ವಿಟಾಮಿನ್ ಡಿ ಸೇವನೆಯ ಸೂಕ್ತ ವಿಧಾನವಿಲ್ಲಿದೆ

Update: 2019-05-06 15:43 GMT

ಸನ್‌ಶೈನ್ ವಿಟಾಮಿನ್ ಎಂದು ಕರೆಯಲಾಗುವ ಡಿ ವಿಟಾಮಿನ್ ನಮ್ಮ ಶರೀರವು ಕ್ಯಾಲ್ಸಿಯಂ ಹೀರಿಕೊಳ್ಳಲು ಮಾತ್ರವಲ್ಲ, ಸ್ನಾಯುಗಳ ಮತ್ತು ನರಗಳ ಸೂಕ್ತ ಕಾರ್ಯ ನಿರ್ವಹಣೆಗೂ ಅಗತ್ಯವಾಗಿದೆ. ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳುವುದರಿಂದ ಹಿಡಿದು ಶ್ವಾಸಕೋಶಗಳು,ಯಕೃತ್ತು ಮತ್ತು ಹೃದಯನಾಳೀಯ ರೋಗಗಳು,ಮಧುಮೇಹ ಮತ್ತು ನರರೋಗಗಳ ಅಪಾಯಗಳನ್ನು ಕಡಿಮೆಗೊಳಿಸುವವರೆಗೆ ಹಲವಾರು ಲಾಭಗಳನ್ನು ಅದು ನೀಡುತ್ತದೆ.

ಆದರೆ ವಿಟಾಮಿನ್ ಡಿ ಕೊರತೆಯು ಇಂದು ವಿಶ್ವವ್ಯಾಪಿ ಆರೋಗ್ಯ ಸಮಸ್ಯೆಯಾಗಿದೆ. ವಿಟಾಮಿನ್ ಡಿ ಕೊರತೆಯು ಮಧುಮೇಹ,ಹೃದಯನಾಳೀಯ ರೋಗಗಳು, ಗ್ರಹಣಶಕ್ತಿ ಕುಂಠಿತ, ಸ್ವರಕ್ಷಿತ ರೋಗಗಳು, ಗರ್ಭಾವಸ್ಥೆಯಲ್ಲಿ ಸಮಸ್ಯೆಗಳು ಮತ್ತು ಕೆಲವು ವಿಧಗಳ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

ಸೂರ್ಯನ ಬಿಸಿಲು ಡಿ ವಿಟಾಮಿನ್‌ನ ಪ್ರಮುಖ ಮೂಲವಾಗಿದೆ. ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳದವರು,ವಿಟಾಮಿನ್ ಡಿ ಒಳಗೊಂಡಿರುವ ಆಹಾರಗಳ ಸೇವನೆಯಿಂದ ವಂಚಿತರಲ್ಲಿ ಸಹಜವಾಗಿಯೆ ಈ ವಿಟಾಮಿನ್‌ನ ಕೊರತೆಯಿರುತ್ತದೆ. ಇದೇ ಕಾರಣದಿಂದ ವಿಟಾಮಿನ್ ಡಿ ಪೂರಕಗಳ ಸೇವನೆಯು ಅಗತ್ಯವಾಗುತ್ತದೆ.

  ವಿಟಾಮಿನ್‌ಗಳನ್ನು ಮನಸ್ಸಿಗೆ ಬಂದಂತೆ ಸೇವಿಸುವಂತಿಲ್ಲ. ಅದೇ ರೀತಿ ವಿಟಾಮಿನ್ ಡಿ ಸೇವನೆಗೂ ಸೂಕ್ತ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಎರಡು ಗ್ಲಾಸ್ ನೀರು ತೆಗೆದುಕೊಳ್ಳಿ. ಒಂದಕ್ಕೆ ಒಂದು ಚಮಚ ಸಕ್ಕರೆ ಮತ್ತು ಇನ್ನೊಂದಕ್ಕೆ ಒಂದು ಚಮಚ ಎಣ್ಣೆ ಸೇರಿಸಿ. ಏನಾಗುತ್ತದೆ? ಸಕ್ಕರೆಯು ನೀರಿನಲ್ಲಿ ಪೂರ್ಣವಾಗಿ ಕರಗುತ್ತದೆ ಮತ್ತು ಅದನ್ನು ಸೇವಿಸಬಹುದು. ಇನ್ನೊಂದು ಗ್ಲಾಸಿನಲ್ಲಿ ಬೆರಸಿದ್ದ ಎಣ್ಣೆ ಸಣ್ಣ ಹನಿಗಳಾಗಿ ವಿಭಜನೆಗೊಂಡು ನೀರಿನ ಮೇಲೆ ತೇಲುತ್ತದೆ ಮತ್ತು ಈ ನೀರು ಎಸೆಯಲಿಕ್ಕಷ್ಟೇ ಯೋಗ್ಯವಾಗಿರುತ್ತದೆ.

