ರಾಜಕಾರಣದಲ್ಲಿ ಪರ್ಯಾಯ ಸಾಧ್ಯತೆಗಾಗಿ ಶೋಧ ‘ವರ್ತಮಾನ’

Update: 2019-05-05 03:17 GMT

ತಾರಾ ಭಟ್ ಉಡುಪಿ

ಮೌಲ್ಯಯುತ ಬದುಕಿನ ರಾಜಕಾರಣಿಯಾಗಿ ಶ್ರೀ ವೈ.ಎಸ್.ವಿ.ದತ್ತಾ ಅವರು ತಮ್ಮ ಪ್ರಖರ ಸಮಾಜಮುಖಿ ಚಿಂತನೆಗಳ ಮೂಲಕ ರಾಜ್ಯದ ಜನಮನ ಸೆಳೆದವರು. ತಮ್ಮ ಪ್ರಗತಿಪರ ಚಿಂತನೆಗಳಿಂದ ರಾಜಕೀಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ ದತ್ತಾ ಅವರು ವಿವಿಧೆಡೆಯಲ್ಲಿ ಮಾಡಿದ ಭಾಷಣಗಳು ಹಾಗೂ ಪತ್ರಿಕೆಗಳಲ್ಲಿ ಬರೆದ 14 ಲೇಖನಗಳ ಸಂಗ್ರಹವೇ ‘‘ವರ್ತಮಾನ’’ ಕೃತಿ. ರಾಜಕೀಯ ಕ್ಷೇತ್ರದ ಸಮಕಾಲೀನ ವಿದ್ಯಮಾನಗಳ ಸೂಕ್ಷ್ಮ ಚಿಂತನ-ಮಂಥನ ಇಲ್ಲಿಯ ಬರಹಗಳ ಮೂಲಕ ಓದುಗರಿಗೆ ತಮ್ಮ ಜೀವನ ದೃಷ್ಟಿಯನ್ನು ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತದೆ ಹಾಗೂ ನಾವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಅರ್ಥಮಾಡಿಕೊಳ್ಳಲು ಹೊಸ ಹಾದಿ ಹಿಡಿಯಬೇಕಾದ ವಿಚಾರದ ಬಗ್ಗೆ ಒತ್ತಾಯಿಸುತ್ತದೆ. ಸಾಹಿತ್ಯವನ್ನು ಅವರಷ್ಟು ಓದಿಕೊಂಡ ರಾಜಕಾರಣಿಗಳೇ ಅಪರೂಪವೆನ್ನಬಹುದು. ಮೂಡುಬಿದಿರೆಯಲ್ಲಿ ನಡೆದ ‘‘ಆಳ್ವಾಸ್ ನುಡಿಸಿರಿ’’ ಸಮ್ಮೇಳನದಲ್ಲಿ ‘‘ರಾಜಕಾರಣ ಮತ್ತು ವರ್ತಮಾನದ ತಲ್ಲಣಗಳು’’ಎಂಬ ತಮ್ಮ ಭಾಷಣದಲ್ಲಿ ಅವರು ಹೀಗೆ ಹೇಳುತ್ತಾರೆ.’’ಇದುವರೆಗೆ ಮಾತನಾಡಿದವರು ತಲ್ಲಣ ಎಂಬುದನ್ನು ವ್ಯವಸ್ಥೆಯ ಕೆಟ್ಟ ಬದಲಾವಣೆ ಎಂಬ ಅರ್ಥದಲ್ಲಿ ಬಳಸಿದ್ದಾರೆ.