ಮಹಾತ್ಮಾ ಗಾಂಧೀಜಿಗೆ ‘ಕಾಂಗ್ರೆಸ್‌ನ ಚಿನ್ನದ ಪದಕ’: ಅಮೆರಿಕ ಸಂಸದೆ ಪ್ರಸ್ತಾಪ

Update: 2019-05-07 17:10 GMT

ನ್ಯೂಯಾರ್ಕ್, ಮೇ 7: ತನ್ನ ಅಹಿಂಸಾ ತತ್ವಗಳಿಂದ ನೆಲ್ಸನ್ ಮಂಡೇಲ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಮುಂತಾದ ಜಾಗತಿಕ ನಾಯಕರನ್ನು ಪ್ರಭಾವಿತಗೊಳಿಸಿದ ಮಹಾತ್ಮಾ ಗಾಂಧೀಜಿಯನ್ನು ಈ ವರ್ಷ ‘ಕಾಂಗ್ರೆಸ್‌ನ ಚಿನ್ನದ ಪದಕ’ದಿಂದ ಗೌರವಿಸಬೇಕು ಎಂದು ಪ್ರಭಾವಿ ಅಮೆರಿಕನ್ ಸಂಸದೆ ಕ್ಯಾರಲಿನ್ ಮ್ಯಾಲನಿ ಹೇಳಿದ್ದಾರೆ.

ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ, ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಅವರಿಗೆ ನೀಡುವುದು ಅಹಿಂಸಾ ಚಳವಳಿಗೆ ಸಲ್ಲಿಸುವ ಶ್ರೇಷ್ಠ ಗೌರವವಾಗುತ್ತದೆ ಎಂದು ನ್ಯೂಯಾರ್ಕ್‌ನ ಸಂಸದೆ ಅಭಿಪ್ರಾಯಪಟ್ಟಿದ್ದಾರೆ.

‘‘ಮಹಾತ್ಮಾ ಗಾಂಧೀಜಿ ನಿಜವಾಗಿಯೂ ಓರ್ವ ಸ್ಫೂರ್ತಿದಾಯಕ ನಾಯಕ ಹಾಗೂ ಐತಿಹಾಸಿಕ ವ್ಯಕ್ತಿ’’ ಎಂದು ಅವರು ಹೇಳಿದ್ದಾರೆ.

ಅಹಿಂಸಾ ಚಳವಳಿಗೆ ಮಹಾತ್ಮಾ ಗಾಂಧೀಜಿ ನೀಡಿರುವ ದೇಣಿಗೆಯನ್ನು ಪರಿಗಣಿಸಿ ಅವರಿಗೆ ಅಮೆರಿಕದ ಸಂಸತ್ತು ಕಾಂಗ್ರೆಸ್ ನೀಡುವ ಚಿನ್ನದ ಪದಕವನ್ನು ಮರಣೋತ್ತರವಾಗಿ ನೀಡಬೇಕೆಂದು ಕೋರುವ ಮಸೂದೆಯೊಂದನ್ನು ಮ್ಯಾಲನಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದರು.

ಅಂತರ್‌ರಾಷ್ಟ್ರೀಯ ಅಹಿಂಸಾ ಫೌಂಡೇಶನ್, ಯುಎಸ್‌ಎ (ಐಎಎಫ್) ಎಂಬ ಸಂಸ್ಥೆಯು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ ‘ಅಹಿಂಸೆ: ಭಗವಾನ್ ಮಹಾವೀರರ ಸಂದೇಶ’ ಎಂಬ ಕಾರ್ಯಕ್ರಮ ಹಾಗೂ ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘‘ಮಹಾತ್ಮಾ ಗಾಂಧಿ ಹಲವು ವಿಧಗಳಲ್ಲಿ ಪರಿವರ್ತನಕಾರರಾಗಿದ್ದರು ಹಾಗೂ ಎಲ್ಲ ಅಮೆರಿಕನ್ನರು ಮತ್ತು ಜಗತ್ತಿನಾದ್ಯಂತವಿರುವ ಜನರಿಗೆ ಸ್ಫೂರ್ತಿಯಾಗಿದ್ದರು’’ ಎಂದು ಮ್ಯಾಲನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News