ಮಗುವಿನ ಶವ ಹೂತಿಟ್ಟ ಪ್ರಕರಣ: ಸಿಐಡಿ ತನಿಖೆ ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2019-05-06 16:15 GMT

ಬೆಂಗಳೂರು, ಮೇ 6: ಕೆಂಗೇರಿ ಉಪನಗರ ಬಳಿಯ ಸಂರಕ್ಷಣಾ ಅನಾಥಾಶ್ರಮದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಗು ಶವವನ್ನು ಹೂತಿಟ್ಟ ಆರೋಪ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.

ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅನುಮಾನಾಸ್ಪದ ಮಗು ಸಾವು ಪ್ರಕರಣವನ್ನು ಕೆಂಗೇರಿ ಪೊಲೀಸರು ಸೂಕ್ತ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ, ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿ ಅಥವಾ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ವಹಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ(ಎಸ್‌ಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಡಾ.ಉಷಾ ನೇತೃತ್ವದ ತಂಡಕ್ಕೆ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕೆಂಗೇರಿ ಉಪನಗರದ ಸಂರಕ್ಷಣಾ ಅನಾಥಾಶ್ರಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದ್ದ 6 ಮಕ್ಕಳನ್ನು ರಕ್ಷಣೆ ಮಾಡಿ ಸರಕಾರಿ ಬಾಲಮಂದಿರಕ್ಕೆ ಬಿಟ್ಟಿದ್ದಾರೆ. ನೊಂದ ಮಕ್ಕಳ ವಿಚಾರಣೆ ನಡೆಸಿದಾಗ ಅನಾಥಾಶ್ರಮದ ಮುಖ್ಯಸ್ಥ ಜಗನ್ನಾಥ ಪ್ರತಿದಿನ ಲೈಂಗಿಕ ದೌರ್ಜನ್ಯ, ಹಲ್ಲೆ ಮಾಡಿರುವುದು ತಿಳಿದು ಬಂದಿದೆ. ಜತೆಗೆ ಮಗು ಶವ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜಗನ್ನಾಥ ವಿರುದ್ಧ ಕೆಂಗೇರಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಕಲಂ 7 ಮತ್ತು 8ರಂತೆ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆ ಕಲಂ 42ರಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಐಪಿಸಿ ಸೆಕ್ಷನ್ ಸೇರಿಸಿಲ್ಲ. ಇದರಿಂದ, ಆರೋಪಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಇಲ್ಲಿ ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತಿದೆ.

ಮಗು ಶವ ಹೂತಿದ್ದಾರೆಂದು ನೊಂದ ಬಾಲಕಿ ಹೇಳಿದರೂ ಪೊಲೀಸರು ಲಘುವಾಗಿ ಪರಿಗಣಿಸಿದ್ದಾರೆ. ಮಕ್ಕಳ ಪಾಲಕರು ಯಾರೆಂಬುದು ಗೊತ್ತಿಲ್ಲ. ಆಶ್ರಮಕ್ಕೆ ಕರೆತಂದವರು ಯಾರೆಂಬುದೂ ತಿಳಿದಿಲ್ಲ. ಮಕ್ಕಳ ಕಳ್ಳಸಾಗಾಣೆ ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕಾಗಿ ಪ್ರಕರಣವನ್ನು ಸಿಐಡಿ ಅಥವಾ ಎಸ್‌ಐಟಿ ತನಿಖೆಗೆ ವಹಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾ.ಹಂಚಾಟಿ ಸಂಜೀವಕುಮಾರ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News