ಭ್ರಷ್ಟಾಚಾರ: ಇರಾನ್ ಅಧ್ಯಕ್ಷ ರೂಹಾನಿ ಸಹೋದರನಿಗೆ ಜೈಲು

Update: 2019-05-05 17:26 GMT
ಹಸನ್ ರೂಹಾನಿ

ದುಬೈ, ಮೇ 5: ಇರಾನ್‌ನ ನ್ಯಾಯಾಲಯವೊಂದು ದೇಶದ ಅಧ್ಯಕ್ಷ ಹಸನ್ ರೂಹಾನಿಯವರ ಸಹೋದರನಿಗೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ವಿಧಿಸಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ. ಅದೇ ವೇಳೆ, ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ಅಧ್ಯಕ್ಷರ ಬೆಂಬಲಿಗರು ಆರೋಪಿಸಿದ್ದಾರೆ.

‘‘ಕೆಲವು ಆರೋಪಗಳಲ್ಲಿ ಹುಸೈನ್ ಫಿರ್ದೌನ್ ತಪ್ಪಿತಸ್ಥರಾಗಿಲ್ಲ ಎನ್ನುವುದು ಕಂಡುಬಂದಿದೆ. ಅದೇ ವೇಳೆ, ಇತರ ಆರೋಪಗಳಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಂಗ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ಇರ್ನ’ ವರದಿ ಮಾಡಿದೆ.

ಅವರಿಗೆ ಎಷ್ಟು ಅವಧಿಯ ಜೈಲು ವಿಧಿಸಲಾಗಿದೆ ಎನ್ನುವುದು ಗೊತ್ತಾಗಿಲ್ಲ.

ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಈಗಲೂ ಅವಕಾಶವಿರುವುದರಿಂದ, ಅದರ ವಿವರಗಳನ್ನು ನಾನು ನೀಡಲಾರೆ ಎಂದು ನ್ಯಾಯಾಂಗ ಅಧಿಕಾರಿ ತಿಳಿಸಿದರು.

ಅಧ್ಯಕ್ಷರ ಆಪ್ತ ಸಲಹೆಗಾರ ಹಾಗೂ ರಾಜತಾಂತ್ರಿಕ ಫಿರ್ದೌನ್ ಮತ್ತು ಇತರ ಆರು ಆರೋಪಿಗಳ ವಿಚಾರಣೆಯು ಫೆಬ್ರವರಿಯಲ್ಲಿ ಆರಂಭಗೊಂಡಿತ್ತು. ಅವರ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಾಲಯವು ಮಾಹಿತಿ ನೀಡಿರಲಿಲ್ಲ. ಅವರನ್ನು ಮೊದಲು 2017ರಲ್ಲಿ ಬಂಧಿಸಲಾಗಿತ್ತು ಹಾಗೂ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ವಿವೇಚನಾಯುತ ರೂಹಾನಿಗೆ ಕೆಟ್ಟ ಹೆಸರು ತರುವುದಕ್ಕಾಗಿ ತೀವ್ರವಾದಿ ನ್ಯಾಯಾಲಯವು ತೆಗೆದುಕೊಂಡ ಕ್ರಮ ಇದಾಗಿದೆ ಎಂಬುದಾಗಿ ರೂಹಾನಿ ಬೆಂಬಲಿಗರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News