ಇದೇ ರೀತಿ ನಮ್ಮ ಶರೀರದಲ್ಲಿ ಕೊಬ್ಬಿನಲ್ಲಿ ಕರಗಬಲ್ಲ ಮತ್ತು ನೀರಿನಲ್ಲಿ ಕರಗಬಲ್ಲ,ಹೀಗೆ ಎರಡು ವಿಧಗಳ ವಿಟಾಮಿನ್‌ಗಳಿರುತ್ತವೆ. ನೀರಿನಲ್ಲಿ ಕರಗಬಲ್ಲ ವಿಟಾಮಿನ್‌ಗಳನ್ನು ನಮ್ಮ ಶರೀರವು ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಅವುಗಳ ವಿಸರ್ಜನೆಯೂ ಸುಲಭ. ವಿಟಾಮಿನ್ ಬಿ ಮತ್ತು ಸಿ ಇವುಗಳಲ್ಲಿ ಸೇರಿವೆ. ಕೊಬ್ಬಿನಲ್ಲಿ ಕರಗಬಲ್ಲ ವಿಟಾಮಿನ್‌ಗಳನ್ನು ನಮ್ಮ ಶರೀರದಲ್ಲಿಯ ಕೊಬ್ಬು ಹೀರಿಕೊಳ್ಳುತ್ತದೆ ಮತ್ತು ಇವು ಕೊಬ್ಬು ಕೋಶಗಳಲ್ಲಿ ಸಂಗ್ರಹಗೊಳ್ಳುತ್ತವೆ. ವಿಟಾಮಿನ್ ಎ,ಡಿ,ಇ ಮತ್ತು ಕೆ ಇವುಗಳಲ್ಲಿ ಸೇರಿವೆ. ವಿಟಾಮಿನ್ ಡಿ ಕೊಬ್ಬಿನಲ್ಲಿ ಕರಗಬಲ್ಲ ವಿಟಾಮಿನ್ ಆಗಿದೆ ಮತ್ತು ನಮ್ಮ ಕರುಳಿನಲ್ಲಿ ಕೊಬ್ಬಿನ ಉಪಸ್ಥಿತಿಯಲ್ಲಿ ಮಾತ್ರ ಹೀರಿಕೊಳ್ಳಲ್ಪಡುತ್ತದೆ.

  ವಿಟಾಮಿನ್ ಡಿ ಕೊರತೆ ಕಂಡು ಬಂದರೆ ವೈದ್ಯರು ಪೂರಕಗಳ ಸೇವನೆಗೆ ಶಿಫಾರಸು ಮಾಡುತ್ತಾರೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದು ಮುಖ್ಯವಾಗಿದೆ.

ದಿನದ ದೊಡ್ಡ ಊಟದೊಂದಿಗೆ: ದಿನದ ದೊಡ್ಡ ಊಟದೊಂದಿಗೆ ವಿಟಾಮಿನ್ ಡಿ ಸೇವಿಸಿದರೆ ನಿಮ್ಮ ರಕ್ತದಲ್ಲಿಯ ವಿಟಾಮಿನ್ ಡಿ ಮಟ್ಟವು ಶೇ.50ರಷ್ಟು ಹೆಚ್ಚುತ್ತದೆ. ದಿನದ ದೊಡ್ಡ ಊಟವು ಈ ವಿಟಾಮಿನ್‌ನ ಹೀರುವಿಕೆಗೆ ನೆರವಾಗುವ ಹೆಚ್ಚಿನ ಪ್ರಮಾಣದ ಕೊಬ್ಬುಗಳನ್ನು ಒಳಗೊಂಡಿರುತ್ತದೆ

