ಮೈತ್ರಿ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಮೇ 6: ಪೊಲೀಸ್ ಇಲಾಖೆ ಮೂಲಕ ಪತ್ರಕರ್ತರ ಮೇಲೆ ದೌರ್ಜನ್ಯ ಹಾಗೂ ಮೈತ್ರಿ ಸರಕಾರದ ಧೋರಣೆ ವಿರೋಧಿಸಿ ಬಿಜೆಪಿ ನಾಯಕರು ಇಂದಿಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಪರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿರುವುದರಿಂದ ಕೆಂಡಾಮಂಡಲವಾಗಿರುವ ಮೈತ್ರಿ ಸರಕಾರದ ನಾಯಕರು ಪತ್ರಕರ್ತರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಆರ್.ಅಶೋಕ್, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮದ ಮೇಲೆ ದೌರ್ಜನ್ಯವೆಸಗುವುದು ಒಂದು ರೀತಿಯಲ್ಲಿ ಗೂಂಡಾ ಸಂಸ್ಕೃತಿಯಾಗಿದೆ. ಆದರೆ, ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಗೃಹ ಸಚಿವರು ಮನಗಾಣಬೇಕು ಎಂದು ದೂರಿದರು.
ವೀರಶೈವ ಧರ್ಮದ ವಿರುದ್ಧ ಹೇಳಿಕೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಕ್ರಮ ಕೈಗೊಳ್ಳಲಾಗದ ಗೃಹ ಸಚಿವರು ಕೇವಲ ಪತ್ರಕರ್ತರನ್ನು ಗುರಿಯಾಗಿರಿಸಿಕೊಂಡು ಮಾಡುತ್ತಿರುವ ಕೆಲಸ ಅವಿವೇಕತನದಿಂದ ಕೂಡಿದೆ ಎಂದ ಅವರು, ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ದೌರ್ಜನ್ಯ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಸಂಸದ ಪಿ.ಸಿ. ಮೋಹನ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.