ಸೌರವ್, ಜೋಶ್ನಾಗೆ ಸಿಂಗಲ್ಸ್ ಪ್ರಶಸ್ತಿ

Update: 2019-05-06 18:35 GMT

ಕೌಲಾಲಂಪುರ, ಮೇ 6: ಏಶ್ಯನ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ಸೌರವ್ ಘೋಷಾಲ್ ಹಾಗೂ ಜೋಶ್ನಾ ಚಿನ್ನಪ್ಪ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದರು. ಈ ಮೂಲಕ ರವಿವಾರ ಭಾರತಕ್ಕೆ ಸ್ಮರಣೀಯ ದಿನವಾಗಿ ಪರಿಣಮಿಸಿತು.

ಮಹಿಳೆಯರ ಸಿಂಗಲ್ಸ್‌ನ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಜೋಶ್ನಾ ಚಿನ್ನಪ್ಪ ಹಾಂಕಾಂಗ್‌ನ ಅಗ್ರ ಶ್ರೇಯಾಂಕದ ಆಟಗಾರ್ತಿ ಅನ್ನಿ ಔರನ್ನು 11-5, 8-11, 11-6, 11-6 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಅಗ್ರ ಶ್ರೇಯಾಂಕದ ಹಾಗೂ ಕಳೆದ ವರ್ಷ ಫೈನಲ್‌ಗೆ ತಲುಪಿದ್ದ ಘೋಷಾಲ್ ಈ ಬಾರಿ ಎಚ್ಚರಿಕೆಯ ಆಟವಾಡಿದರು. ಪುರುಷರ ವಿಭಾಗದ ಫೈನಲ್‌ನಲ್ಲಿ ಹಾಂಕಾಂಗ್‌ನ ನಾಲ್ಕನೇ ಶ್ರೇಯಾಂಕದ ಲಿಯೊ ಔ ಚುನ್ ಮಿಂಗ್‌ರನ್ನು 11-9, 11-2, 11-8 ನೇರ ಗೇಮ್‌ಗಳಿಂದ ಸದೆ ಬಡಿದರು.

ಜೋಶ್ನಾ ಪಾಲಿಗೆ ಇದು ಸ್ಮರಣೀಯ ಪಂದ್ಯವಾಗಿದೆ. ಕಳೆದ ತಿಂಗಳು ನಡೆದಿದ್ದ ಮಕಾವು ಓಪನ್‌ನಲ್ಲಿ ಅನ್ನಿ ಅವರು ಜೋಶ್ನಾರನ್ನು ನೇರ ಗೇಮ್‌ಗಳಿಂದ ಸೋಲಿಸಿದ್ದರು. ಜೋಶ್ನಾ ವಿರುದ್ಧ ಆಡಿದ್ದ 20ನೇ ಪಂದ್ಯದಲ್ಲಿ 12ನೇ ಗೆಲುವು ದಾಖಲಿಸಿದ್ದರು.

2017ರ ಸೆಪ್ಟಂಬರ್‌ನ ಬಳಿಕ ಹಾಂಕಾಂಗ್ ಇಂಟರ್‌ನ್ಯಾಶನಲ್ ಓಪನ್‌ನಲ್ಲಿ ಜೋಶ್ನಾ ಹಾಂಕಾಂಗ್ ಆಟಗಾರ್ತಿಯರ ಎದುರು ಯಶಸ್ಸಿನ ಸವಿ ಉಂಡಿರಲಿಲ್ಲ. ರವಿವಾರ ನಡೆದ ಫೈನಲ್‌ನಲ್ಲಿ ತನ್ನ ಹಿಂದಿನ ಎಲ್ಲ ವೈಫಲ್ಯವನ್ನು ಮೆಟ್ಟಿ ನಿಂತು ಅಪೂರ್ವ ಪ್ರದರ್ಶನ ನೀಡಿದರು. ಜೋಶ್ನಾ ಎರಡನೇ ಗೇಮ್‌ನ್ನು 8-11ರಿಂದ ಸೋತಾಗ ಭಾರತೀಯ ಪಾಳಯದಲ್ಲಿ ಆತಂಕ ಮನೆಮಾಡಿತ್ತು. 2ನೇ ಗೇಮ್ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಜೋಶ್ನಾ ಮೂರು ಹಾಗೂ 4ನೇ ಗೇಮ್‌ನ್ನು 11-6 ಅಂತರದಿಂದ ವಶಪಡಿಸಿಕೊಂಡು ಪ್ರಶಸ್ತಿ ಎತ್ತಿಹಿಡಿದರು.

 ‘‘ನಾನು ಫೈನಲ್‌ನಲ್ಲಿ ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದ ತೃಪ್ತಿಯಿದೆ. ಈ ಹಿಂದೆ ನಾನು ಅನ್ನಿ ವಿರುದ್ಧ ಹಲವು ಪಂದ್ಯಗಳಲ್ಲಿ ಸೋತಿದ್ದೆ. ಹೀಗಾಗಿ ಈ ಸಲ ಸಂಪೂರ್ಣ ಸಜ್ಜಾಗಿ ಬಂದಿದ್ದೆ. ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಭಾರತ ಪರ  ಆಡುವುದು ಯಾವಾಗಲೂ ಹೆಮ್ಮೆಯ ವಿಚಾರ. ಸೌರವ್ ಘೋಷಾಲ್‌ರೊಂದಿಗೆ ಈ ವರ್ಷದ ಏಶ್ಯನ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದಕ್ಕೆ ಪುಳಕಿತಗೊಂಡಿದ್ದೇನೆ. ನನಗೆ ಬೆಂಬಲ ನೀಡಿದ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು’’ ಎಂದು ಪಂದ್ಯದ ಬಳಿಕ ಜೋಶ್ನಾ ಪ್ರತಿಕ್ರಿಯಿಸಿದರು.

 ಪುರುಷರ ವಿಭಾಗದಲ್ಲಿ ಸೌರವ್ ಘೋಷಾಲ್ ಎದುರಾಳಿ ಆಟಗಾರನಿಗೆ ಯಾವ ಹಂತದಲ್ಲೂ ತಿರುಗೇಟು ನೀಡಲು ಅವಕಾಶ ನೀಡದೇ ಸುಲಭ ಗೆಲುವು ದಾಖಲಿಸಿದರು. ಹಾಂಕಾಂಗ್ ಆಟಗಾರ ಮೊದಲ ಹಾಗೂ ಮೂರನೇ ಗೇಮ್‌ನಲ್ಲಿ ಒಂದಷ್ಟು ಪ್ರತಿರೋಧ ಒಡ್ಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News