2008ರ ನಂತರ ದೇಶದಲ್ಲಿ ನಡೆದ ಹಲವು ಸ್ಫೋಟಗಳ ಸೂತ್ರಧಾರ ಮುರಳಿ: ಎಟಿಎಸ್

Update: 2019-05-07 11:42 GMT

ಮುಂಬೈ, ಮೇ 7: ಪತ್ರಕರ್ತೆ ಗೌರಿ ಲಂಕೇಶ್, ವಿದ್ವಾಂಸ ಎಂ.ಎಂ. ಕಲಬುರ್ಗಿ ಹಾಗೂ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ್ ಪನ್ಸಾರೆ ಅವರ ಹತ್ಯೆ ಪ್ರಕರಣದ ಸೂತ್ರಧಾರ ಔರಂಗಾಬಾದ್ ಮೂಲದ ಬಲಪಂಥೀಯ ಕಾರ್ಯಕರ್ತ ಎಂ.ಡಿ. ಮುರಳಿ ಆಗಿದ್ದಾನೆಂದು ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಎಸ್) ಆರೋಪಿಸಿದೆ.

ಈತ 2008ರಿಂದ ಹಲವು ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನಲ್ಲದೆ, ಹಲವು ಸ್ಫೋಟ ಪ್ರಕರಣಗಳ ಹಿಂದಿನ ಸೂತ್ರಧಾರನಾಗಿದ್ದನೆಂದೂ ಎಟಿಎಸ್ ಕಂಡುಕೊಂಡಿದೆ ಎಂದು indianexpress.com ವರದಿ ಮಾಡಿದೆ.

ಸನಾತನ ಸಂಸ್ಥಾ ಬೆಂಬಲಿಗ ಎನ್ನಲಾದ ವೈಭವ್ ರಾವತ್ ನ ನಲಸೋಪಾರ ನಿವಾಸಕ್ಕೆ ಎಟಿಎಸ್ ಆಗಸ್ಟ್ 2018ರಲ್ಲಿ ದಾಳಿ ನಡೆಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಸಂದರ್ಭ ಮುರಳಿ ಹೆಸರು ಕೇಳಿ ಬಂದಿತ್ತು. ನಂತರ ಸನಾತನ ಸಂಸ್ಥಾ ಬೆಂಬಲಿಗರು ಎನ್ನಲಾದ ಸುಧನ್ವ ಗೊಂಧಲೇಕರ್, ಶರದ್ ಕಲಸ್ಕರ್, ಅವಿನಾಶ್ ಪವಾರ್ ಹಾಗೂ ಶ್ರೀಕಾಂತ್ ಪಂಗರ್ಕರ್ ಅವರ ಬಂಧನವಾಗಿತ್ತಲ್ಲದೆ ಅವರ ನಿವಾಸಗಳಿಂದ ಶಸ್ತಾಸ್ತ್ರಗಳನ್ನೂ ವಶ ಪಡಿಸಿಕೊಳ್ಳಲಾಗಿತ್ತು ಎಂದು indianexpress.com ವರದಿ ತಿಳಿಸಿದೆ.

ಇವರ ವಿಚಾರಣೆ ವೇಳೆ ಇವರು ಗೌರಿ ಲಂಕೇಶ್ ಹಾಗೂ ಇತರ ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿ ಬೇಕಾದವರೆಂದು ತಿಳಿದು ಬಂದಿತ್ತು. ಆಗ ಅವರು ತಮಗೆ ಮುರಳಿ ಬಗ್ಗೆ ಗೊತ್ತು, ಆದರೆ ಆತನನ್ನು ನೋಡಿಲ್ಲ, ಆತನ ಸಂದೇಶಗಳನ್ನು ಅಮೋಲ್ ಕಾಳೆ ಎಂಬಾತ ತಿಳಿಸುತ್ತಿದ್ದನೆಂದು ಹೇಳಿದ್ದರು. ನಂತರ ಗೌರಿ ಲಂಕೇಶ್ ಪ್ರಕರಣದಲ್ಲಿ ಕಾಳೆ ಬಂಧನವಾಗಿತ್ತು.

ನಂತರ ಎಲ್ಲಾ ಐದು ಮಂದಿ ಬಂಧಿತರ ಕಸ್ಟಡಿಯನ್ನು ಎಟಿಎಸ್ 20 ದಿನಗಳಿಗೂ ಅಧಿಕ ಕಾಲ ಪಡೆದಾಗ ಮುರಳಿ ಹಲವಾರು ಸಭೆಗಳನ್ನು ನಿಯಮಿತವಾಗಿ ನಡೆಸುತ್ತಿದ್ದ ಎಂಬುದನ್ನು ಬಾಯ್ಬಿಟ್ಟಿದ್ದರು. ಇದೇ ಗುಂಪು 2017ರಲ್ಲಿ ಪುಣೆಯ ಸನ್ ಬರ್ನ್ ಫೆಸ್ಟಿವಲ್ ವೇಳೆ ಬಾಂಬ್ ಸ್ಫೋಟಿಸಲು ಸಂಚು ಹೂಡಿತ್ತು. ಈ ಉತ್ಸವ ಭಾರತೀಯ ಸಂಸ್ಕøತಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ವಿಧ್ವಂಸಕ ಕೃತ್ಯ ನಡೆಸಲು ಅವರು ಯೋಜಿಸಿದ್ದರು.

ಮುರಳಿ ಬಳಸುತ್ತಿದ್ದ ಮೊಬೈಲ್ ಫೋನಿನ ಕರೆ ಮಾಹಿತಿ ವಿವರಗಳನ್ನು ಪೊಲೀಸರು ಕಲೆ ಹಾಕಿದರೂ ಎಲ್ಲಾ ಸಿಮ್ ಬೇರೆಯವರ ಹೆಸರಿನದ್ದೆಂದು ತಿಳಿದು ಬಂದಿತ್ತು. ಆತನ ಬಂಧನಕ್ಕಾಗಿ ಎಟಿಎಸ್ ತಂಡ ಗೋವಾ ಮತ್ತು ಔರಂಗಾಬಾದ್ ಗೆ ತೆರಳಿದ್ದರೂ ಬರಿಗೈಯ್ಯಲ್ಲಿ ವಾಪಸಾಗಿತ್ತು. ಸದ್ಯ ಎಟಿಎಸ್ ಆತನ ಬಗ್ಗೆ ಖಚಿತ ಮಾಹಿತಿಗಾಗಿ ಕಾಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News