ಆದರೆ ತನ್ನ ದೃಷ್ಟಿಯಲ್ಲಿ ತಲ್ಲಣ ಅಂದರೆ ಒಂದು ಕೆಟ್ಟ ವ್ಯವಸ್ಥೆಯ ಬಗ್ಗೆ ಸಿಡಿದೆದ್ದ ಮಾನಸಿಕ ಪ್ರತಿಕ್ರಿಯೆ : ಪರಿಹಾರಾತ್ಮಕವಾಗಿ ಯೋಚಿಸುವ ಮಾನಸಿಕ ತಯಾರಿ ಎಂಬುದಾಗಿ ಭಾವಿಸಿದ್ದೇನೆ.ಆದರ್ಶದ ಕಡೆಗೆ ಹೋಗಬೇಕಾದ ಮನಸ್ಸಿನ ತೊಳಲಾಟ,ಇಂದಿನ ರಾಜಕಾರಣಿಗಳಿಗೆ ಲೋಭವೆನ್ನುವುದು ‘‘ರೂಲ್ ಆಫ್ ಪೊಲಿಟಿಕಲ್ ಎಕ್ಸಿಸ್ಟೆನ್ಸ್’’ ಆಗಿದೆ. ‘‘ಹಣ ಚೆಲ್ಲು ಚುನಾವಣೆ ಗೆಲ್ಲು ಮತ್ತೆ ಹಣ ಮಾಡು’’ ನಮ್ಮ ಜನತಂತ್ರ ಹೀಗೆ ಆಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಹಾಗೆಯೇ ಬಂಡವಾಳಶಾಹಿ ವಿರೋಧಿ ಚಿಂತಕ, ಭಾರತದಂತಹ ಸಮಾಜದಲ್ಲಿ ಬಂಡವಾಳಶಾಹಿಗಳು ಉಂಟುಮಾಡಿದ ಆರ್ಥಿಕ, ಸಾಂಸ್ಕೃತಿಕ ಅನಾಹುತಗಳ ಕುರಿತು ಅವರಿಗೆ ಭಯಂಕರವಾಗಿ ಕಾಣಿಸಿದೆ. ಮುಖ್ಯ ಮಂತ್ರಿಗಳಿಗೆ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಬರೆದ ಬಹಿರಂಗ ಪತ್ರದಲ್ಲಿ ಬಂಡವಾಳ ಹೂಡಿಕೆ ಅಬ್ಬರ ಮತ್ತು ಯುವ ಜನತೆಗೆ ಉದ್ಯೋಗ ಸೃಷ್ಟಿಯ ಭ್ರಮ ನಿರಸನಗಳ ಬಗ್ಗೆ ತಮ್ಮ ವಸ್ತುನಿಷ್ಠ ವಿಶ್ಲೇಷಣೆಯಿಂದ ಖಚಿತವಾದ ಅಂಕೆ ಸಂಖ್ಯೆಗಳ ಮೂಲಕ ಬಂಡವಾಳಶಾಹಿ ಕಂಪೆನಿಗಳು ಬ್ಯಾಂಕುಗಳಲ್ಲಿ ಅಪಾರ ಸಾಲಗಳಿಂದ ಸುಸ್ತಿದಾರರಾಗಿ ನಮ್ಮ ಆರ್ಥಿಕ ಚಿಂತನೆ ಬೆಳೆಸಿಕೊಂಡಿರುವ ವೈರುಧ್ಯಗಳ ಬಗ್ಗೆ ಗಮನ ಸೆಳೆಯುತ್ತಾರೆ.ಓದುಗರನ್ನು ಗಂಭೀರವಾದ ಜಿಜ್ಞಾಸೆಗೆ ಒಳಪಡಿಸುತ್ತಾರೆ.

