×
Ad

ಜಿ.ಎಸ್.ಎಸ್ ಇಂದಿಗೂ ಪ್ರಸ್ತುತ: ನರಹಳ್ಳಿ ಬಾಲಸುಬ್ರಮಣ್ಯ

Update: 2019-05-06 21:35 IST

ಬೆಂಗಳೂರು, ಮೇ 6: ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ, ಅಸೂಯೆಯ ವಾತಾವರಣದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರ ಸಾಹಿತ್ಯಕ ಧ್ವನಿ ಅತಿಹೆಚ್ಚು ಪ್ರಸ್ತುತವಾದುದು ಎಂದು ಲೇಖಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಹೇಳಿದ್ದಾರೆ.

ಸೋಮವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಜಿ.ಎಸ್.ಎಸ್. ಅವರ ಸಾಹಿತ್ಯದ ವಿಭಿನ್ನ ನೆಲೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮಾಜಿಕ ರಚನೆ ವಿನ್ಯಾಸ ರೂಪಿಸುವ ಹಾಗೂ ಗಾಢವಾಗಿ ಪ್ರಭಾವ ಬೀರುವ ಶಕ್ತಿಗಳಾದ ಧರ್ಮ, ರಾಜಕೀಯ ಎರಡೂ ಭ್ರಷ್ಟಗೊಂಡಿವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯವಷ್ಟೇ ದಾರಿ ದೀಪವಾಗುವ ಭರವಸೆ ನೀಡುತ್ತದೆ. ನಮ್ಮ ಸಂದರ್ಭಕ್ಕೆ ಜಿ.ಎಸ್.ಎಸ್‌ರ ಸಾಹಿತ್ಯ ಭರವಸೆಯ ಬೆಳ್ಳಿಗೆರೆಯಾಗಿತ್ತು. ಇಂದಿಗೂ ಅವರು ಪ್ರಸ್ತುತವಾಗಿದ್ದಾರೆ ಎಂದರು.

ಜಿಎಸ್‌ಎಸ್ ಹಳೆಯ ತಲೆಮಾರಿನವರೊಂದಿಗೆ ಅರ್ಥಪೂರ್ಣ ಸಂಬಂಧ ಸೃಷ್ಟಿಸಿ, ಹೊಸ ತಲೆಮಾರಿಗೆ ಪ್ರೇರಕ ಶಕ್ತಿಯಾಗಿ ಮಾಡಿದ ಕೆಲಸ ಕನ್ನಡ ಸಂಸ್ಕೃತಿ ಚರಿತ್ರೆಯ ಉಜ್ವಲ ಅಧ್ಯಾಯವಾಗಿದೆ. ಕಾವ್ಯ ಮತ್ತು ವಿಮರ್ಶೆ ಆಸಕ್ತಿ ಕ್ಷೇತ್ರವಾಗಿಸಿಕೊಂಡಿದ್ದ ಅವರು, ಬಾಲ್ಯದಿಂದಲೇ ಕಾವ್ಯವನ್ನು ಕುವೆಂಪು, ತಿನಂಶ್ರೀ ಒಡನಾಟದಿಂದ ವಿಮರ್ಶೆ ಕಲಿತಿದ್ದೆ ಎಂದು ಹೇಳುತ್ತಿದ್ದರು ಎಂದು ನರಹಳ್ಳಿ ತಿಳಿಸಿದರು.

ಜಿ.ಎಸ್.ಶಿವರುದ್ರಪ್ಪ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು. ಅದರ ಸಲುವಾಗಿ ಅವರ ಇಡೀ ಕಾವ್ಯದಲ್ಲಿ ಮಾತೃ ವಾತ್ಸಲ್ಯ ಹಾಸುಹೊಕ್ಕಾಗಿದ್ದು, ತಾಯಿಯ ಹುಡುಕಾಟ ಕಾಣಿಸುತ್ತಿತ್ತು, ಮಾತೃ ವಾತ್ಸಲ್ಯದ ಹುಡುಕಾಟ ಪ್ರಧಾನ ವಸ್ತುವಾಗಿರುತ್ತಿತ್ತು ಎಂದು ನುಡಿದರು.

