×
Ad

ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ: ಬಿಜೆಪಿ ಅಧಿಕಾರಾವಧಿಯಲ್ಲಿ ಸರಕಾರಿ ಆದೇಶ- ಎಚ್.ಡಿ.ರೇವಣ್ಣ

Update: 2019-05-06 20:24 IST

ಬೆಂಗಳೂರು, ಮೇ 6: ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡುವುದಕ್ಕೆ ಸಂಬಂಧಿಸಿದಂತೆ ನನ್ನ ಕಾಲದಲ್ಲಿ ಯಾವುದೇ ಒಪ್ಪಂದ ಆಗಿಲ್ಲ. 2011ರಲ್ಲಿ ಬಿಜೆಪಿ ಸರಕಾರದ ಆಡಳಿತವಿದ್ದಾಗ ಈ ಬಗ್ಗೆ ಸರಕಾರಿ ಆದೇಶ ಹೊರಡಿಸಲಾಗಿದೆ. 2013ರಲ್ಲಿ ಟೆಂಡರ್ ಆಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಬ್ಯಾಂಕ್, ಯುಕೋ ಬ್ಯಾಂಕ್ ಹಾಗೂ ಎಡಿಬಿ ಬ್ಯಾಂಕ್‌ನಿಂದ 3 ಸಾವಿರ ಕೋಟಿ ರೂ.ಸಾಲ ಪಡೆದು ಈ ಕಾಮಗಾರಿ ಮಾಡಲಾಗಿದ್ದು, ಮೂರು ವರ್ಷಕ್ಕೆ ಟೋಲ್ ಸಂಗ್ರಹದ ಒಪ್ಪಂದ ಆಗಿದೆ ಎಂದರು.

ಒಪ್ಪಂದದ ಅವಧಿ ಮುಕ್ತಾಯವಾಗಿರುವ ಟೋಲ್‌ಗಳಲ್ಲಿ ಹೊಸದಾಗಿ ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲಾಗುವುದು. 17 ಟೋಲ್ ರಸ್ತೆಗಳಲ್ಲಿ 7 ಟೋಲ್ ಟೆಂಡರ್ ಕರೆದು ಒಪ್ಪಂದ ನೀಡಲಾಗಿದೆ. ಇವೆಲ್ಲ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದ. ನಾವು ಮೈಸೂರು-ಬೆಂಗಳೂರು ರಸ್ತೆಗೆ ಸರ್ವೀಸ್ ರೋಡ್ ಮಾಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

1400 ಕೋಟಿ ರೂ.ಗಳ ಕಾಮಗಾರಿಯನ್ನು ಟೆಂಡರ್ ಇಲ್ಲದೆ ಕೊಡಲಾಗಿದೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ, ನನ್ನ ಅವಧಿಯಲ್ಲಿ ಯಾವುದೇ ತುಂಡು ಗುತ್ತಿಗೆ ಕೊಟ್ಟಿಲ್ಲ. ಯಾವುದೇ ಅಕ್ರಮವೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ರೇಲ್ವೆ ವಿಭಾಗದ ಇಂಜಿನಿಯರ್‌ರನ್ನು ಬಿಡಿಎ ಇಂಜಿನಿಯರ್ ಆಗಿ ನೇಮಕ ಮಾಡಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ. ಬಿಡಿಎಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ನನ್ನ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಉಪ ಮುಖ್ಯಮಂತ್ರಿ ಪರಮೇಶ್ವರ್ ಬಳಿ ಕೇಳಿ ಎಂದರು.

ರಾಜ್ಯ ಸರಕಾರದ ಎಲ್ಲ ಕೆಲಸಗಳಲ್ಲೂ ರೇವಣ್ಣ ಮೂಗು ತೂರಿಸುತ್ತಾರೆ ಎಂದು ಯಡಿಯೂರಪ್ಪ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪಗೆ ಅರಳು-ಮರಳು. ಪಾಪ ಅವರಿಗೆ ವಯಸ್ಸಾಗಿದೆ. ಅದಕ್ಕೆ ಏನೇನೋ ಮಾತನಾಡುತ್ತಾರೆ. ಅವರು ದೊಡ್ಡವರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಕೇಳಿದ ಇಂಜಿನಿಯರ್‌ಗಳನ್ನೆ ಹಾಕಿಕೊಟ್ಟಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News