ಫೆಲೆಸ್ತೀನ್-ಇಸ್ರೇಲಿ ಸೈನಿಕರ ಸಂಘರ್ಷ 3ನೇ ದಿನಕ್ಕೆ: ಓರ್ವ ಇಸ್ರೇಲಿ, ಇಬ್ಬರು ಫೆಲೆಸ್ತೀನಿಯರು ಮೃತ್ಯು

Update: 2019-05-05 17:23 GMT

ಗಾಝಾ/ಜೆರುಸಲೇಮ್, ಮೇ 5: ಫೆಲೆಸ್ತೀನಿಯರು ಮತ್ತು ಇಸ್ರೇಲಿ ಸೈನಿಕರ ನಡುವಿನ ಸಂಘರ್ಷ ರವಿವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಗಾಝಾದಿಂದ ಸಿಡಿಸಲಾದ ರಾಕೆಟೊಂದು ಬಡಿದು ಇಸ್ರೇಲ್ ಪ್ರಜೆಯೋರ್ವರು ಮೃತಪಟ್ಟಿದ್ದಾರೆ ಹಾಗೂ ಇಸ್ರೇಲ್ ಸೈನಿಕರು ನಡೆಸಿದ ದಾಳಿಯಲ್ಲಿ ಇಬ್ಬರು ಫೆಲೆಸ್ತೀನ್ ಬಂದೂಕುಧಾರಿಗಳು ಹತರಾಗಿದ್ದಾರೆ.

ವಾಯು ದಾಳಿಯ ಬಗ್ಗೆ ಎಚ್ಚರಿಕೆ ನೀಡುವ ಸೈರನ್ ಮೊಳಗಿದ ಹಿನ್ನೆಲೆಯಲ್ಲಿ, ಶನಿವಾರ ರಾತ್ರಿ ಗಾಝಾ ಸಮೀಪ ವಾಸಿಸುವ ದಕ್ಷಿಣ ಇಸ್ರೇಲ್‌ನ ನಿವಾಸಿಗಳು ಆಶ್ರಯ ಕೇಂದ್ರಗಳಿಗೆ ಧಾವಿಸಿದರು. ರಾತ್ರಿಯ ಆಕಾಶದಲ್ಲಿ ಇಸ್ರೇಲ್‌ ನ ನಿರೋಧಕ ಕ್ಷಿಪಣಿಗಳು ಗಡಿಯಾಚೆಯಿಂದ ಹಾರಿ ಬಂದ ರಾಕೆಟ್‌ಗಳನ್ನು ತುಂಡರಿಸಿದವು.

ಗಾಝಾದಿಂದ ಹಾರಿಸಲಾದ ರಾಕೆಟ್‌ಗಳ ಪೈಕಿ ಒಂದು ಅಶ್ಕೆಲನ್ ನಗರದ ಮನೆಯೊಂದಕ್ಕೆ ಅಪ್ಪಳಿಸಿತು ಹಾಗೂ ಓರ್ವ ವ್ಯಕ್ತಿ ಮೃತಪಟ್ಟರು ಎಂದು ಇಸ್ರೇಲ್ ಪೊಲೀಸರು ಹೇಳಿದ್ದಾರೆ.

ಗಾಝಾದಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಗಳಿಂದಾಗಿ ಕಟ್ಟಡಗಳು ಕಂಪಿಸಿದವು. ಫೆಲೆಸ್ತೀನಿಯರು ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿದರು. ಇಸ್ರೇಲ್ ನಡೆಸಿದ ದಾಳಿಯಲ್ಲಿ ತನ್ನ ಇಬ್ಬರು ಸದಸ್ಯರು ಹತರಾಗಿದ್ದಾರೆ ಎಂದು ಫೆಲೆಸ್ತೀನ್ ‌ನ ಹಮಾಸ್ ಹೇಳಿದೆ.

ಸಂಘರ್ಷ ಮತ್ತಷ್ಟು ಪ್ರಕೋಪಕ್ಕೆ ಹೋಗದಂತೆ ತಡೆಯಲು ಈಜಿಪ್ಟ್ ಮತ್ತು ವಿಶ್ವಸಂಸ್ಥೆಯ ಸಂಧಾನಕಾರರು ಪ್ರಯತ್ನಿಸುತ್ತಿದ್ದಾರೆ.

ಶನಿವಾರದಿಂದ ಹಮಾಸ್ ಮತ್ತು ಇತರ ತೀವ್ರವಾದಿ ಗುಂಪುಗಳು ಇಸ್ರೇಲ್‌ನ ನಗರಗಳು ಮತ್ತು ಗ್ರಾಮಗಳತ್ತ 400ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇದಕ್ಕೆ ಪ್ರತಿಯಾಗಿ, ಗಾಝಾದ ಸುಮಾರು 200 ಸ್ಥಳಗಳನ್ನು ಗುರಿಯಾಗಿಸಿ ಟ್ಯಾಂಕ್ ಕ್ಷಿಪಣಿ ಮತ್ತು ವಾಯು ದಾಳಿಗಳನ್ನು ನಡೆಸಲಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News