ವೆಸ್ಟ್ ಇಂಡೀಸ್ ವಿಶ್ವಕಪ್ ತಂಡಕ್ಕೆ ಗೇಲ್ ಉಪ ನಾಯಕ

Update: 2019-05-07 18:55 GMT

ಜಮೈಕಾ, ಮೇ 7: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಈ ತಿಂಗಳಾಂತ್ಯಕ್ಕೆ ಆರಂಭವಾಗಲಿರುವ 50 ಓವರ್‌ಗಳ ಕ್ರಿಕೆಟ್ ವಿಶ್ವಕಪ್‌ಗೆ ಜೇಸನ್ ಹೋಲ್ಡರ್ ವೆಸ್ಟ್‌ಇಂಡೀಸ್‌ನ ನಾಯಕತ್ವವಹಿಸಿಕೊಂಡಿದ್ದು, ಹಿರಿಯ ಕ್ರಿಕೆಟಿಗ, ಆರಂಭಿಕ ದಾಂಡಿಗ ಕ್ರಿಸ್ ಗೇಲ್ ಉಪ ನಾಯಕನಾಗಿ ನೇಮಕಗೊಂಡಿದ್ದಾರೆ.

ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಗೇಲ್‌ರನ್ನು ಉಪ ನಾಯಕನಾಗಿ ನೇಮಕಗೊಳಿಸಿದೆ. 39ರ ಹರೆಯದ ಮಾಜಿ ನಾಯಕ ಗೇಲ್ ಐದನೇ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಕೆರಿಬಿಯನ್ ತಂಡದ ಪರ 289 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿರುವ ಗೇಲ್ 10,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

‘‘ಹಿರಿಯ ಆಟಗಾರನಾಗಿ ನಾಯಕ ಹಾಗೂ ತಂಡದ ಪ್ರತಿಯೊಬ್ಬರಿಗೂ ಬೆಂಬಲ ನೀಡುವುದು ನನ್ನ ಹೊಣೆ. ಇದೊಂದು ಬಹುಶಃ ಅತ್ಯಂತ ದೊಡ್ಡ ವಿಶ್ವಕಪ್ ಆಗಿದ್ದು, ಭಾರೀ ನಿರೀಕ್ಷೆ ಇಡಲಾಗಿದೆ. ವೆಸ್ಟ್‌ಇಂಡೀಸ್ ಜನತೆಗೋಸ್ಕರ ನಾವು ಉತ್ತಮ ಪ್ರದರ್ಶನ ನೀಡಲು ಶಕ್ತರಿದ್ದೇವೆ’’ ಎಂದು ಗೇಲ್ ಪ್ರತಿಕ್ರಿಯಿಸಿದ್ದಾರೆ.

ಐರ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಬಾಂಗ್ಲಾದೇಶ ತಂಡವಿರುವ ತ್ರಿಕೋನ ಸರಣಿಗೆ ವಿಕೆಟ್‌ಕೀಪರ್- ಬ್ಯಾಟ್ಸ್ ಮನ್ ಶೈ ಹೋಪ್ ವಿಂಡೀಸ್‌ನ ಉಪ ನಾಯಕನಾಗಿದ್ದಾರೆ. ಹೋಪ್ 50 ಏಕದಿನ ಪಂದ್ಯಗಳನ್ನಾಡಿದ್ದು, ಐದು ಶತಕಗಳನ್ನು ದಾಖಲಿಸಿದ್ದಾರೆ.

ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ 1975 ಹಾಗೂ 1979ರಲ್ಲಿ ವಿಶ್ವಕಪ್ ಚಾಂಪಿಯನ್ ಆಗಿತ್ತು. ಮೇ 31 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸುವುದರೊಂದಿಗೆ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News