                            ವೈ.ಎಸ್.ವಿ. ದತ್ತಾ

ಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡ ವೈ.ಎಸ್.ವಿ. ದತ್ತಾ ಅವರಿಗೆ ಕುಮಾರವ್ಯಾಸ ಇಂದಿಗೂ ಯಾಕೆ ಪ್ರಸ್ತುತ ಎಂಬ ವಿಶಾಲ ಪರಿಪೇಕ್ಷದಲ್ಲಿ ಚರ್ಚೆಗೆ ಒಳಪಡಿಸುವುದರ ಮೂಲಕ ಪರಿಶೀಲನೆಗೆ ಒಡ್ಡುತ್ತಾರೆ.ರಾಜಕೀಯ ವ್ಯವಸ್ಥೆ ಹೇಗಿರಬೇಕೆಂಬುದರ ಬಗ್ಗೆ ಹೇಳುವ ಕುಮಾರವ್ಯಾಸ ಆರ್ಥಿಕ ನೀತಿಯನ್ನು ಪ್ರಸ್ತಾಪಿಸುತ್ತಾನೆ. ಕುಮಾರವ್ಯಾಸ ಅರಮನೆಯ ವಾತಾವರಣದಲ್ಲಿ ಕಾವ್ಯ ರಚನೆ ಮಾಡಿದವನಲ್ಲ, ಬದಲಿಗೆ ಜನರ ಮಧ್ಯೆ ಇದ್ದು ಜನರ ಸ್ವಭಾವ, ನಡವಳಿಕೆ, ವೃತ್ತಿ, ಪ್ರವೃತ್ತಿಗಳನ್ನು ಕಂಡುಂಡವನು. ರಾಜಕೀಯ ವ್ಯವಸ್ಥೆ ಹೇಗಿರಬೇಕೆಂಬುದರ ಬಗ್ಗೆ ಹೇಳುವ ಕುಮಾರವ್ಯಾಸ ಆರ್ಥಿಕ ನೀತಿಯನ್ನು ಪ್ರಸ್ತಾಪಿಸುತ್ತಾನೆ. ‘‘ಕೃಷಿ ಮೊದಲು ಸರ್ವಕ್ಕೆ, ಕೃಷಿಯಿಂದ ಪಸರಿಸುವುದು, ಆ ಕೃಷಿಯನ್ನು ಉದ್ಯೋಗಿಸುವ ಜನಮನ ಪಾಲಿಸುವುದು. ಆ ಜನಪದದ ಜನದಿ ವಸು ತೆರಳುವುದು.ವಸುವಿನಿಂ ಸಾದಿಸುವೊಡೆ ಆವುದು ಆಸಾಧ್ಯವು? ಕೃಷಿ ವಿಹೀನನ ದೇಶವದು ದುರ್ದೇಶ ಕೇಳೆಂದ’’ (ಸಭಾ ಪೂರ್ವ 1ನೇ ಸಂದಿ ಪದ್ಯ 64) ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಸಾಧಕ- ಬಾಧಕಗಳ ಬಗ್ಗೆ ಹೊಸ ತಿದ್ದುಪಡಿ ಚಿಂತನೆ, ರೈತರ ಆತ್ಮಹತ್ಯೆ ಸಾಗಿರುವಾಗ ಆಗಿನ ಕಾಲದಲ್ಲೇ ಕುಮಾರವ್ಯಾಸರ ರೈತ ಪರ ಧೋರಣೆ ಹೇಗೆ ಪ್ರಸ್ತುತ ಎಂದು ಕಟ್ಟಿಕೊಡುವ ರೀತಿ ಇಂದಿನ ರಾಜಕಾರಣಕ್ಕೆ ಹೇಳಿ ನುಡಿಸಿದಂತಿದೆ ಎಂದು ಹೇಳುವದತ್ತಾ ಅವರ ಸೂಕ್ಷ್ಮ ಚಿಂತನೆ ಓದುಗರನ್ನು ತಮ್ಮ ಚಿಂತನೆಯ ಪಥದಲ್ಲಿ ಕರೆದೊ ಯ್ಯುವ ವಿಶಿಷ್ಟತೆ ಬೆರಗು ಮೂಡಿಸುವಂತಹದು. ಸಾಹಿತ್ಯ, ಸಂಸ್ಕೃತಿ,ರಾಜಕಾರಣ ಈ ಮೂರೂ ಕ್ಷೇತ್ರಗಳಲ್ಲಿ ಅಸಾಧಾರಣ ಪಾಂಡಿತ್ಯವಿರುವ ಅವರ ಪ್ರೌಢವಾದ ವಿಶ್ಲೇಷಣೆ ನಮ್ಮ ಮನಸ್ಸನ್ನು ಚಿಂತನೆಗೆ ಚರ್ಚೆಗೆ ಹಚ್ಚಿ ಇಂತಹ ಸಂಗತಿಗಳ ಬಗ್ಗೆ ಮರು ಯೋಚಿಸಲು ನಮಗೆ ಪ್ರೇರಣೆ ನೀಡುತ್ತದೆ.

Writer - ತಾರಾ ಭಟ್ ಉಡುಪಿ

contributor

Editor - ತಾರಾ ಭಟ್ ಉಡುಪಿ

contributor

Similar News