ಬೆಂಕಿ ಬೆಳಕಾಗುವುದು ಹೇಗೆ ಎಂಬುದು ಜಿಎಸ್‌ಎಸ್ ಪ್ರಧಾನ ಕಾಳಜಿಯಾಗಿತ್ತು. ಸುತ್ತಮುತ್ತ, ಮನದೊಳಗೆ, ಹೊರಗೆ ಸುಡುವ ಬೆಂಕಿ ಬದುಕಿಗೆ ಬೆಳಗಾಗುವುದು ಹೇಗೆ ಎಂಬುದು ಅವರ ಪ್ರಧಾನ ರೂಪಕವಾಗಿದೆ. ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಂಚೋಣ, ಸಂಶಯ, ಅನುಮಾನ, ದ್ವೇಷದಿಂದ ಸುಡುತ್ತಿರುವ ವಾತಾವರಣದಲ್ಲಿ ಪ್ರೀತಿ ಹಂಚುವುದು ಹೇಗೆ ಎಂಬುದು ಅವರ ಕವನದ ಆಶಯವಾಗಿದೆ ಎಂದು ಹೇಳಿದರು.

ಸಂವೇದನಾಶೀಲ ಮನಸ್ಸೊಂದು ಸುತ್ತಮುತ್ತ ನಡೆಯುವ ಘಟನೆಗಳನ್ನು ಅನುಭವಿಸುವ ನೈತಿಕ ಸಂಕಟ ಬಹಳ ಮುಖ್ಯ. ಅಸಹಾಯಕತೆ ಸಂಕಟವಲ್ಲ, ನೋವಿನ ವಿಷಾಧ ಎಂದ ಅವರು, ಕಳೆದ 3-4 ತಿಂಗಳಿನಿಂದ ದೇಶದಲ್ಲಾಗುತ್ತಿರುವ ಸ್ಥಿತಿ ನೋಡಿದರೆ ಸಂವೇದನಾಶೀಲ ಮನಸ್ಸು ಎದುರಿಸುತ್ತಿರುವ ಸವಾಲು ಅರ್ಥವಾಗುತ್ತದೆ. ಎಂತಹವರನ್ನೋ ನೋಡುತ್ತಿದ್ದೇವೆ, ಏರಬಾರದ ಕಡೆ ಏರಿ, ಇಳಿಯಬಾರದೆಡೆಗೆ ಇಳಿದು ಎಲ್ಲವನ್ನೂ ಕೆಡಿಸುತ್ತಿರುವುದು ಕಾಣುತ್ತಿದ್ದೇವೆ ಎಂದರು.

ಜಿಎಸ್‌ಎಸ್‌ಗೆ ಚರಿತ್ರೆಯ ಬಗೆ ಅಪಾರ ಆಸಕ್ತಿಯಿತ್ತು. ಆದರೆ, ಇಂದಿನ ಭಾರತದ ಸಂದರ್ಭದಲ್ಲಿ ಚರಿತ್ರೆಯ ಬಹಳಷ್ಟು ಪುರಾಣವಾಗಿ ಮಾಡಲಾಗಿದೆ. ಅದೀಗ ಪಾರಾಯಣವಾಗಿ ರೂಪಾಂತರವಾಗಿದೆ. ಅದನ್ನು ಭಜನೆ ಮಾಡುವ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದ ಅಸಮಾಧಾನ ವ್ಯಕ್ತಪಡಿಸಿದ ಅವರು, ಹೊಗಳಿಕೆ ತೆಗಳಿಕೆ ಮೀರಿ ಭಾಷೆ ಬಳಕೆ ಮಾಡುವುದು ಸಮಾಜ ಹಾಗೂ ಸಾಹಿತಿಗಳು ಕಲಿಯಬೇಕು ಎಂದು ತಿಳಿಸಿದರು.

ವಸಾಹತು ಶಾಹಿಯಿಂದ ಪೂರ್ವ ರಚನೆ ಜತೆ ವರ್ತಮಾನಕ್ಕೆ ಅರ್ಥಪೂರ್ಣವಾದ ಸಂಬಂಧ ಸಾಧ್ಯವಾಗದ ಹಾಗೆ ಮಾಡಿಬಿಟ್ಟಿದೆ. ಕಳೆದ 2-3 ಶತಮಾನಗಳ ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಚಿಂತಕರಿಗೆ ಪರಂಪರೆಯ ಜತೆ, ವಸಾಹತು ಪೂರ್ವ ರಚನೆಗೆ ಜತೆ ಸಂಬಂಧವಿಲ್ಲದ ವಾತಾವರಣ ಸೃಷ್ಟಿಯಾಗಿದೆ. ಆದರೆ, ಪರಂಪರೆಯ ತಿಳುವಳಿಕೆ, ವರ್ತಮಾನದ ಅನುಸಂದಾನದ ಎಚ್ಚರಿಕೆಯ ನೆಲೆಯಲ್ಲಿ ಜಿಎಸ್‌ಎಸ್ ವಿಮರ್ಶೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ವಿಮರ್ಶಕ ಡಾ.ಬಸವರಾಜ ಕಲ್ಗುಡಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಡಾ.ಎಂ.ಎಸ್.ಆಶಾದೇವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News