್ಕೆ ನಾನು ಸಮ್ಮತಿಸುತ್ತೇನೆ. ನಾನು ಹೇಳುವುದಿಷ್ಟೇ, ಈ ನಿರ್ಣಾಯಕ ಘಳಿಗೆಯಲ್ಲಿ ನೀವು ಮತ್ತು ಕಾಂಗ್ರೆಸ್ ಪಕ್ಷ ಎದ್ದು ನಿಂತು ಸ್ವರಾಜ್ಯಕ್ಕಾಗಿ ಹೋರಾಟವನ್ನು ಮುಂದುವರಿಸಬೇಕು. ಸ್ವಯಂ ನಾಶದಿಂದ ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗುವುದಾದರೆ ನಾನು ನನ್ನನ್ನು ಸಂಪೂರ್ಣ ನಾಶ ಮಾಡಿಕೊಳ್ಳಲೂ ಸಿದ್ಧ ಎಂದು ನಿಮ್ಮಲ್ಲಿ ದೃಢವಾಗಿ ಹೇಳುತ್ತಿದ್ದೇನೆ. ಇತ್ತೀಚೆಗೆ ನೀವು ದೇಶದ ಜನತೆಯ ಹೋರಾಟದ ನೇತೃತ್ವ ವಹಿಸಿ ಮುನ್ನಡೆಸಿದ ರೀತಿ ನನಗೆ ಇಷ್ಟವಾಗಲಿಲ್ಲ ಎಂದು ಹೇಳುತ್ತಿರುವುದಕ್ಕೆ ದಯವಿಟ್ಟು ಕ್ಷಮಿಸಿಬಿಡಿ.

***

ರಾಜ್‌ಕೋಟ್ ಒಪ್ಪಂದದ ಷರತ್ತುಗಳ ಬಗ್ಗೆ ನನ್ನಂತಹ ಹಲವಾರು ಜನರು ಸಂಭ್ರಮ ಪಡುವುದಿಲ್ಲ ಎಂದು ನಾನು ಹೇಳಬಯಸುತ್ತೇನೆ. ನಾವು ಹಾಗೂ ನ್ಯಾಷನಲ್ ಪ್ರೆಸ್‌ನವರು ಇದೊಂದು ಭಾರೀ ಗೆಲುವು ಎಂದು ಬಣ್ಣಿಸಬಹುದು, ಆದರೆ ಇದರಲ್ಲಿ ನಮಗಾದ ಲಾಭವೇನು? ಸರ್ ಮಾರಿಸ್ ಗ್ವಾಯರ್ ನಮ್ಮ ಕಡೆಯವರಲ್ಲ ಅಥವಾ ಅವರು ಸ್ವತಂತ್ರ ಏಜೆಂಟರಲ್ಲ. ಅವರು ಸರಕಾರದ ಪ್ರತಿನಿಧಿ. ಅವರನ್ನು ಅಂಪೈರ್ ಆಗಿ ನೇಮಿಸಿರುವುದಕ್ಕೆ ಅರ್ಥವಿದೆಯೇ? ಅವರು ನೀಡುವ ತೀರ್ಪು ನಮ್ಮ ಪರವಾಗಿರಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಒಂದು ವೇಳೆ ಅವರು ನಮ್ಮ ವಿರುದ್ಧ ತೀರ್ಪು ನೀಡಿದರೆ ಆಗ ನಮ್ಮ ಸ್ಥಿತಿ ಏನಾಗಬಹುದು? ನನ್ನ ಪತ್ರ ಸುದೀರ್ಘವಾಗುತ್ತಿದೆ. ಆದ್ದರಿಂದ ನಾನು ಇಲ್ಲಿಗೇ ಮುಗಿಸಬೇಕು. ನಾನು ಹೇಳಿದ್ದರಲ್ಲಿ ಯಾವುದಾದರೂ ವಾಕ್ಯ ತಪ್ಪು ಎಂದು ನಿಮಗೆ ಅನಿಸಿದರೆ ನೀವು ನನ್ನನ್ನು ಕ್ಷಮಿಸುತ್ತೀರಿ ಎಂದು ಭಾವಿಸುತ್ತೇನೆ. ಯಾವಾಗಲೂ ಸತ್ಯ ಮತ್ತು ನೇರ ನುಡಿಯುವ ವ್ಯಕ್ತಿಯನ್ನು ನೀವು ಇಷ್ಟಪಡುತ್ತೀರಿ ಎಂದೂ ನನಗೆ ಗೊತ್ತಿದೆ. ಆದ್ದರಿಂದಲೇ ಈ ರೀತಿಯ ಮುಚ್ಚುಮರೆಯಿಲ್ಲದೆ, ಸುದೀರ್ಘ ಪತ್ರ ಬರೆಯಲು ನನಗೆ ಧೈರ್ಯ ಬಂದಿದೆ. ಗೌರವಪೂರ್ವಕ ಪ್ರಣಾಮಗಳೊಂದಿಗೆ,

                

                 ನಿಮ್ಮ ಪ್ರೀತಿಪಾತ್ರ,

ಸುಭಾಷ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News