ಸಿಜೆಐ ಗೊಗೊಯಿ ಪ್ರಕರಣ: ಮಾಧ್ಯಮ ವರದಿಯನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯ

Update: 2019-05-05 14:01 GMT

ಹೊಸದಿಲ್ಲಿ,ಮೇ.5: ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ಆಂತರಿಕ ಸಮಿತಿಯ ಮುಖ್ಯಸ್ಥ ನ್ಯಾಯಾಧೀಶ ಎಸ್.ಎ ಬೊಬ್ಡೆಯವರನ್ನು ನ್ಯಾಯಾಧೀಶರಾದ ಆರ್.ಎಫ್ ನಾರಿಮನ್ ಮತ್ತು ಡಿ.ವೈ ಚಂದ್ರಚೂಡ್ ಭೇಟಿಯಾಗಿದ್ದರು ಎಂಬ ಮಾಧ್ಯಮ ವರದಿಯನ್ನು ಸರ್ವೋಚ್ಚ ನ್ಯಾಯಾಲಯ ರವಿವಾರ ತಳ್ಳಿ ಹಾಕಿದೆ.

ಶುಕ್ರವಾರ ಇಬ್ಬರು ನ್ಯಾಯಾಧೀಶರು ನ್ಯಾಯಾಧೀಶ ಎಸ್.ಎ ಬೊಬ್ಡೆಯವರನ್ನು ಭೇಟಿಯಾಗಿದ್ದಾರೆ ಎಂಬ ಮಾಧ್ಯಮ ವರದಿ ಸಂಪೂರ್ಣ ಸುಳ್ಳಾಗಿದೆ ಎಂದು ಶ್ರೇಷ್ಠ ನ್ಯಾಯಾಲಯ ತಿಳಿಸಿದೆ. ಇಂತಹ ವರದಿಯನ್ನು ಪ್ರತಿಷ್ಠಿತ ಪತ್ರಿಕೆಗಳು ವರದಿ ಮಾಡಿರುವುದು ದುರದೃಷ್ಟಕರ ಎಂದು ಸರ್ವೋಚ್ಚ ನ್ಯಾಯಾಲಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಆಂತರಿಕ ಸಮಿತಿ ಸರ್ವೋಚ್ಚ ನ್ಯಾಯಾಲಯ ಇತರ ಯಾವುದೇ ನ್ಯಾಯಾಧೀಶರಿಂದ ಮಾಹಿತಿಗಳನ್ನು ಪಡೆಯದೆ ವಿಚಾರಣೆ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನ್ಯಾಯಾಧೀಶರಾದ ನಾರಿಮನ್ ಮತ್ತು ಚಂದ್ರಚೂಡ್ ನ್ಯಾಯಾಧೀಶ ಬೊಬ್ಡೆಯವರನ್ನು ಭೇಟಿಯಾಗಿ ಈ ಪ್ರಕರಣದಲ್ಲಿ ತ್ರಿಸದಸ್ಯ ಸಮಿತಿ ಒಂದು ಪಕ್ಷದ ಹಿತಾಸಕ್ತಿಗನುಗುಣವಾಗಿ ವಿಚಾರಣೆ ನಡೆಸಬಾರದು ಎಂದು ತಿಳಿಸಿದ್ದಾರೆ ಎಂದು ಪ್ರತಿಷ್ಠಿತ ಪತ್ರಿಕೆ ರವಿವಾರ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News