ಹಾಲಿನೊಂದಿಗೆ: ದಿನದ ದೊಡ್ಡ ಊಟದೊಂದಿಗೆ ಸಾಧ್ಯವಾಗದಿದ್ದರೆ ಹಾಲಿನೊಂದಿಗೆ ವಿಟಾಮಿನ್ ಡಿ ಪೂರಕಗಳನ್ನು ಸೇವಿಸಬಹುದು. ಹಾಲಿನಲ್ಲಿರುವ ಮ್ಯಾಗ್ನೀಷಿಯಂ ಕೊಬ್ಬಿನಲ್ಲಿ ಕರಗಬಲ್ಲ ವಿಟಾಮಿನ್‌ಗಳ ಹೀರುವಿಕೆಯನ್ನು ಉತ್ತೇಜಿಸುತ್ತದೆ.

ಕ್ಯಾಲ್ಸಿಯಂ ಮತ್ತು ರಂಜಕವನ್ನು ಬಳಸಿಕೊಳ್ಳಲು ನಮ್ಮ ಶರೀರಕ್ಕೆ ನೆರವಾಗುವ ವಿಟಾಮಿನ್ ಡಿ ನಮ್ಮ ರೋಗನಿರೋಧಕ ವ್ಯವಸ್ಥೆಯನ್ನೂ ಹೆಚ್ಚಿಸುತ್ತದೆ. ಜಡ ಜೀವನಶೈಲಿಯಿಂದಾಗಿ ಮತ್ತು ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳದಿರುವುದರಿಂದ ನಾವು ವಿಟಾಮಿನ್ ಡಿ ಕೊರತೆಯಿಂದ ಬಳಲುತ್ತಿದ್ದರೆ ಅಚ್ಚರಿಯೇನಿಲ್ಲ. ವಿಟಾಮಿನ್ ಡಿ ಪೂರಕಗಳನ್ನು ಸೇವಿಸುವಾಗ ಈ ವಿಷಯಗಳು ಗಮನದಲ್ಲಿರಲಿ...

   ವಿಟಾಮಿನ್ ಡಿ ಪೂರಕಗಳನ್ನು ಹೆಚ್ಚಿನ ಔಷಧಿಗಳಂತೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಗಳ ನಡುವೆ ಸೇವಿಸಕೂಡದು. ಈ ಪೂರಕಗಳು ಇತರ ಹಲವಾರು ಔಷಧಿಗಳೊಂದಿಗೆ ಅಂತರ್‌ಕ್ರಿಯೆಗೊಳಗಾಗಬಹುದು. ಉದಾಹರಣೆಗೆ ಕಾರ್ಟಿಕೊಸ್ಟಿರಾಯ್ಡಿಗಳು ಕ್ಯಾಲ್ಸಿಯಂ ಹೀರುವಿಕೆಯನ್ನು ಕಡಿಮೆಗೊಳಿಸುತ್ತವೆ ಮತ್ತು ಇದರಿಂದಾಗಿ ವಿಟಾಮಿನ್ ಡಿ ಚಯಾಪಚಯಕ್ಕೆ ವ್ಯತ್ಯಯವುಂಟಾಗುತ್ತದೆ. ಹೀಗಾಗಿ ನೀವು ಔಷಧಿಗಳನ್ನು ಸೇವಿಸುತ್ತಿದ್ದರೆ ಪೂರಕಗಳ ಸೇವನೆಯನ್ನು ಆರಂಭಿಸುವ ಮುನ್ನ ಈ ವಿಷಯವನ್ನು ನಿಮ್ಮ ವೈದ್ಯರಿಗೆ ತಿಳಿಸಿ.

ವಿಟಾಮಿನ್ ಡಿ ಪೂರಕಗಳು ಕ್ಯಾಪ್ಸೂಲ್‌ಗಳು,ಚೀಪುವ ಮಾತ್ರೆಗಳು,ದ್ರವಗಳು ಮತ್ತು ಹನಿಗಳು ಸೇರಿದಂತೆ ವಿವಿಧ ರೂಪಗಳಲ್ಲಿ ಲಭ್ಯವಿವೆ. ನಿಮಗೆ ಯಾವುದು ಸೂಕ್ತ ಎನ್ನುವ ಬಗ್ಗೆ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News